ಮುಡಾ ಪಾದಯಾತ್ರೆ | ನಿಗದಿತ ಸಮಯಕ್ಕೆ ಬಾರದ ಜೆಡಿಎಸ್‌ ನಾಯಕರು, ಕಾದು ಸುಸ್ತಾದ ಬಿಜೆಪಿ ನಾಯಕರು
x

ಮುಡಾ ಪಾದಯಾತ್ರೆ | ನಿಗದಿತ ಸಮಯಕ್ಕೆ ಬಾರದ ಜೆಡಿಎಸ್‌ ನಾಯಕರು, ಕಾದು ಸುಸ್ತಾದ ಬಿಜೆಪಿ ನಾಯಕರು


ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್​ ನಾಯಕರು ಜಂಟಿಯಾಗಿ ಆರಂಭಿಸಿರುವ ಮೈಸೂರು ಚಲೋ ಪಾದಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ರವಿವಾರ ಬಿಡದಿಯಿಂದ ಆರಂಭವಾಗಿದ್ದ ಪಾದಯಾತ್ರೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೆಂಗಲ್ ಗ್ರಾಮದಲ್ಲಿ ಅಂತ್ಯಗೊಂಡಿತ್ತು. ಸೋಮವಾರ(ಆ.5) ಬೆಳಿಗ್ಗೆ ಆರಂಭವಾಗಬೇಕಿದ್ದ ಪಾದಯಾತ್ರೆ ಎರಡು ತಾಸು ತಡವಾಗಿ ಆರಂಭವಾಯಿತು.

ಮೂರನೇ ದಿನ ಬಿಜೆಪಿ-ಜೆಡಿಎಸ್‌ ನಾಯಕರು ಕೆಂಗಲ್ ನಲ್ಲಿರುವ ಅಂಜನೇಯ ದೇವಸ್ಥಾನದ ವೃತ್ತದಿಂದ ಬೆಳಿಗ್ಗೆ 9.30ಕ್ಕೆ ಪಾದಯಾತ್ರೆ ಆರಂಭಿಸಬೇಕಿತ್ತು. ಆದರೆ ನಿಗದಿತ ಸಮಯಕ್ಕೆ ಜೆಡಿಎಸ್ ನಾಯಕರು ಬರದಿರುವುದರಿಂದ ಪಾದಯಾತ್ರೆ ತಡವಾಗಿ ಆರಂಭವಾಯಿತು. ಪಾದಯಾತ್ರೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟದವರೆಗೆ ಸಾಗಲಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ, ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ನಾಯಕರು ಬೆಳಿಗ್ಗೆಯೇ ಕೆಂಗಲ್ ಗೆ ಬಂದಿದ್ದರು. ವಿವಿಧ ಕಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸಹ ಬಂದಿದ್ದರು. ಆದರೆ, ಬೆಳಿಗ್ಗೆ 11 ಗಂಟೆಯವರೆಗೆ ಜೆಡಿಎಸ್ ನ ಯಾವ ನಾಯಕರೂ ಸುಳಿದಿಲ್ಲ. ಅಂಜನೇಯ ಸ್ವಾಮಿ ದರ್ಶನ ಪಡೆದ ಬಿಜೆಪಿ ನಾಯಕರು, ಜೆಡಿಎಸ್‌ ನಾಯಕರಾದ ಎಚ್‌.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರಿಗಾಗಿ ಕಾದುಕುಳಿತಿದ್ದರು.

11.30 ರ ಹೊತ್ತಿಗೆ ಸುಮಾರಿಗೆ ಎಚ್‌ ಡಿ ಕುಮಾರಸ್ವಾಮಿ ಸ್ಥಳಕ್ಕೆ ಬಂದ ಬಳಿಕ ಪಾದಯಾತ್ರೆ ಆರಂಭವಾಯಿತು.

ಜೆಡಿಎಸ್‌ ನಾಯಕರು ಯಾರೊಬ್ಬರೂ ಸಕಾಲದಲ್ಲಿ ಸ್ಥಳಕ್ಕೆ ಬರದೇ ಇರುವ ಹಿನ್ನೆಲೆಯಲ್ಲಿ ಈ ಮೊದಲು ಪಾದಯಾತ್ರೆ ವಿಷಯದಲ್ಲಿ ಉಭಯ ಪಕ್ಷಗಳ ನಡುವೆ ಉಂಟಾಗಿದ್ದ ಮನಸ್ತಾಪ ಮತ್ತೆ ತಲೆದೋರಿತೆ? ಎಂಬ ಗುಸುಗುಸು ಚರ್ಚೆ ನೆರೆದಿದ್ದ ಪಕ್ಷದ ಕಾರ್ಯಕರ್ತರ ನಡುವೆ ಕೇಳಿಬಂದಿತು. ಆದರೆ, ತಡವಾಗಿಯಾದರೂ ಜೆಡಿಎಸ್‌ ನಾಯಕರ ಪಾದಯಾತ್ರೆಗೆ ಬಂದು ಸೇರಿಕೊಂಡ ಹಿನ್ನೆಲೆಯಲ್ಲಿ ಆ ಗೊಂದಲಗಳು ದೂರಾದವು.

Read More
Next Story