Mysore MUDA Scam | ಸಿಎಂಗೆ ಪ್ರಾಮಾಣಿಕತೆ ಇದ್ದರೆ ರಾಜೀನಾಮೆ ಕೊಡಬೇಕು: ಬಿ.ವೈ. ವಿಜಯೇಂದ್ರ
ಮುಡಾದ 50:50 ಅನುಪಾತದ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಹಗರಣವನ್ನು ಸಿಬಿಐಗೆ ವಹಿಸಬೇಕು ಮತ್ತು ಸಿಎಂ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಇಂದು (ಶುಕ್ರವಾರ) ಮೈಸೂರಿನಲ್ಲಿ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಸೇರಿದಂತೆ ನೂರಾರು ಕಾರ್ಯಕರ್ತರನ್ನು ಬಿಡದಿ ಬಳಿ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ಈ ವೇಳೆ ಮಾತನಾಡಿದ ವಿಜಯೇಂದ್ರ ಅವರು, ʻʻಮುಖ್ಯಮಂತ್ರಿಗಳೇ, ಈ ಹಗರಣದಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.. ಇವತ್ತಲ್ಲ ನಾಳೆ ನೀವು ಸಿಬಿಐ ತನಿಖೆಗೆ ಕೊಡಬೇಕಾಗುತ್ತದೆ. ಬಿಜೆಪಿಯ ಶಾಂತಿಯುತ ಹೋರಾಟಕ್ಕೆ ಕಲ್ಲು ಹಾಕುವ ಕೆಲಸ ಮಾಡಲಾಗಿದೆ. ನಾವಾಗಲೀ, ನಮ್ಮ ಕಾರ್ಯಕರ್ತರಾಗಲೀ ಯಾವುದೇ ಕಾರಣಕ್ಕೂ ಇದರಿಂದ ಹೆದರಿಕೊಂಡು ಓಡುವ ಪ್ರಶ್ನೆಯೇ ಇಲ್ಲ. ಈ ಹೋರಾಟಕ್ಕೆ ಉತ್ತರ ಸಿಗಲೇಬೇಕುʼʼ ಎಂದು ತಿಳಿಸಿದರು.
ʻʻಬಡವರಿಗೆ ಅನ್ಯಾಯ ಆಗಿದೆ. ನ್ಯಾಯ ಸಿಗಲೇ ಬೇಕಿದೆ. ಭ್ರಷ್ಟಾಚಾರದ ವಿಚಾರ ಸ್ಪಷ್ಟವಾಗಲೇಬೇಕಿದೆ. ಎಲ್ಲಿಯವರೆಗೆ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ಕೊಡುವುದಿಲ್ಲವೋ, ಸಿಎಂ ರಾಜೀನಾಮೆ ಕೊಡುವುದಿಲ್ಲವೋ ಅಲ್ಲಿನವರೆಗೆ ಬಿಜೆಪಿ ಹೋರಾಟ ಮುಂದುವರೆಸಲಿದೆʼʼ ಎಂದು ಎಚ್ಚರಿಸಿದರು.
ʻʻಸದನದ ಒಳಗೆ ಕೂಡ ಈ ಕುರಿತು ಪ್ರಶ್ನಿಸುತ್ತೇವೆ. ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದರೆ, ಪ್ರಾಮಾಣಿಕತೆ ಇದ್ದರೆ ರಾಜೀನಾಮೆ ಕೊಡಬೇಕುʼʼ ಎಂದು ವಿಜಯೇಂದ್ರ ಆಗ್ರಹಿಸಿದರು.