ಮುನಿರತ್ನ ಪ್ರಕರಣ | ಆಡಿಯೋ ನನ್ನದೇ ಎಂದು ಸಾಬೀತಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಶಾಸಕ ಮುನಿರತ್ನ
x

ಮುನಿರತ್ನ ಪ್ರಕರಣ | ಆಡಿಯೋ ನನ್ನದೇ ಎಂದು ಸಾಬೀತಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಶಾಸಕ ಮುನಿರತ್ನ


ಕಸ ವಿಲೇವಾರಿ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರುವ ಆಡಿಯೋ ಬಯಲಾದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎರಡು ಎಫ್ಐಆರ್ ಕುರಿತು ಬಿಜೆಪಿ ಶಾಸಕ ಮುನಿರತ್ನ ಪ್ರತಿಕ್ರಿಯಿಸಿದ್ದು, ಆಡಿಯೋ ದನಿ ತನ್ನದೇ ಎಂದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದು ಹೇಳಿದ್ದಾರೆ.

ಕಸ ವಿಲೇವಾರಿ ಗುತ್ತಿಗೆದಾರ ಚಲುವರಾಜು ಎಂಬುವರಿಗೆ ಶಾಸಕ ಮುನಿರತ್ನ ಅವಾಚ್ಯವಾಗಿ ನಿಂದಿಸಿರುವ ಆಡಿಯೋ ಬಯಲಾದ ಬೆನ್ನಲ್ಲೇ, ಮುನಿರತ್ನ ವಿರುದ್ಧ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದ್ದವು.

ಆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮುನಿರತ್ನ, ಆಡಿಯೋ ತೆಗೆದುಕೊಂಡು ಈಗಲೇ ಸ್ಪೀಕರ್ ಕಚೇರಿಗೆ ಚಲುವರಾಜು ಬರಲಿ. ಎರಡು ಸಮುದಾಯ ಸೇರಿ ನನ್ನನ್ನು ಮುಗಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ. ಒಂದು ತಿಂಗಳ ಹಿಂದೆ ಇದೇ ಚಲುವರಾಜು ನನ್ನನ್ನು ಶ್ಲಾಘಿಸಿದ್ದರು. 7-8 ವರ್ಷಗಳಿಂದ ನನ್ನ ಜೊತೆಯಲ್ಲಿದ್ದರು, ಈಗ ನಾನು ಹಣ ಕೇಳ್ತೀನಾ? ರಾಜಕೀಯ ಪಿತೂರಿಯಿಂದ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ತಿಂಗಳ ಹಿಂದೆ ನನ್ನ ಬಳಿ ಬಂದು ಯಾರೋ ಹಲ್ಲೆ ಮಾಡಿದ್ದರು ಅಂದಿದ್ದರು. ನಾನು ಎಲ್ಲೂ ನಾಪತ್ತೆಯಾಗಿಲ್ಲ. ನನ್ನ ಸ್ನೇಹಿತರ ಮೂಲಕ ಭೇಟಿ ಮಾಡಲು ಚಲುವರಾಜು ಯತ್ನಿಸಿದ್ದರು” ಎಂದಿದ್ದಾರೆ.

ನಾನು ಕಾನೂನಿನ ಮೊರೆ ಹೋಗುತ್ತೇನೆ. ನಾನು ಯಾವುದೇ ರೀತಿ ಭ್ರಷ್ಟಾಚಾರ ನಡೆಸಿಲ್ಲ. ಕಾಂಗ್ರೆಸ್ನಲ್ಲಿದ್ದಾಗ ಅವರಿಗೆ ನಾನು ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದೆ. ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟಿದ್ದಕ್ಕೆ ಈಗ ನಾನು ಕೆಟ್ಟವನಾಗಿಬಿಟ್ಟಿದ್ದೇನೆ ಎಂದೂ ಮುನಿರತ್ನ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ.

ವೈಯಾಲಿ ಕಾವಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾದ ಹಿನ್ನೆಲೆ ಶಾಸಕ ಮುನಿರತ್ನಗೆ ಬಂಧನ ಭೀತಿ ಎದುರಾಗಿದೆ. ನಾಪತ್ತೆಯಾಗಿರುವ ಶಾಸಕ ಮುನಿರತ್ನಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮುನಿರತ್ನ ಚಲನವಲನ ಕುರಿತು ಕೇಂದ್ರ ವಿಭಾಗ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Read More
Next Story