
ಸಾಂದರ್ಭಿಕ ಚಿತ್ರ
ಧಾರವಾಡ ಹೈಕೋರ್ಟ್ ಪೀಠ ಸೇರಿ ಮೂರು ಕಡೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ
ಮೈಸೂರು ನ್ಯಾಯಾಲಯಕ್ಕೆ ಬಂದ ಮೇಲ್‌ನಲ್ಲಿ "ಮಧ್ಯಾಹ್ನ 1.55ಕ್ಕೆ ಮೂರು ಆರ್‌ಡಿಎಕ್ಸ್ ಬಾಂಬ್‌ಗಳು ಸ್ಫೋಟಗೊಳ್ಳಲಿವೆ" ಎಂದು ಎಚ್ಚರಿಸಲಾಗಿತ್ತು.
ರಾಜ್ಯದ ಪ್ರಮುಖ ಸರ್ಕಾರಿ ಕಚೇರಿಗಳು ಮತ್ತು ನ್ಯಾಯಾಲಯಗಳನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ. ಧಾರವಾಡ ಹೈಕೋರ್ಟ್ ಪೀಠ, ಮೈಸೂರಿನ ಹಳೆಯ ನ್ಯಾಯಾಲಯ, ಬಾಗಲಕೋಟೆ ಜಿಲ್ಲಾ ನ್ಯಾಯಾಲಯ ಹಾಗೂ ಬೆಂಗಳೂರಿನ ಲಾಲ್‌ಬಾಗ್ ರಸ್ತೆಯಲ್ಲಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಇ-ಮೇಲ್ ಮೂಲಕ ಏಕಕಾಲಕ್ಕೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿದೆ.
ಮೈಸೂರಿನ ಜಿಲ್ಲಾ ನ್ಯಾಯಾಲಯಕ್ಕೆ ಬಂದ ಇ-ಮೇಲ್‌ನಲ್ಲಿ "ಮಧ್ಯಾಹ್ನ 1.55ಕ್ಕೆ ನ್ಯಾಯಾಲಯದ ಆವರಣದಲ್ಲಿ ಮೂರು ಆರ್‌ಡಿಎಕ್ಸ್ ಬಾಂಬ್‌ಗಳು ಸ್ಫೋಟಗೊಳ್ಳಲಿವೆ. ಕೂಡಲೇ ನ್ಯಾಯಾಧೀಶರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ" ಎಂದು ಎಚ್ಚರಿಕೆ ನೀಡಲಾಗಿತ್ತು.
ಇದೇ ವೇಳೆ ಬಾಗಲಕೋಟೆ ಜಿಲ್ಲಾ ನ್ಯಾಯಾಲಯಕ್ಕೂ ಬೆದರಿಕೆ ಇ-ಮೇಲ್ ಬಂದಿದ್ದು, ಊಟದ ಬಿಡುವಿನ ವೇಳೆಯಲ್ಲಿ ಸ್ಫೋಟ ನಡೆಸುವುದಾಗಿ ಕಿಡಿಗೇಡಿಗಳು ಸಂದೇಶ ಕಳುಹಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ನ್ಯಾಯಾಲಯದ ಸಿಬ್ಬಂದಿ, ವಕೀಲರು ಹಾಗೂ ಕಕ್ಷಿದಾರರು ಭಯಭೀತರಾಗಿ ಕಟ್ಟಡದಿಂದ ಹೊರಬಂದರು.
ಇತ್ತ ಬೆಂಗಳೂರಿನ ಪಾಸ್‌ಪೋರ್ಟ್ ಕಚೇರಿಗೂ ಇಂತಹದ್ದೇ ಇ-ಮೇಲ್ ಲಭ್ಯವಾಗಿದ್ದು, ವಿಲ್ಸನ್ ಗಾರ್ಡನ್ ಮತ್ತು ಎಸ್.ಆರ್. ನಗರ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಿಬ್ಬಂದಿ ಎಲ್ಲಾ ಮೂರೂ ಸ್ಥಳಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸಿದರು. ಗಂಟೆಗಳ ಕಾಲ ನಡೆದ ತಪಾಸಣೆಯ ನಂತರ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ ಇವೆಲ್ಲವೂ 'ಹುಸಿ ಬೆದರಿಕೆ' ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಹೈಕೋರ್ಟ್ ಧಾರವಾಡ ಪೀಠಕ್ಕೆ ಬಾಂಬ್ ಬೆದರಿಕೆ ಇ-ಮೇಲ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, 'ಹೈಕೋರ್ಟ್ ಪ್ರದೇಶದ ಎಲ್ಲ ಕಡೆ ತಪಾಸಣೆ ನಡೆಸಲಾಗಿದ್ದು ಯಾವುದೇ ಶಂಕಾಸ್ಪದ ವಸ್ತುಗಳು ಪತ್ತೆಯಾಗಿಲ್ಲ' ಎಂದು ಅವರು ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳಿಂದ ಕರ್ನಾಟಕದ ವಿವಿಧ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಹೈಕೋರ್ಟ್‌ಗೆ ಇಂತಹ ಹುಸಿ ಬೆದರಿಕೆಗಳು ಬರುತ್ತಲೇ ಇವೆ. ಇ-ಮೇಲ್‌ಗಳ ಮೂಲವನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ, ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

