Egg Attack on Muniratna | ತಾವೇ ಹೇಳಿ ಹಲ್ಲೆ ಮಾಡಿಸಿಕೊಂಡ ದಾಳಿ: ಕಾಂಗ್ರೆಸ್‌ ನಾಯಕರ ತಿರುಗೇಟು
x
ಮುನಿರತ್ನ ಹಾಗೂ ದಿನೇಶ್‌ ಗುಂಡೂರಾವ್‌

Egg Attack on Muniratna | ತಾವೇ ಹೇಳಿ ಹಲ್ಲೆ ಮಾಡಿಸಿಕೊಂಡ ದಾಳಿ: ಕಾಂಗ್ರೆಸ್‌ ನಾಯಕರ ತಿರುಗೇಟು

ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರಕರಣ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ಮಧ್ಯೆ ಮೊಟ್ಟೆ ದಾಳಿಯ ಪ್ರಕರಣ ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ.


ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ ಆಡಳಿತ ಪಕ್ಷ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷ ಬಿಜೆಪಿ ಮಧ್ಯೆ ಆರೋಪ- ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಮೊಟ್ಟೆಯಿಂದ ತಲೆಗೆ ಹೊಡೆದ ಪ್ರಕರಣ ಸಂಬಂಧ ನಂದಿನಿ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೂವರನ್ನು ಬಂಧಿಸಲಾಗಿದೆ. ಈ ಮಧ್ಯೆ, ಪ್ರಕರಣ ಕುರಿತಂತೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಬಿಜೆಪಿ ಶಾಸಕರನ್ನು ಗುರಿಯಾಗಿಸಿಕೊಂಡು ದಾಳಿಗೆ ಪ್ರಚೋದಿಸುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಬೆಳಗಾವಿಯಲ್ಲಿ ತಿರುಗೇಟು ನೀಡಿರುವ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಮುನಿರತ್ನ ತಮ್ಮ ಮೇಲಿನ ಆರೋಪಗಳಿಂದ ಜರ್ಜರಿತರಾಗಿದ್ದಾರೆ. ತಾವೇ ಹೇಳಿ ಹಲ್ಲೆ ಮಾಡಿಸಿಕೊಂಡಿರಬಹುದು. ಬಿಜೆಪಿ ಪಕ್ಷ ಡ್ರಾಮಾ ಕಂಪನಿಯ ರೀತಿ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಹಾಗೂ ಶಾಸಕ ಮುನಿರತ್ನ ಪ್ರಕರಣದಲ್ಲಿ ಬಿಜೆಪಿಯವರು ಬಾಯಿಗೆ ಬಂದಂತೆ ಹುಚ್ಚುಚ್ಚಾಗಿ ಆರೋಪ ಮಾಡುತ್ತಿದ್ದಾರೆ. ಕಪೋಕಲ್ಪಿತ ಆರೋಪ ಮಾಡುವುದು ಎಷ್ಟು ಸರಿ, ಕುಸುಮಾ ಅವರ ಬಗ್ಗೆ ವ್ಯಂಗ್ಯವಾಗಿ ಮಾತನಾಡುವುದು ಸರಿಯಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕೆಂಬ ಸ್ಥಿತಿ ಈಗ ಮುನಿರತ್ನಗೆ ಬಂದಿದೆ. ಹಾಗಾಗಿ ಕರುಣೆ ಬರುವ ರೀತಿ ಸನ್ನಿವೇಶ ಸೃಷ್ಟಿಸಿ, ಸುಳ್ಳು ಹೇಳುತಿದ್ದಾರೆ. ಬಿಜೆಪಿಯವರು ಕಲಾವಿದರು. ಜನರಿಗೆ ಇದು ಕೇವಲ ಮನರಂಜನೆಯಷ್ಟೇ, ನಿಜಾಂಶವೇನು ಎಂಬುದು ಜನರಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೂವರ ವಿರುದ್ಧ ಎಫ್‌ಐಆರ್‌ ದಾಖಲು

ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರಕರಣ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮುನಿರತ್ನ ನೀಡಿದ ದೂರಿನ ಮೇರೆಗೆ ಆರೋಪಿಗಳಾದ ವಿಶ್ವನಾಥ, ಕೃಷ್ಣಮೂರ್ತಿ ಮತ್ತು ಚಂದ್ರು ಎಂಬುವರ ವಿರುದ್ಧ ಹತ್ಯೆ ಮಾಡುವ ಉದ್ದೇಶ ಹಾಗೂ ಒಳಸಂಚು, ಹಲ್ಲೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಶಾಸಕ ಮುನಿರತ್ನ ದೂರಿಗೆ ಪ್ರತಿಯಾಗಿ ಆರೋಪಿತರು ಕೂಡ ದೂರು ನೀಡಿದ್ದಾರೆ. ಮುನಿರತ್ನ ಬೆಂಬಲಿಗರೇ ಗುಂಪು ಕಟ್ಟಿಕೊಂಡು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬುಧವಾರ ಕಂಠೀರವ ಸ್ಟುಡಿಯೊ ಸಮೀಪದ ಲಕ್ಷ್ಮಿದೇವಿನಗರದ ಬಿಜೆಪಿ ವಾರ್ಡ್‌ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಸುಶಾಸನ ಕಾರ್ಯಕ್ರಮಕ್ಕೆ ಬರುತ್ತಿದ್ದಾಗ ಶಾಸಕ ಮುನಿರತ್ನ ತಲೆಗೆ ಕಿಡಿಗೇಡಿಗಳು ಮೊಟ್ಟೆಯಿಂದ ದಾಳಿ ನಡೆಸಿದ್ದರು. ನಂದಿನಿ ಲೇಔಟ್‌ ಠಾಣೆ ಪೊಲೀಸರು ಸ್ಥಳದಲ್ಲಿಯೇ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಗುರುವಾರ ಶಾಸಕ ಮುನಿರತ್ನ ದೂರು ನೀಡಿದ ಬಳಿಕ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಮುನಿರತ್ನ ಆರೋಪಕ್ಕೆ ಡಿ.ಕೆ. ಸುರೇಶ್‌ ತಿರುಗೇಟು

ಮೊಟ್ಟೆ ಎಸೆತ ಪ್ರಕರಣದಲ್ಲಿ ತಮ್ಮ ವಿರುದ್ಧ ಆರೋಪ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಂಸದ ಡಿ.ಕೆ. ಸುರೇಶ್‌, ಶಾಸಕ ಮುನಿರತ್ನ ಅವರೇ ತಮ್ಮ ಬೆಂಬಲಿಗರ ಮೂಲಕವೇ ಹಲ್ಲೆ ಮಾಡಿಸಿಕೊಂಡು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಕುಸುಮಾ ಅವರನ್ನು ಆರ್‌.ಆರ್. ನಗರದ ಶಾಸಕಿಯನ್ನಾಗಿ ಮಾಡಲು ಡಿ.ಕೆ.ಸಹೋದರರು ಸಂಚು ರೂಪಿಸಿ, ದುಷ್ಕೃತ್ಯ ನಡೆಸಿದ್ದಾರೆ ಎಂಬ ಆರೋಪ ಸರಿಯಲ್ಲ. ಈ ಬಗ್ಗೆ ಬೆಂಗಳೂರಿಗೆ ಮರಳಿದ ಬಳಿಕ ಉತ್ತರ ನೀಡುತ್ತೇನೆ ಎಂದು ಕಿಡಿಕಾರಿದ್ದಾರೆ.

ಈ ಮಧ್ಯೆ ಶಾಸಕ ಮುನಿರತ್ನ ಮೇಲೆ ಜಾತಿನಿಂದನೆ ಪ್ರಕರಣ ದಾಖಲಿಸಿರುವ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿ, ಮೊಟ್ಟೆಯಲ್ಲಿ ಆಸಿಡ್‌ ತುಂಬುವುದು, ಏಡ್ಸ್ ಸೋಂಕಿತರ ರಕ್ತವನ್ನು ಬೇರೆಯವರಿಗೆ ನೀಡುವ ತಂತ್ರಗಾರಿಕೆಯಲ್ಲಿ ಮುನಿರತ್ನ ಮಾಸ್ಟರ್‌ಮೈಂಡ್‌. ಯಾರಾದರೂ ಮೊಟ್ಟೆಯಲ್ಲಿ ತುಂಬುವುದನ್ನು ನೋಡಿದ್ದೀರಾ, ಒಟ್ಟಾರೆ ಮೊಟ್ಟೆ ಎಸೆತ ಪ್ರಕರಣವನ್ನು ವಿವಾದದ ರೀತಿ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.

Read More
Next Story