Bengaluru dump garbage  houses, government should process waste scientifically
x

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮನೆ ಮುಂದೆ ಕಸ ಸುರಿದು ಎಚ್ಚರಿಕೆ ನೀಡಿದರು.

ರಸ್ತೆ ಬದಿ ಕಸ ಎಸೆದಿದ್ದಕ್ಕೆ 218 ಮನೆಗಳ ಮುಂದೆ ಕಸ ಸುರಿದ ಪಾಲಿಕೆ, 2.80 ಲಕ್ಷ ದಂಡ ವಸೂಲಿ

ಪೌರ ಕಾರ್ಮಿಕರು ರಸ್ತೆಯನ್ನು ಸ್ವಚ್ಚಗೊಳಿಸಿದರೂ ಮತ್ತೆ ರಸ್ತೆಗಳಲ್ಲಿ ಕಸ ಕಂಡು ಐಟಿಬಿಟಿ ವಲಯದ ಉದ್ಯಮಿಗಳು ಹಾಗೂ ಪ್ರವಾಸಿಗರು ಬೆಂಗಳೂರು ಆಡಳಿತದ ಬಗ್ಗೆ ಅಸಹನೆ ಮಾತುಗಳನ್ನಾಡಿದ್ದರು.


Click the Play button to hear this message in audio format

ಉದ್ಯಾನ ನಗರಿ ಎಂಬ ಖ್ಯಾತಿಗೆ ಮಸಿ ಬಳಿಯುತ್ತಿರುವ ಎಲ್ಲೆಂದರಲ್ಲಿ ಕಸ ಎಸೆಯುವ ಪ್ರವೃತ್ತಿಗೆ ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಭೂತಪೂರ್ವ ಮತ್ತು ಕಠಿಣ ಕಾರ್ಯಾಚರಣೆಗೆ ಇಳಿದಿದೆ. ಪದೇ ಪದೇ ಎಚ್ಚರಿಕೆ ನೀಡಿದರೂ ರಸ್ತೆ ಬದಿಯಲ್ಲಿ ಕಸ ಸುರಿಯುವುದನ್ನು ಮುಂದುವರಿಸಿದ ನಾಗರಿಕರ ಮನೆಗಳ ಮುಂದೆಯೇ ಕಸವನ್ನು ಸುರಿದು, ದಂಡ ವಿಧಿಸುವ ಮೂಲಕ ಪ್ರಾಧಿಕಾರವು ದಿಟ್ಟ ಸಂದೇಶ ರವಾನಿಸಿದೆ. ಗುರುವಾರ ಒಂದೇ ದಿನ ಈ ಕಾರ್ಯಾಚರಣೆಯಲ್ಲಿ 218 ಮನೆಗಳ ಮುಂದೆ ಕಸ ಸುರಿದು, ಒಟ್ಟು 2.80 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ಪಾಲಿಕೆಯ ವಾಹನಗಳಿಗೆ ನೀಡಬೇಕೆಂಬ ನಿಯಮವನ್ನು ಹಲವರು ಗಾಳಿಗೆ ತೂರುತ್ತಿದ್ದರು. ಪೌರಕಾರ್ಮಿಕರು ಸ್ವಚ್ಛಗೊಳಿಸಿದ ಕೆಲವೇ ಗಂಟೆಗಳಲ್ಲಿ ರಸ್ತೆಬದಿಗಳಲ್ಲಿ ಮತ್ತೆ ಕಸದ ರಾಶಿಗಳು ಕಾಣಿಸಿಕೊಳ್ಳುತ್ತಿದ್ದವು. ಇದು ನಗರದ ಸೌಂದರ್ಯಕ್ಕೆ ಧಕ್ಕೆ ತರುವುದರ ಜೊತೆಗೆ, ಐಟಿ-ಬಿಟಿ ವಲಯದ ಉದ್ಯಮಿಗಳು ಹಾಗೂ ಪ್ರವಾಸಿಗರಲ್ಲಿ ಬೆಂಗಳೂರಿನ ಆಡಳಿತದ ಬಗ್ಗೆ ಅಸಮಾಧಾನ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ, ಸಾರ್ವಜನಿಕರ ಅಸಭ್ಯತನವನ್ನು ಅನ್ನು ಗಂಭೀರವಾಗಿ ಪರಿಗಣಿಸಿದ ಪ್ರಾಧಿಕಾರವು, ಈ ವಿನೂತನ ಕ್ರಮದ ಮೂಲಕ ತಕ್ಕ ಪಾಠ ಕಲಿಸಲು ಮುಂದಾಗಿದೆ.

ಪ್ರಾಧಿಕಾರದ ಮಾರ್ಷಲ್‌ಗಳು ನಗರದಾದ್ಯಂತ ಹದ್ದಿನ ಕಣ್ಣಿಟ್ಟು, ರಸ್ತೆ ಬದಿ ಕಸ ಎಸೆಯುವವರನ್ನು ಗುರುತಿಸಿ, ಅವರ ಚಲನವಲನವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಹೊಸಕೆರೆಹಳ್ಳಿ, ಬನಶಂಕರಿ, ಮಹದೇವಪುರ, ಗಾಂಧಿನಗರ, ಮತ್ತು ಮಲ್ಲೇಶ್ವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಕಾರ್ಯಾಚರಣೆ ತೀವ್ರವಾಗಿತ್ತು. ಗಾಂಧಿನಗರದ ವಾರ್ಡ್ ಸಂಖ್ಯೆ 94 ರಲ್ಲಿ ರಸ್ತೆಗೆ ಕಸ ಎಸೆದು ಬಂದಿದ್ದ ಮನೆಯೊಂದರ ಮುಂದೆ ಕಸ ಸುರಿದು, 1,000 ರೂಪಾಯಿ ದಂಡ ವಿಧಿಸಲಾಯಿತು. ಇದೇ ರೀತಿ, ಮಲ್ಲೇಶ್ವರದಲ್ಲಿ ಗುಜರಿ ವ್ಯಾಪಾರಿಯೊಬ್ಬರು ನಿಯಮ ಉಲ್ಲಂಘಿಸಿದ್ದಕ್ಕೂ ದಂಡದ ಬಿಸಿ ಮುಟ್ಟಿಸಲಾಗಿದೆ.

ಮುಂದೆಯೂ ಕಠಿಣ ಕ್ರಮ

ಈ ಕ್ರಮವನ್ನು ಇಲ್ಲಿಗೇ ನಿಲ್ಲಿಸದೆ, ಇನ್ನಷ್ಟು ಕಠಿಣಗೊಳಿಸಲು ಪ್ರಾಧಿಕಾರ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಮೊದಲ ಬಾರಿಗೆ ತಪ್ಪು ಮಾಡುವವರಿಗೆ 1,000 ರೂಪಾಯಿ ದಂಡ ಮತ್ತು ಅವರ ಮನೆಯ ಮುಂದೆ ಕಸ ಸುರಿದು, ತಮಟೆ ಬಾರಿಸಿ ಜಾಗೃತಿ ಮೂಡಿಸಲಾಗುವುದು. ಇದೇ ತಪ್ಪನ್ನು ಪುನರಾವರ್ತಿಸಿದರೆ, ದಂಡದ ಮೊತ್ತವನ್ನು 5,000 ರೂಪಾಯಿಗೆ ಏರಿಸುವುದಲ್ಲದೆ, ಅಧಿಕಾರಿಗಳು ಮನೆಯ ಒಳಗೆಯೇ ಕಸ ಸುರಿದು ಎಚ್ಚರಿಕೆ ನೀಡಲಿದ್ದಾರೆ ಎಂದು ಪ್ರಾಧಿಕಾರ ತಿಳಿಸಿದೆ.

ಪ್ರಾಧಿಕಾರದ ಈ ದಿಟ್ಟ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದರೂ, ಕೆಲವರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. "ಪಾಲಿಕೆಯ ಕಸ ಸಂಗ್ರಹಣಾ ವಾಹನಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ಅವರು ನಿಯಮಿತವಾಗಿ ಕಸವನ್ನು ತೆಗೆದುಕೊಂಡು ಹೋದರೆ, ನಾವು ರಸ್ತೆಗೆ ಎಸೆಯುವ ಅಗತ್ಯವೇ ಇರುವುದಿಲ್ಲ" ಎಂದು ಕೆಲವು ನಿವಾಸಿಗಳು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

Read More
Next Story