ಮುಡಾ ಪಾದಯಾತ್ರೆ | ನಗಾರಿ ಭಾರಿಸುವ ಮೂಲಕ ಯಡಿಯೂರಪ್ಪ, ಕುಮಾರಸ್ವಾಮಿ ಚಾಲನೆ
x

ಮುಡಾ ಪಾದಯಾತ್ರೆ | ನಗಾರಿ ಭಾರಿಸುವ ಮೂಲಕ ಯಡಿಯೂರಪ್ಪ, ಕುಮಾರಸ್ವಾಮಿ ಚಾಲನೆ

ವಾಲ್ಮೀಕಿ ನಿಗಮದ ಅಕ್ರಮ ಮತ್ತು ಮುಡಾ ಹಗರಣ ಖಂಡಿಸಿ, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಗೆ ಶನಿವಾರ(ಆ.3) ಬೆಂಗಳೂರಿನ ಕೆಂಗೇರಿ ಕೆಂಪಮ್ಮ ದೇವಸ್ಥಾನದ ಬಳಿ ನಗಾರಿ ಬಾರಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಚಾಲನೆ ನೀಡಿದರು.


ವಾಲ್ಮೀಕಿ ನಿಗಮದ ಅಕ್ರಮ ಮತ್ತು ಮುಡಾ ಹಗರಣ ಖಂಡಿಸಿ, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಗೆ ಶನಿವಾರ(ಆ.3) ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಬೆಂಗಳೂರಿನ ಕೆಂಗೇರಿ ಕೆಂಪಮ್ಮ ದೇವಸ್ಥಾನದ ಬಳಿ ನಗಾರಿ ಬಾರಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಪಾದಯಾತ್ರೆಗೆ ಚಾಲನೆ ನೀಡಿದರು.

ಶನಿವಾರ(ಆ.3)ದಿಂದ ಆಗಸ್ಟ್ 10ರವರೆಗೆ ಏಳು ದಿನಗಳ ಕಾಲ ಒಟ್ಟು 124 ಕಿ.ಮೀವರೆಗೆ ಪಾದಯಾತ್ರೆ ಸಾಗಿ ಮೈಸೂರಿನ ಮುಡಾ ಕಚೇರಿಯಲ್ಲಿ ಕೊನೆಯಾಗಲಿದೆ. ಕೊನೆಯ ದಿನದಂದು ಮೈಸೂರಿನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವು ನಾಯಕರು ಭಾಗಿಯಾಗುವ ಸಾಧ್ಯತೆಯಿದೆ.

ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ, ʻʻಇದು ಜನ ವಿರೋಧಿ ಸರ್ಕಾರವಾಗಿದ್ದು ಮುಡಾ, ವಾಲ್ಮೀಕಿ ಪ್ರಕರಣ ಬಯಲಿಗೆ ಬಂದಿದೆ. ಜನರ ಆಸ್ತಿಗಳನ್ನು ನುಂಗಿದ ಸರ್ಕಾರದ ವಿರುದ್ಧ ನಾವು ಜನಾಂದೋಲನ ಮಾಡುತ್ತಿದ್ದೇವೆ. ಭ್ರಷ್ಟಚಾರ ತೊಲಗಿಸಲು ಪಾದಯಾತ್ರೆ ಮಾಡುತ್ತಿದ್ದೇವೆ. ಹಗರಣದಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ನನ್ನ ಎದರಿಸಲು ಯಾರಿಗೂ ಸಾಧ್ಯವಿಲ್ಲ. ಜೆಡಿಎಸ್‌ ಭದ್ರಕೋಟೆಯ ಕಾರ್ಯಕರ್ತರನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದರು.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ, ʻʻಪಾದಯಾತ್ರೆ ಯಶಸ್ವಿಗಾಗಿ ಚಾಮುಂಡೇಶ್ವರಿ ತಾಯಿ ಬಳಿ ಪ್ರಾರ್ಥಿಸಿದ್ದೇನೆ. ಪಾದಯಾತ್ರೆಗೆ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಕೇಂದ್ರ ಸಚಿವ ಎಚ್​ ಡಿ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಹಿಂದ ಅಂತ ಹೆಸರು ಹೇಳಿಕೊಂಡು ಅಧಿಕಾರ ಹಿಡಿದಿದೆ. ಆದರೆ ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಸರ್ಕಾರ ದ್ರೋಹ ಬಗೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ತುಳಿತಕ್ಕೊಳಗಾದವರಿಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಸೈಟ್ ಹಗರಣ ಎಸ್‌ಇಪಿ, ಟಿಎಸ್‌ಪಿ ಹಣ ದುರ್ಬಳಕೆ ಖಂಡಿಸಿ ಮೈಸೂರು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದರು.

ದೇವೇಗೌಡರ ಕುಟುಂಬದಿಂದ ನೈಸ್ ಸುತ್ತಮುತ್ತ ಅತಿಕ್ರಮಣವಾಗಿದೆ ಎಂದು ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ʻʻಸರ್ಕಾರ ಅವರ ಕೈಯಲ್ಲೇ ಇದೆ. ನಾವು ಅಕ್ರಮವಾಗಿ ಆಸ್ತಿ ಮಾಡಿದ್ದರೆ ಸರ್ಕಾರ ವಶಪಡಿಸಿಕೊಳ್ಳಲಿ ಅಥವಾ ಮುಟ್ಟುಗೋಲು ಹಾಕಿಕೊಳ್ಳಲಿ. ನಾವು ನ್ಯಾಯಬದ್ಧವಾಗಿ ಬದುಕಿದ್ದೇವೆ, ಇವರ ಥರ ಬದುಕಿಲ್ಲ. ಶಿವಕುಮಾರ್ ಬಿಡದಿಯಲ್ಲಿ ಆರೋಪ ಮಾಡಿದ್ದಾರೆ. ಅವರಿಗೆ ನಾನು ಬಿಡದಿಯಲ್ಲೇ ಉತ್ತರ ನೀಡುತ್ತೇನೆʼʼ ಎಂದರು.

ಪಾದಯಾತ್ರೆಯ ದಾರಿ

ಆಗಸ್ಟ್‌ 3- ಕೆಂಗೇರಿಯಲ್ಲಿ ಆರಂಭ- ಬಿಡದಿಯಲ್ಲಿ ವಾಸ್ತವ್ಯ

ಆ. 4 - ಬಿಡದಿಯಲ್ಲಿ ಆರಂಭ- ಕೆಂಗಲ್‌ನಲ್ಲಿ ವಾಸ್ತವ್ಯ

ಆ.5 - ಕೆಂಗಲ್‌ನಲ್ಲಿ ಆರಂಭ-ನಿಡಘಟ್ಟದಲ್ಲಿ ವಾಸ್ತವ್ಯ

ಆ.6- ನಿಡಘಟ್ಟದಲ್ಲಿ ಆರಂಭ-ಮಂಡ್ಯದಲ್ಲಿ ವಾಸ್ತವ್ಯ

ಆ.7 – ಮಂಡ್ಯದಲ್ಲಿ ಆರಂಭ-ತೂಬಿನಕೆರೆಯಲ್ಲಿ ವಾಸ್ತವ್ಯ

ಆ.8 - ತೂಬಿನಕೆರೆಯಲ್ಲಿ ಆರಂಭ-ರಂಗಪಟ್ಟಣದಲ್ಲಿ ವಾಸ್ತವ್ಯ

ಆ.9 - ಶ್ರೀರಂಗಪಟ್ಟಣದಲ್ಲಿ ಆರಂಭ-ಮೈಸೂರು ಹೊರವಲಯದಲ್ಲಿ ವಾಸ್ತವ್ಯ

ಆ.10 - ಮೈಸೂರಿನಲ್ಲಿ ಅಂತ್ಯ

Read More
Next Story