Muniratna Case | ಸಚಿವ ಸ್ಥಾನಕ್ಕಾಗಿ ಮಾಜಿ ಸಿಎಂಗೇ ಹನಿಟ್ರ್ಯಾಪ್: ಮುನಿರತ್ನ ವಿರುದ್ಧ ಸಂತ್ರಸ್ತೆ ಗಂಭೀರ ಆರೋಪ
"ಮಾಜಿ ಮುಖ್ಯಮಂತ್ರಿಯನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ. ಮುನಿರತ್ನ ಬಳಿ ಆ ಹನಿಟ್ರ್ಯಾಪ್ ವಿಡಿಯೋ ಇದೆ. ಆ ವಿಡಿಯೋ ತೋರಿಸಿ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿಯೇ ಹಿಂದಿನ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದುಕೊಂಡಿದ್ದರು” ಎಂದು ಸಂತ್ರಸ್ತೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿದ್ದ ಮುನಿರತ್ನ, ಸಚಿವ ಸ್ಥಾನ ಪಡೆಯಲು ಅಂದಿನ ಮುಖ್ಯಮಂತ್ರಿಯನ್ನು ಹನಿಟ್ರ್ಯಾಪ್ ಮಾಡಿ, ಆ ವಿಡಿಯೋ ಬಳಸಿ ಬ್ಲ್ಯಾಕ್‌ಮೇಲ್ ಮಾಡಿದ್ದ ಎಂಬ ಸ್ಫೋಟಕ ಸಂಗತಿಯನ್ನು ಸಂತ್ರಸ್ತೆ ಮಹಿಳೆ ಬಹಿರಂಗಪಡಿಸಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಸಂತ್ರಸ್ತೆ ಮಾಡಿರುವ ಈ ಗಂಭೀರ ಆರೋಪ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಮಹಿಳೆ, “ಈ ಹಿಂದೆ ಮುನಿರತ್ನ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ. ಮುನಿರತ್ನ ಬಳಿ ಮಾಜಿ ಮುಖ್ಯಮಂತ್ರಿಯ ಹನಿಟ್ರ್ಯಾಪ್ ವಿಡಿಯೋ ಇದೆ. ಆ ವಿಡಿಯೋ ತೋರಿಸಿ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿಯೇ ಹಿಂದಿನ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದುಕೊಂಡಿದ್ದರು” ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
“2020ರಲ್ಲಿ ಬಿಜೆಪಿ ಶಾಸಕ ಮುನಿರತ್ನ ಪರಿಚಯವಾಗಿದ್ದರು. ಮಮತಾ, ವೆಂಕಟೇಶ್ ಎಂಬುವರ ಮೂಲಕ ಪರಿಚಯವಾಗಿದ್ದರು. ಶಾಸಕ ಮುನಿರತ್ನ ನನಗೆ ವಿಡಿಯೋ ಕರೆ ಕೂಡ ಮಾಡಿದ್ದಾರೆ. ಒಂದು ದಿನ ಗೋದಾಮಿನ ಬಳಿ ಕರೆದುಕೊಂಡು ಹೋಗಿದ್ದರು. ಅಲ್ಲಿ ನನ್ನನ್ನು ಹೆದರಿಸಿ ಅತ್ಯಾಚಾರ ಮಾಡಿದ್ದಾರೆ. ಅವರ ಕೃತ್ಯಗಳನ್ನು ಸಹಿಸಲಾರದೆ ದೂರು ದಾಖಲಿಸಿದ್ದೇನೆ. ಅವರು ಜಾಮೀನು ಪಡೆದು ಬಂದ ಮೇಲೆ ನನಗೆ ಜೀವ ಭಯ ಇದೆ” ಎಂದು ಸಂತ್ರಸ್ತೆ ಹೇಳಿದ್ದಾರೆ.
ಸದ್ಯ ಮುನಿರತ್ನ ವಿರುದ್ಧದ ಅತ್ಯಾಚಾರ, ಜಾತಿನಿಂದನೆ, ಕೊಲೆಬೆದರಿಕೆ ಹಾಗೂ ಹನಿಟ್ರ್ಯಾಪ್ ಸೇರಿದಂತೆ ವಿವಿಧ ಆರೋಪಗಳ ಕುರಿತು ತನಿಖೆಗೆ ಎಸ್ಐಟಿ ರಚನೆ ಆಗಿದೆ.
“ಒಂದು ದಿನ ಗೋಡೌನ್ ಬಳಿ ಕರೆದಿದ್ದ ಮುನಿರತ್ನ ನನ್ನನ್ನು ಎರಡನೇ ಮಹಡಿಗೆ ಕರೆದುಕೊಂಡು ಹೋಗಿದ್ದರು. ತಬ್ಬಿಕೊಳ್ಳಲು ಬಂದಿದ್ದರು, ಆಗ ದೂರ ತಳ್ಳಿದ್ದೆ. ನೀವು ತಂದೆ ಸಮಾನ ಸರ್, ಬಿಟ್ಟುಬಿಡಿ ಎಂದು ಹೇಳಿದ್ದೆ. ಆಗ ದಿವಾನ್ ಕಾಟ್ ಮೇಲೆ ಕೂರಿಸಿದ್ದರು. ʼನನ್ನನ್ನು ಎಂಎಲ್ಎ ಆಗಿ ನೋಡುತ್ತಿದ್ದೀಯಾ, ನಾನೊಬ್ಬ ಕಾಂಟ್ರಾಕ್ಟರ್ʼ ಎಂದು ಹೇಳಿದ್ದರು. ಅಲ್ಲದೇ ನನ್ನನ್ನು ಹೆದರಿಸಿ ದಿವಾನ್ ಕಾಟ್ ಮೇಲೆಯೇ ಅತ್ಯಾಚಾರ ಎಸಗಿದ್ದರು” ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಅಲ್ಲದೆ, ಮುನಿರತ್ನ ಜಾಮೀನು ಪಡೆದು ಹೊರ ಬಂದರೆ ನನಗೆ ಜೀವ ಭಯ ಇದೆ ಎಂದೂ ಸಂತ್ರಸ್ತೆ ಹೇಳಿದ್ದಾರೆ.
ಈ ಹಿಂದೆ ಹಲವು ರಾಜಕೀಯ ನಾಯಕರ ಹನಿಟ್ರ್ಯಾಪ್ ಮಾಡಿ, ವಿಡಿಯೋ ಮಾಡಿಕೊಂಡು ಅದನ್ನೇ ದಾಳವಾಗಿ ಬಳಸಿ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಹಣಿಯುತ್ತಿದ್ದಾರೆ ಎಂದು ಆರೋಪಿಸಿದ್ದ ಸಂತ್ರಸ್ತೆ, ಇದೀಗ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರನ್ನೇ ಹನಿಟ್ರ್ಯಾಪ್ ಮಾಡಿ ಆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಸಚಿವ ಸ್ಥಾನ ಪಡೆದಿರುವ ಸಂಗತಿಯನ್ನು ಬಹಿರಂಗಪಡಿಸಿದ್ದು, ಹಿಂದಿನ ಸರ್ಕಾರದ ಅವಧಿಯ ಆ ಕೃತ್ಯ ಇಡೀ ಸರ್ಕಾರ ಮತ್ತು ಆ ಸರ್ಕಾರದ ಆಡಳಿತಾತ್ಮಕ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ.
ಈ ನಡುವೆ, ಕೆಲವು ದಿನಗಳ ಹಿಂದೆ ವಕೀಲರೊಬ್ಬರು ಹಿಂದಿನ ಮುಖ್ಯಮಂತ್ರಿಯೊಬ್ಬರ ಲೈಂಗಿಕ ಹಗರಣದ ಸಿಡಿ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದರು. ಆ ಹೇಳಿಕೆಯ ಬೆನ್ನಲ್ಲೇ ಬಿಜೆಪಿಯ ಮಾಜಿ ಮುಖ್ಯಮಂತ್ರಿಯೊಬ್ಬರು ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳ ಮೇಲೆ ನಿರ್ಬಂಧಕಾಜ್ಞೆ ತಂದಿದ್ದರು. ಇದೀಗ ಈ ಮಹಿಳೆ ಹನಿಟ್ರ್ಯಾಪ್ ಪ್ರಕರಣದ ಕುರಿತು ಆರೋಪ ಮಾಡಿದ್ದಾರೆ.
ಅಲ್ಲದೆ, ಸ್ವತಃ ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಅವರು ತಮ್ಮ ಸರ್ಕಾರದ ವಿರುದ್ಧವೇ ಈ ಹಿಂದೆ ಹನಿಟ್ರ್ಯಾಪ್ ಮತ್ತು ಲೈಂಗಿಕ ಸಿಡಿಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಕೆಲವರು ಸಚಿವ ಸ್ಥಾನ ಪಡೆದಿದ್ದಾರೆ ಎಂಬ ಗಂಭೀರ ಆರೋಪವನ್ನು ಕೂಡ ಮಾಡಿದ್ದರು. ಈ ಎಲ್ಲಾ ಆರೋಪಗಳು ಇದೀಗ ಒಂದಕ್ಕೊಂದು ತಾಳೆಯಾಗುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಬಿರುಗಾಳಿ ಎಬ್ಬಿಸುವ ಸೂಚನೆಗಳಿವೆ.