
Mushroom | ಐಐಎಚ್‌ಆರ್ ಹೊಸ ಸಂಶೋಧನೆ: ಅತ್ಯಧಿಕ ಕ್ಯಾಲ್ಸಿಯಂಯುಕ್ತ ಅಣಬೆ ಅಭಿವೃದ್ಧಿ
ಕ್ಯಾನ್ಸರ್, ಅಲ್‌ಝೈಮರ್ ಕಾಯಿಲೆಗಳಿಗೆ ರಾಮಬಾಣವಾಗುವಂತಹ ಅಣಬೆಗಳನ್ನು ಐಐಎಚ್‌ಆರ್ ಸಂಶೋಧಿಸಿದೆ. ಅಧಿಕ ಕ್ಯಾಲ್ಸಿಯಂನೊಂದಿಗೆ ರೋಗ ನಿರೋಧಕ ಅಂಶಗಳನ್ನು ಹೊಂದಿರುವ ಅಣಬೆಗಳನ್ನು ಅಭಿವೃದ್ಧಿಪಡಿಸಿದೆ.
ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನ ಪೋಷಕಾಂಶಗಳ ಕೊರತೆಯಿಂದಾಗಿ ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮಹಿಳೆಯರಲ್ಲಿ ಗರ್ಭಧಾರಣೆ ಸಮಸ್ಯೆ, ಕ್ಯಾನ್ಸರ್, ಮರೆವು ಕಾಯಿಲೆ(ಅಲ್‌ಝೈಮರ್) ಹಾಗೂ ಹೃದಯ ರಕ್ತನಾಳ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ.
ಮನುಕುಲಕ್ಕೆ ಎದುರಾಗಿರುವ ಇಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಎಚ್‌ಆರ್) ಮಹತ್ವದ ಪ್ರಗತಿ ಸಾಧಿಸಿದೆ.
ಕ್ಯಾಲ್ಸಿಯಂ ಕೊರತೆ, ಕ್ಯಾನ್ಸರ್, ಅಲ್‌ಝೈಮರ್ ಕಾಯಿಲೆಗೆ ರಾಮಬಾಣವಾಗುವಂತಹ ಅಣಬೆಗಳನ್ನು ಐಐಎಚ್‌ಆರ್ ಸಂಶೋಧಿಸಿದೆ. ಅಧಿಕ ಕ್ಯಾಲ್ಸಿಯಂನೊಂದಿಗೆ ರೋಗ ನಿರೋಧಕ ಅಂಶಗಳನ್ನು ಹೊಂದಿರುವ ಅಣಬೆಗಳನ್ನು ಅಭಿವೃದ್ಧಿಪಡಿಸಿದೆ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಕಂಡುಬಂದಾಗ ಈ ಅಣಬೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲಿವೆ.
ಅಧಿಕ ಕ್ಯಾಲ್ಸಿಯಂ ಅಣಬೆ
ಗೊಂಚಲು ಮಾದರಿಯ ʼಎಲ್ಮ್ ಆಯಿಸ್ಟರ್' ಅಣಬೆಗಳು ಸಾಮಾನ್ಯ ಅಣಬೆಗಳಿಗಿಂದ ಅತ್ಯಧಿಕ; ಅಂದರೆ ಶೇ.202.27 ರಷ್ಟು ಕ್ಯಾಲ್ಸಿಯಂ ಒಳಗೊಂಡಿರಲಿವೆ. ಹೆಚ್ಚಿನ ಒತ್ತಡದಲ್ಲಿʼಎಲ್ಮ್ ಆಯಿಸ್ಟರ್ʼ ಅಣಬೆಗಳನ್ನು ಬೆಳೆಯುವಂತೆ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಈ ಅಣಬೆಗಳು ಆರಂಭದಲ್ಲಿ ಬೂದು ಬಣ್ಣದಲ್ಲಿರುತ್ತವೆ. ಪಕ್ವವಾದಾಗ ಕಂದು ಬಣ್ಣಕ್ಕೆ ತಿರುಗುತ್ತವೆ. ಕಿವಿರು ಮತ್ತು ಕಾಂಡಗಳು ಬಿಳಿ ಬಣ್ಣ ಹೊಂದಿದ್ದು, ಉತ್ತಮ ರುಚಿ ಹೊಂದಿರುತ್ತವೆ.
25-30 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇವುಗಳನ್ನು 36 ರಿಂದ 48 ಗಂಟೆಗಳವರೆಗೆ ಸಂರಕ್ಷಿಸಬಹುದಾಗಿದೆ. ಭತ್ತದ ಒಣಹುಲ್ಲಿನ ಮೇಲೆ ಈ ಅಣಬೆ ಕೃಷಿ ಮಾಡಬಹುದು. 25-30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 25 ರಿಂದ 30 ದಿನಗಳಲ್ಲಿ ಅಣಬೆ ಬೆಳೆಯಬಹುದಾಗಿದೆ.
ಅಣಬೆ ಮೊಳಕೆಯೊಡೆಯುವುದರೊಂದಿಗೆ ಕೊಯ್ಲು ಆರಂಭವಾಗಲಿದೆ. ತಾಜಾ, ಒಣ ಅಥವಾ ಪುಡಿಯಾಗಿಯೂ ಈ ಅಣಬೆಗಳನ್ನು ಬಳಸಬಹುದಾಗಿದೆ. 20 ರಿಂದ 25 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವ ದೇಶದ ಯಾವುದೇ ಪ್ರದೇಶದಲ್ಲಿ ಬೇಕಾದರೂ ಈ ಅಣಬೆಯ ಕೃಷಿ ಮಾಡಬಹುದಾಗಿದೆ.
ಆಲ್‌ಝೈಮರ್‌ಗೆ ರಾಮಬಾಣ
ಮೆದುಳಿನ ನರ ಕೋಶಗಳು ನಿಷ್ಕ್ರಿಯಗೊಂಡಾಗ ಉಂಟಾಗುವ ಮರೆವಿನ ಕಾಯಿಲೆ (ಆಲ್ಝೈಮರ್)ಗೆ ʼಲಯನ್ಸ್ ಮೇನ್ʼ ಅಣಬೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಅಣಬೆಗಳು ಮನುಷ್ಯನ ನರ ಕೋಶಗಳು ಹಾನಿಗೊಳಗಾಗದಂತೆ ತಡೆಯಲಿವೆ.
ಸಾಮಾನ್ಯವಾಗಿ ಎಲ್ಲಾ ಬಗೆಯ ಅಣಬೆಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಇರಲಿದೆ. ಆದರೆ, ಐಐಎಚ್‌ಆರ್ ಅಭಿವೃದ್ಧಿಪಡಿಸಿರುವ ಹೊಸ ತಂತ್ರಜ್ಞಾನ ಆಧಾರಿತ ಈ ಅಣಬೆಗಳಲ್ಲಿ ಅತಿ ಹೆಚ್ಚು ಪೌಷ್ಟಿಕಾಂಶಗಳು ಇರಲಿವೆ. ನಾರಿನಾಂಶ, ಪೊಟ್ಯಾಸಿಯಂ, ವಿಟಮಿನ್ ಡಿ ಮತ್ತು ಪ್ರೋಟೀನ್‌ಗಳು ಹೆಚ್ಚು ಇರಲಿವೆ.
"ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ 112ಬಗೆಯ ಅಣಬೆಗಳಿವೆ. ಇವುಗಳಲ್ಲಿ 12ಬಗೆಯ ಅಣಬೆಗಳನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಿಂದ ಈ ಅಣಬೆಯ ಬಿತ್ತನೆ ಬೀಜಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ. ಪ್ರತಿ ವರ್ಷ ವಿವಿಧ ಜಾತಿಯ 40-50 ಟನ್ ಅಣಬೆ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆ" ಎಂದು ಐಐಎಚ್‌ಆರ್ ಅಣಬೆ ವಿಭಾಗದ ಹಿರಿಯ ವಿಜ್ಞಾನಿ ಸಿ.ಚಂದ್ರಶೇಖರ್ ತಿಳಿಸಿದ್ದಾರೆ.
ಕ್ಯಾನ್ಸರ್ ತಡೆಯುವ ಅಣಬೆ
ಕ್ಯಾನ್ಸರ್ ಕಾಯಿಲೆ ನಿಯಂತ್ರಣದಲ್ಲಿಡುವ, ಕ್ಯಾನ್ಸರ್ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಾಗೂ ದೇಹದಲ್ಲಿನ ಕೊಬ್ಬಿನಾಂಶ ನಿಯಂತ್ರಿಸುವ ʼಶಿಥಾಕೆʼ ಹೆಸರಿನ ಅಣಬೆಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆ.
ಕೀಮೋಥೆರಪಿಗೆ ಒಳಗಾಗುವ ಕ್ಯಾನ್ಸರ್ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಅಣಬೆಯಲ್ಲಿ ವಿಟಮಿನ್ ಡಿ ಅಂಶ ಹೆಚ್ಚಿಸುವ ಕುರಿತು ಸಂಶೋಧನೆ ನಡೆಯುತ್ತಿದೆ. ಈ ಅಣಬೆ ತಳಿಯ ಅಭಿವೃದ್ಧಿಗೆ ಪೂರಕವಾದ ಸಂಶೋಧನೆಯಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ತೊಡಗಿಸಿಕೊಂಡಿದೆ.