
ಮುಡಾ ಕೇಸ್| ಇಂದು ಅಂತಿಮ ತೀರ್ಪು; ಸಿಎಂ ಸಿದ್ಧರಾಮಯ್ಯಗೆ ಢವ-ಢವ ಶುರು
ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ವರದಿ ಪ್ರಶ್ನಿಸಿದ ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಇಂದು ತೀರ್ಪು ಹೊರಬೀಳಲಿದೆ.
ಮುಡಾ ಪ್ರಕರಣದ ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತರು ಕ್ಲೀನ್‌ಚಿಟ್ ನೀಡಿರುವ ವರದಿಗೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಇಂದು(ಡಿ.18) ತನ್ನ ತೀರ್ಪು ಪ್ರಕಟಿಸಲಿದೆ. ಲೋಕಾಯುಕ್ತ ವರದಿ ಪ್ರಶ್ನಿಸಿದ ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಇಂದು ತೀರ್ಪು ಹೊರಬೀಳಲಿದೆ. ನ್ಯಾಯಾಲಯವು ಲೋಕಾಯುಕ್ತರ ‘ಬಿ ರಿಪೋರ್ಟ್ʼ ಅಂಗೀಕರಿಸಿದರೆ ಸಿಎಂ ಸಿದ್ದರಾಮಯ್ಯ ಅವರು ರಿಲ್ಯಾಕ್ಸ್ ಆಗಬಹುದು. ಇಲ್ಲವಾದರೆ ಮತ್ತೆ ಕಾನೂನು ಸಂಕಷ್ಟ ಎದುರಿಸುವುದು ನಿಶ್ಚಿತ. ಪ್ರಕರಣ ಮತ್ತಷ್ಟು ಗಂಭೀರ ಹಂತಕ್ಕೆ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಿ ರಿಪೋರ್ಟ್ ಸಲ್ಲಿಸಿದ ನಂತರವೂ ತನಿಖೆ ಮುಂದುವರಿಸಿದ್ದ ಲೋಕಾಯುಕ್ತರು ಇಂದೇ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ. ಆ ಬಳಿಕ ನ್ಯಾಯಾಲಯ ತೀರ್ಪು ಪ್ರಕಟ ಮಾಡಲಿದೆ.
ಏನಿದು ಪ್ರಕರಣ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾ (MUDA) ಮೂಲಕ ನೀಡಲಾದ 14 ಸೈಟ್‌ಗಳ ಹಂಚಿಕೆಯ ಕುರಿತು ಲೋಕಾಯುಕ್ತರು ತನಿಖೆ ನಡೆಸಿದ್ದರು. ತನಿಖೆ ಬಳಿಕ ಲೋಕಾಯುಕ್ತರು ಯಾವುದೇ ಆಪಾದನೆಗೆ ಸಾಕ್ಷ್ಯ ಸಿಗಲಿಲ್ಲವೆಂದು ಸೂಚಿಸಿ ‘ಬಿ ರಿಪೋರ್ಟ್’ ಸಲ್ಲಿಸಿದ್ದರು. ಈ ವರದಿಯನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸ್ವತಃ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಇದೇ ಪ್ರಕರಣದಲ್ಲಿ ಇಡಿ (ED) ಕೂಡ ಲೋಕಾಯುಕ್ತರ ವರದಿಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಏಪ್ರಿಲ್ 8ಕ್ಕೆ ಮುಂದೂಡಲಾಗಿದೆ.
‘ಬಿ ರಿಪೋರ್ಟ್’ ಎಂದರೆ ಏನು?
ತನಿಖಾ ಸಂಸ್ಥೆಗೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳು ಲಭ್ಯವಾಗದಿದ್ದಾಗ ಅಥವಾ ಆರೋಪ ಸಾಬೀತುಪಡಿಸಲು ಸಾಧ್ಯವಿಲ್ಲವೆಂದು ಕಂಡುಬಂದಾಗ ಸಲ್ಲಿಸುವ ವರದಿಯೇ ‘ಬಿ ರಿಪೋರ್ಟ್ʼ. ಇದನ್ನು ನ್ಯಾಯಾಲಯ ಅಂಗೀಕರಿಸಿದರೆ ಪ್ರಕರಣ ಮುಕ್ತಾಯವಾಗುತ್ತದೆ. ಇನ್ನೊಂದೆಡೆ, ವರದಿ ತಿರಸ್ಕೃತವಾದರೆ ತನಿಖೆ ಮುಂದುವರಿಯಬಹುದು ಅಥವಾ ಹೊಸ ಕ್ರಮ ಕೈಗೊಳ್ಳಬಹುದು. ಇದೀಗ ನ್ಯಾಯಾಲಯದ ತೀರ್ಪು ಸಿದ್ದರಾಮಯ್ಯ ಕುಟುಂಬಕ್ಕೆ ನಿರಾಳ ತರಲಿದೆಯೋ ಅಥವಾ ಹೊಸ ಸವಾಲಾಗಲಿದೆಯೋ ಕುತೂಹಲ ಮೂಡಿಸಿದೆ.

