ಮುಂಗಾರು ಅಧಿವೇಶನ | ಮುಡಾ ಹಗರಣ ಚರ್ಚೆಗೆ ಪಟ್ಟು: ವಿಧಾನಸಭೆಯಲ್ಲಿ ಬಿಜೆಪಿ ಅಹೋರಾತ್ರಿ ಧರಣಿ
x

ಮುಂಗಾರು ಅಧಿವೇಶನ | ಮುಡಾ ಹಗರಣ ಚರ್ಚೆಗೆ ಪಟ್ಟು: ವಿಧಾನಸಭೆಯಲ್ಲಿ ಬಿಜೆಪಿ ಅಹೋರಾತ್ರಿ ಧರಣಿ


ಮೈಸೂರಿನ ಮುಡಾ ನಿವೇಶನ ಹಗರಣದ ಕುರಿತು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೋರಿ ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಬುಧವಾರ ಸಲ್ಲಿಸಿದ್ದ ಪ್ರಸ್ತಾವವನ್ನು ಸಭಾಧ್ಯಕ್ಷರು ತಿರಸ್ಕರಿಸಿ, ಚರ್ಚೆಗೆ ಅವಕಾಶ ನಿರಾಕರಿಸಿದರು. ಆ ಹಿನ್ನೆಲೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿರುವ ಬಿಜೆಪಿ, ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದೆ.

ವಿಧಾನಸಭಾ ಅಧಿವೇಶನಲ್ಲಿ ಬಿಜೆಪಿ ಸದಸ್ಯರು, ಮುಡಾ ಹಗರಣದ ಕುರಿತು ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ದಿನವಿಡೀ ಸಭಾಧ್ಯಕ್ಷರಿಗೆ ಮನವಿ ಮಾಡಿದರು. ಪ್ರಕರಣದ ಕುರಿತು ಸರ್ಕಾರ ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶಿಸಿರುವುದರಿಂದ ಸದನದಲ್ಲಿ ಚರ್ಚೆಗೆ ಅವಕಾಶ ನೀಡುವುದು ಸದನದ ನಿಯಮಾವಳಿಗೆ ವಿರುದ್ಧ ಎಂಬ ಕಾರಣವೊಡ್ಡಿ ಸಭಾಧ್ಯಕ್ಷರು ಚರ್ಚೆಗೆ ಅವಕಾಶ ನೀಡಲಿಲ್ಲ. ಆ ಹಿನ್ನೆಲೆಯಲ್ಲಿ ದಿನವಿಡೀ ಆ ಕುರಿತು ಆಗ್ರಹ, ಘೋಷಣೆ, ಗದ್ದಲದಲ್ಲೇ ಕಲಾಪ ನಡೆಯಿತು.

ಮಧ್ಯಾಹ್ನದ ಬಳಿಕ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ, ಹಗರಣದ ತನಿಖೆಗೆ ಪಟ್ಟು ಹಿಡಿದರು. ಗದ್ದಲದ ಹಿನ್ನೆಲೆಯಲ್ಲಿ ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಯಿತು. ಆ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಇಂದಿನಿಂದ ರಾತ್ರಿಯಿಡೀ ಧರಣಿ ನಡೆಸಲಿರುವುದಾಗಿ ಘೋಷಣೆ ಮಾಡಿದರು.

ʻʻಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಾಗೂ ಹೋರಾಟ ಮಾಡುವ ಹಕ್ಕು ಸಂವಿಧಾನ ನೀಡಿದೆ. ಆದರೆ ಸ್ಪೀಕರ್ ಖಾದರ್ ಅವರು ನಮಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಿಲ್ಲ. ಇದನ್ನು ಖಂಡಿಸಿ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿಯನ್ನು ನಡೆಸುತ್ತಿದ್ದೇವೆʼʼ ಎಂದರು.

ಆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ, ʻʻದಲಿತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಸಿಎಂ ಕುಟುಂಬಕ್ಕೆ ನೀಡಿದ ಸೈಟ್ ವಾಪಸ್ ಪಡೆಯಬೇಕು. ಸುಮಾರು ಐದು ಸಾವಿರ ನಿವೇಶನಗಳನ್ನು ಮನಬಂದಂತೆ ಹಂಚಲಾಗಿದೆ. ಅದು ಕೂಡಾ ವಾಪಸ್ ಬರಬೇಕು. ಈ ಹಿನ್ನೆಲೆಯಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆʼʼ ಎಂದು ತಿಳಿಸಿದರು.

Read More
Next Story