Multi-Crore Fraud Case: ED Seizes Assets Worth ₹9.5 Crore Belonging to Roshan Saldanha
x

 ರೋಷನ್ ಸಲ್ಡಾನ್‌

ವಂಚನೆ ಪ್ರಕರಣ: ರೋಷನ್ ಸಲ್ಡಾನಗೆ ಸೇರಿದ 9.5 ಕೋಟಿ ರೂ. ಮೌಲ್ಯದ ಆಸ್ತಿ ಇ.ಡಿ ಜಪ್ತಿ

ಮಂಗಳೂರು ಮತ್ತು ಚಿತ್ರದುರ್ಗದಲ್ಲಿ ದಾಖಲಾಗಿದ್ದ ದೂರುಗಳನ್ನು ಆಧರಿಸಿ, ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ-2002ರ ಅಡಿಯಲ್ಲಿ ಇ.ಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು.


ಉದ್ಯಮಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ ಕೊಡಿಸುವ ಆಮಿಷವೊಡ್ಡಿ, ಕಮಿಷನ್ ರೂಪದಲ್ಲಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ ಆರೋಪ ಎದುರಿಸುತ್ತಿರುವ ನಗರದ ರೋಷನ್ ಸಲ್ಡಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಮಹತ್ವದ ಕ್ರಮ ಕೈಗೊಂಡಿದೆ. ಸಲ್ಡಾನ ಮತ್ತು ಆತನ ಪತ್ನಿಗೆ ಸೇರಿದ 9.5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ.

ಮಂಗಳೂರು ಮತ್ತು ಚಿತ್ರದುರ್ಗದಲ್ಲಿ ದಾಖಲಾಗಿದ್ದ ದೂರುಗಳನ್ನು ಆಧರಿಸಿ, ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ-2002ರ ಅಡಿಯಲ್ಲಿ ಇ.ಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಐದು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ತನಿಖೆಯ ವೇಳೆ, ರೋಷನ್ ಸಲ್ಡಾನನ ಪತ್ನಿ ಡಾಫ್ನಿ ನೀತು ಡಿಸೋಜ ಅವರ ಹೆಸರಿನಲ್ಲಿದ್ದ 5.75 ಕೋಟಿ ರೂ. ಮೌಲ್ಯದ ಐದು ಮೀನುಗಾರಿಕಾ ಬೋಟ್ಗಳು ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ 3.75 ಕೋಟಿ ರೂ. ನಗದನ್ನು ಪತ್ತೆಹಚ್ಚಿ, ಜಪ್ತಿ ಮಾಡಲಾಗಿದೆ ಎಂದು ಇ.ಡಿ ಮಂಗಳೂರು ಉಪವಲಯ ಕಚೇರಿಯ ಪ್ರಕಟಣೆ ತಿಳಿಸಿದೆ.

ಪ್ರಕರಣದ ಹಿನ್ನೆಲೆ

ಕಡಿಮೆ ಬಡ್ಡಿಗೆ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ, ಕಮಿಷನ್ ಮತ್ತು ಸ್ಟ್ಯಾಂಪ್ ಡ್ಯೂಟಿ ನೆಪದಲ್ಲಿ ರೋಷನ್ ಸಲ್ಡಾನ, ಆತನ ಪತ್ನಿ ಹಾಗೂ ಇತರ ಸಹಚರರು ಹಲವು ಉದ್ಯಮಿಗಳಿಂದ ಸುಮಾರು 39 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ದಾಖಲಾಗಿದ್ದ ದೂರುಗಳ ಆಧಾರದ ಮೇಲೆ, ಮಂಗಳೂರಿನ ಸೆನ್ ಠಾಣೆ ಪೊಲೀಸರು ಜುಲೈ 17ರಂದು ಕಂಕನಾಡಿಯ ಬೊಲ್ಲಗುಡ್ಡದಲ್ಲಿರುವ ಸಲ್ಡಾನನ ವಿಲಾಸಿ ಬಂಗಲೆಯ ಮೇಲೆ ದಾಳಿ ನಡೆಸಿ, ಆತನನ್ನು ಬಂಧಿಸಿದ್ದರು. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಬೆಂಗಳೂರು, ವಿಜಯಪುರ, ತುಮಕೂರು, ಬಾಗಲಕೋಟೆ ಮಾತ್ರವಲ್ಲದೆ, ಕೋಲ್ಕತ್ತ, ಗೋವಾ, ಪುಣೆ, ಮತ್ತು ಲಖನೌನಂತಹ ಹೊರರಾಜ್ಯಗಳಲ್ಲೂ ಸಲ್ಡಾನ ವಂಚನೆ ಎಸಗಿದ್ದಾನೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಈ ಹಿಂದೆ ಮಾಹಿತಿ ನೀಡಿದ್ದರು. ಶೋಧ ಕಾರ್ಯಾಚರಣೆಯ ವೇಳೆ ಅಧಿಕಾರಿಗಳಿಗೆ ದಿನಚರಿ ಪುಸ್ತಕಗಳು ಹಾಗೂ ಹಲವು ಮಹತ್ವದ ಕಾಗದಪತ್ರಗಳು ಲಭಿಸಿದ್ದು, ತನಿಖೆ ಮುಂದುವರಿದಿದೆ.

Read More
Next Story