ಹನಿಟ್ರ್ಯಾಪ್ ಪ್ರಕರಣ | ಮುಮ್ತಾಜ್ ಸಾವು: ಮಂಗಳೂರು ಪೊಲೀಸ್ ಕಮಿಷನರ್​ ಏನಂದರು?
x
ಮೊಯಿದ್ದೀನ್ ಬಾವಾ ಸೋದರ ಮುಮ್ತಾಜ್

ಹನಿಟ್ರ್ಯಾಪ್ ಪ್ರಕರಣ | ಮುಮ್ತಾಜ್ ಸಾವು: ಮಂಗಳೂರು ಪೊಲೀಸ್ ಕಮಿಷನರ್​ ಏನಂದರು?

ದೂರಿನಲ್ಲಿ 3 ತಿಂಗಳಿನಿಂದ ಖಿನ್ನತೆಯಲ್ಲಿ ಇದ್ದ ಬಗ್ಗೆ ಹಾಗೂ ಸೆಕ್ಸ್ ವಿಡಿಯೋ ಆಧಾರದಲ್ಲಿ ಹಣಕ್ಕಾಗಿ ಬೆದರಿಕೆ ಹಾಕಿರುವ ಕುರಿತು ಉಲ್ಲೇಖಿಸಲಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತರು ಹೇಳಿದ್ದಾರೆ


ಭಾನುವಾರ ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸೋದರ ಮುಮ್ತಾಜ್ ಅವರ ಮೃತದೇಹ ಸೋಮವಾರ ಮಂಗಳೂರಿನ ಕುಳೂರಿನ ಸೇತುವೆ ಬಳಿ ಪತ್ತೆಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ‘ಸೆಕ್ಸ್ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್ ಎಂದು ದೂರು ಬಂದಿದೆ. ಆರೋಪಿಗಳು ದೇಶ ಬಿಟ್ಟು ಹೋಗದಂತೆ ಎಲ್​ಒಸಿ ಜಾರಿ ಮಾಡಿದ್ದೇವೆ. ಭಾನುವಾರ(ಅ.06) ಮುಂಜಾನೆ ಮುಮ್ತಾಜ್ ಅಲಿ ನದಿಗೆ ಹಾರಿರುವ ಮಾಹಿತಿ ಬಂದಿತ್ತು. ಸೋಮವಾರ ಬೆಳಿಗ್ಗೆ ಹತ್ತು ಗಂಟೆಗೆ ಮುಮ್ತಾಜ್ ಅಲಿ ಮೃತದೇಹ ಪತ್ತೆಯಾಗಿದೆ. ಮುಮ್ತಾಜ್ ಅಲಿ ಸಹೋದರ ಮೊಯಿದ್ದೀನ್ ಬಾವಾ ಅವರು ಹನಿಟ್ರ್ಯಾಪ್ ಮಾಡಿದ್ದಾರೆಂದು ಕಾವೂರು ಠಾಣೆಗೆ ದೂರು ನೀಡಿದ್ದಾರೆʼ ಎಂದರು.

ಆರು ಜನರ ಮೇಲೆ ಎಫ್​ಐಆರ್

ಈ ಹಿನ್ನೆಲೆಯಲ್ಲಿ ಕಾವೂರು ಠಾಣೆಯಲ್ಲಿ 6 ಜನರ ಮೇಲೆ ಎಫ್​ಐಆರ್ ದಾಖಲಾಗಿದ್ದು, ದೂರಿನಲ್ಲಿ 3 ತಿಂಗಳಿನಿಂದ ಖಿನ್ನತೆಯಲ್ಲಿ ಇದ್ದ ಬಗ್ಗೆ ಹಾಗೂ ಸೆಕ್ಸ್ ವಿಡಿಯೋ ಆಧಾರದಲ್ಲಿ ಹಣಕ್ಕಾಗಿ ಬೆದರಿಕೆ ಹಾಕಿರುವ ಕುರಿತು ಉಲ್ಲೇಖಿಸಲಾಗಿದೆ. ಈ ಬಗ್ಗೆ ತಂಡ ರಚಿಸಿ ಆರೋಪಿಗಳಿಗೆ ಹುಡುಕಾಟ ಮಾಡುತ್ತಿದ್ದೇವೆ. ವಾಯ್ಸ್ ನೋಟ್​​ನಲ್ಲಿ ಸತ್ತಾರ್ ಎಂಬಾತನ ಬಗ್ಗೆ ಮುಮ್ತಾಜ್ ಹೇಳಿದ್ದಾರೆ. ಆರೋಪಿ ರೆಹಮತ್​ಗಾಗಿ ಪೊಲೀಸ್ ತಂಡ ಹುಡುಕಾಟ ನಡೆಸುತ್ತಿದೆ. ಆತ್ಮಹತ್ಯೆಗೂ ಮುನ್ನ ಬಸ್​ಗೆ ಮುಮ್ತಾಜ್​ ಅಲಿ ಕಾರು ಡಿಕ್ಕಿಯಾಗಿದೆ. ಬಸ್​ನವರ ಹೇಳಿಕೆಯನ್ನೂ ಪಡೆದಿದ್ದೇವೆ ಎಂದು ಹೇಳಿದರು.

ಘಟನೆ ಹಿನ್ನೆಲೆ

ಮೃತ ಮುಮ್ತಾಜ್​ ಅಲಿ ಅವರು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಮೊಯಿದ್ದೀನ್ ಬಾವ ಮತ್ತು ಮಾಜಿ MLC ಆಗಿರುವ ಬಿ.ಎಮ್.ಫಾರೂಕ್ ಅವರ ಕಿರಿಯ ಸಹೋದರ. ಅವರು ಭಾನುವಾರ ಬೆಳ್ಳಂಬೆಳಗ್ಗೆ ನಾಪತ್ತೆಯಾಗಿದ್ದರು. ಕುಳೂರು ಸೇತುವೆ ಮೇಲೆ ತಮ್ಮ ಐಷಾರಾಮಿ BMW ಕಾರು ನಿಲ್ಲಿಸಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಹೀಗಾಗಿ ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಕೋಸ್ಟ್ ಗಾರ್ಡ್, ಎಫ್,ಎಸ್ ಡಿಆರ್ ಎಫ್, ಅಗ್ನಿಶಾಮಕ ದಳ, ಈಶ್ವರ್ ಮಲ್ಪೆ ಸೇರಿದಂತೆ ಮುಳುಗು ತಜ್ಞರು ಶೋಧ ಕಾರ್ಯ ನಡೆಸಿ ಮೃತದೇಹ ಹೊರತೆಗೆದಿದ್ದರು.

ಮಹಿಳೆಯೊಬ್ಬರ ಬ್ಲಾಕ್ ಮೇಲ್ ನಿಂದ ಮುಮ್ತಾಜ್​ ಅಲಿ ಅವರು ಭಾರೀ ಹಣ ಕಳೆದುಕೊಂಡಿದ್ದರು. ಹಲವು ತಿಂಗಳಿಂದ ಮಹಿಳೆಗೆ ಮುಮ್ತಾಜ್​ ಅಲಿ ಲಕ್ಷ ಲಕ್ಷ ಹಣವನ್ನು ನೀಡಿದ್ದರು. ಆದರೆ ಮತ್ತಷ್ಟು ಹಣಕ್ಕಾಗಿ ಪೀಡಿಸಿದ್ದ ಮಹಿಳೆ, ಹಣದ ಜೊತೆಗೆ ಮದುವೆ ಆಗುವಂತೆಯೂ ಟಾರ್ಚರ್ ಕೊಟ್ಟಿದ್ದಳು. ಆದರೆ ಇದಕ್ಕೆ ಒಪ್ಪದೇ ಹಣ ಕೊಡೋದನ್ನೂ ಮುಮ್ತಾಜ್​ ನಿಲ್ಲಿಸಿದ್ದರು. ಅವರನ್ನು ಹನಿಟ್ರ್ಯಾಪ್ ಮಾಡಿ, ಆಡಿಯೋ ಇಟ್ಟುಕೊಂಡು ನಿರಂತರ ಬ್ಲಾಕ್ ಮೇಲ್ ಮಾಡಲಾಗಿತ್ತು. ಎರಡು ಕೋಟಿ ರೂ. ಹಣ ಕೊಡದೇ ಇದ್ದರೆ ಆಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಕೊನೆಗೆ 25 ಲಕ್ಷ ಕೊಟ್ಟರೂ ಮತ್ತೆ ಮತ್ತೆ ನಿರಂತರ ಬೆದರಿಕೆ ಹಾಕಿದ್ದು, ಹಣ ಕೊಡಲು ಒಪ್ಪದೇ ಇದ್ದಾಗ ಕುಟುಂಬಸ್ಥರಿಗೆ ವಿಷಯವನ್ನು ತಿಳಿಸಿದ್ದರು. ಈ ಘಟನೆಯಿಂದ ಬೇಸತ್ತು ಮುಮ್ತಾಜ್​ ಅಲಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

Read More
Next Story