
ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್
ಇ-ಖಾತಾ ತಿರಸ್ಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಕ್ಕೆ ನನ್ನಮೇಲೆ ಸುಳ್ಳು ಆರೋಪ: ಮುನೀಶ್ ಮೌದ್ಗಿಲ್
ಕಳೆದ ಮೂರು ತಿಂಗಳಲ್ಲಿ ಸುಮಾರು 1 ಲಕ್ಷ ಅಂತಿಮ ಇ-ಖಾತಾಗಳನ್ನು ನೀಡಲಾಗಿದೆ. ಇದೇ ಅವಧಿಯಲ್ಲಿ ಸುಮಾರು 25,000 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ಇ-ಖಾತಾ ಅರ್ಜಿಗಳನ್ನು ಅನಗತ್ಯವಾಗಿ ತಿರಸ್ಕರಿಸಿ ನಾಗರಿಕರಿಗೆ ಕಿರುಕುಳ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದರಿಂದಲೇ, ತಮ್ಮ ವಿರುದ್ಧ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಸ್ಪಷ್ಟಪಡಿಸಿದ್ದಾರೆ.
ಜಿಬಿಎ ಅಧಿಕಾರಿಗಳು ಮತ್ತು ನೌಕರರ ಸಂಘವು ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರಕಟಣೆಯ ಮೂಲಕ ತಿರುಗೇಟು ನೀಡಿರುವ ಅವರು, "ತಪ್ಪಿತಸ್ಥ ಅಧಿಕಾರಿಗಳನ್ನು ಹೊಣೆಗಾರಿಕೆಯಿಂದ ರಕ್ಷಿಸುವ ಮತ್ತು ನಾಗರಿಕರ ಹಕ್ಕುಗಳನ್ನು ಕಾಪಾಡಲು ತೆಗೆದುಕೊಂಡ ಕ್ರಮಗಳನ್ನು ದುರ್ಬಲಗೊಳಿಸುವ ದುರುದ್ದೇಶದಿಂದ ಈ ಆರೋಪಗಳನ್ನು ಮಾಡಲಾಗುತ್ತಿದೆ," ಎಂದು ಹೇಳಿದ್ದಾರೆ.
ಘಟನೆಯ ಹಿನ್ನೆಲೆ ಏನು?
ಕಳೆದ ಮೂರು ತಿಂಗಳಲ್ಲಿ ಸುಮಾರು 1 ಲಕ್ಷ ಅಂತಿಮ ಇ-ಖಾತಾಗಳನ್ನು ನೀಡಲಾಗಿದೆ. ಇದೇ ಅವಧಿಯಲ್ಲಿ ಸುಮಾರು 25,000 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಈ ತಿರಸ್ಕೃತ ಅರ್ಜಿಗಳ ಬಗ್ಗೆ 'ವಿಶೇಷ ನಿರಾಕರಣೆ ಲೆಕ್ಕಪರಿಶೋಧನೆ' (Special Rejection Audit) ನಡೆಸಿದಾಗ, ಹಲವು ಅರ್ಜಿಗಳನ್ನು ತಪ್ಪು ಅಥವಾ ಆಧಾರರಹಿತ ಕಾರಣಗಳನ್ನು ನೀಡಿ ತಿರಸ್ಕರಿಸಿರುವುದು ಬೆಳಕಿಗೆ ಬಂದಿದೆ ಎಂದು ಮೌದ್ಗಿಲ್ ತಿಳಿಸಿದ್ದಾರೆ.
ಅಮಾನತಿಗೆ ಶಿಫಾರಸು
"ಇ-ಖಾತಾ ಅರ್ಜಿಗಳನ್ನು ತಪ್ಪಾಗಿ ತಿರಸ್ಕರಿಸುವ ಮೂಲಕ ನಾಗರಿಕರಿಗೆ ಸ್ಪಷ್ಟವಾಗಿ ಕಿರುಕುಳ ನೀಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ, ಅಂತಹ ಕೆಲವು ಕಂದಾಯ ಅಧಿಕಾರಿಗಳ ವಿರುದ್ಧ ಅಮಾನತು ಮತ್ತು ಶಿಸ್ತು ಕ್ರಮ ಕೈಗೊಳ್ಳಲು ನಾನು ಶಿಫಾರಸು ಮಾಡಿದ್ದೆ. ನನ್ನ ಈ ನಿರ್ದಾಕ್ಷಿಣ್ಯ ಕ್ರಮದಿಂದಾಗಿಯೇ, ಅಧಿಕೃತ ಪರಿಶೀಲನೆಯ ಸಮಯದಲ್ಲಿ ನಾನು ಅಪಶಬ್ದಗಳನ್ನು ಬಳಸಿದ್ದೇನೆ ಎಂದು ಸಂಘದ ಮೂಲಕ ಸುಳ್ಳು ಆರೋಪ ಮಾಡಲಾಗುತ್ತಿದೆ," ಎಂದು ಅವರು ವಿವರಿಸಿದ್ದಾರೆ.
ಭ್ರಷ್ಟಾಚಾರ ಸಹಿಸುವುದಿಲ್ಲ
ನಾಗರಿಕ ಸೇವೆಗಳನ್ನು ಒದಗಿಸುವುದು ಆಡಳಿತದ ಪವಿತ್ರ ಕರ್ತವ್ಯ. ಇ-ಖಾತಾ ವ್ಯವಸ್ಥೆಯು ಪಾರದರ್ಶಕ, ನಾಗರಿಕ ಸ್ನೇಹಿ ಮತ್ತು ತೊಂದರೆ ರಹಿತವಾಗಿರಬೇಕು. ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿಯಿಂದ ಭ್ರಷ್ಟಾಚಾರ, ದುಷ್ಕೃತ್ಯ ಅಥವಾ ಕಿರುಕುಳವನ್ನು ಸಹಿಸಲು ಸಾಧ್ಯವಿಲ್ಲ. ತಾವು ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಬದ್ಧರಾಗಿದ್ದು, ಕರ್ತವ್ಯ ನಿರ್ವಹಣೆ ಮುಂದುವರಿಸುವುದಾಗಿ ಮುನೀಶ್ ಮೌದ್ಗಿಲ್ ಹೇಳಿದ್ದಾರೆ.

