
ಪ್ರಿಯಾಂಕ್ ಖರ್ಗೆ
'ಜನ ಗಣ ಮನ' ಬ್ರಿಟಿಷರ ಸ್ವಾಗತ ಗೀತೆ; ಸಂಸದ ಕಾಗೇರಿ ಹೇಳಿಕೆಗೆ ವಿರೋಧ
ಕಾಗೇರಿ ಅವರ ಹೇಳಿಕೆಗೆ ಟ್ವಿಟರ್ (ಈಗ ಎಕ್ಸ್) ನಲ್ಲಿ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಈ ಹೇಳಿಕೆಯು ಆರ್‌ಎಸ್‌ಎಸ್‌ನ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ರಾಷ್ಟ್ರಗೀತೆ 'ಜನ ಗಣ ಮನ'ವನ್ನು ಬ್ರಿಟಿಷ್ ಅಧಿಕಾರಿಯ ಸ್ವಾಗತಕ್ಕಾಗಿ ರಚಿಸಲಾಗಿತ್ತು" ಎಂದು ಉತ್ತರ ಕನ್ನಡ ಸಂಸದ ಮತ್ತು ಮಾಜಿ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ವಿವಾದವನ್ನು ಹುಟ್ಟುಹಾಕಿದೆ. ಈ ಹೇಳಿಕೆಗೆ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಐತಿಹಾಸಿಕ ನಿಲುವನ್ನು ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದ್ದಾರೆ.
ಹೊನ್ನಾವರದಲ್ಲಿ ಬುಧವಾರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ 'ಏಕತೆಗಾಗಿ ನಡಿಗೆ' ಕಾರ್ಯಕ್ರಮದಲ್ಲಿ ಮಾತನಾಡಿದ ಕಾಗೇರಿ, "'ವಂದೇ ಮಾತರಂ' ನಮ್ಮ ರಾಷ್ಟ್ರಗೀತೆಯಾಗಬೇಕಿತ್ತು, ಆದರೆ ನಮ್ಮ ಪೂರ್ವಜರು ಬ್ರಿಟಿಷ್ ಅಧಿಕಾರಿಗಳ ಸ್ವಾಗತಕ್ಕೆ 'ಜನ ಗಣ ಮನ'ವನ್ನು ಆಯ್ಕೆ ಮಾಡಿದರು. 'ವಂದೇ ಮಾತರಂ' ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡಿದ ಗೀತೆಯಾಗಿದ್ದು, 150 ವರ್ಷಗಳ ಇತಿಹಾಸ ಹೊಂದಿದೆ. ಈ ಗೀತೆಯು ದೇಶದೆಲ್ಲೆಡೆ ಪ್ರತಿಧ್ವನಿಸಬೇಕು," ಎಂದು ಹೇಳಿದ್ದರು
ಪ್ರಿಯಾಂಕ್ ಖರ್ಗೆ ತಿರುಗೇಟು
ಕಾಗೇರಿ ಅವರ ಹೇಳಿಕೆಗೆ ಟ್ವಿಟರ್ (ಈಗ ಎಕ್ಸ್) ನಲ್ಲಿ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಈ ಹೇಳಿಕೆಯು ಆರ್‌ಎಸ್‌ಎಸ್‌ನ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ. "ರಾಷ್ಟ್ರಗೀತೆ 'ಜನ ಗಣ ಮನ'ವನ್ನು 1911ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು 'ಭಾರತೋ ಭಾಗ್ಯ ವಿಧಾತಾ' ಎಂಬ ಶೀರ್ಷಿಕೆಯಡಿ ಬರೆದಿದ್ದು, ಇದನ್ನು ಯಾವುದೇ ರಾಜಕೀಯ ವ್ಯಕ್ತಿಯನ್ನು ಗೌರವಿಸಲು ರಚಿಸಲಾಗಿಲ್ಲ. ಬದಲಿಗೆ, ಭಾರತದ ಭಾಗ್ಯವನ್ನು ನಿರ್ಧರಿಸುವ ದೈವವನ್ನು ಸ್ತುತಿಸಲು ರಚಿಸಲಾಗಿದೆ ಎಂದು ಟ್ಯಾಗೋರ್ ಅವರೇ 1937 ಮತ್ತು 1939ರಲ್ಲಿ ಸ್ಪಷ್ಟಪಡಿಸಿದ್ದರು" ಎಂದು ಖರ್ಗೆ ವಿವರಿಸಿದ್ದಾರೆ.
ಐತಿಹಾಸಿಕ ಹಿನ್ನೆಲೆ ಮತ್ತು ಆರೋಪಗಳು
ಖರ್ಗೆ ಅವರು ತಮ್ಮ ಪೋಸ್ಟ್‌ನಲ್ಲಿ, "ಆರ್‌ಎಸ್‌ಎಸ್‌ನ 'ಆರ್ಗನೈಸರ್' ಪತ್ರಿಕೆಯಲ್ಲಿ 1949ರಲ್ಲಿ ಭಾರತದ ಸಂವಿಧಾನವನ್ನು 'ಭಾರತೀಯವಲ್ಲ' ಎಂದು ವಿಮರ್ಶಿಸಲಾಗಿತ್ತು ಮತ್ತು ಮನುಸ್ಮೃತಿಯನ್ನು ಜಾರಿಗೆ ತರಲು ಆಗ್ರಹಿಸಲಾಗಿತ್ತು. ಅಲ್ಲದೆ, 1947ರ ಆಗಸ್ಟ್ 14ರಂದು, ಸ್ವಾತಂತ್ರ್ಯದ ಮುನ್ನಾದಿನ, ತ್ರಿವರ್ಣ ಧ್ವಜವನ್ನು ಅವಮಾನಿಸುವ ಲೇಖನಗಳು ಪ್ರಕಟವಾಗಿದ್ದವು. ಈ 'ವೈರಸ್' ಅನ್ನು ಗುಣಪಡಿಸಬೇಕಾಗಿದೆ" ಎಂದು ಖರ್ಗೆ ತೀವ್ರವಾಗಿ ಟೀಕಿಸಿದ್ದಾರೆ.
ಈ ಹೇಳಿಕೆ-ಪ್ರತಿಹೇಳಿಕೆಗಳು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಚಿಹ್ನೆಗಳ ಬಗೆಗಿನ ಐತಿಹಾಸಿಕ ವ್ಯಾಖ್ಯಾನಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.

