
ಭಾರೀ ಚರ್ಚೆಗೆ ಗ್ರಾಸವಾದ ಸಂಸದ ಸುನೀಲ್ ಬೋಸ್ ಕುಂಕುಮ ಪ್ರಸಂಗ!
ಆಷಾಢ ಪೂಜೆಗಾಗಿ ದೇವಾಲಯಕ್ಕೆ ಹೋದ ಜನಪ್ರತಿನಿಧಿಯೊಬ್ಬರು ಜೊತೆಗೆ ಬಂದಿದ್ದ ಸರ್ಕಾರಿ ಅಧಿಕಾರಿಯ ಹಣೆಗೆ ಅರಿಶಿಣ ಕುಂಕುಮ ಹಚ್ಚಿ ಭಾರೀ ಚರ್ಚೆಗೆ ತುಪ್ಪ ಸುರಿದಿದ್ದಾರೆ.
ಹೌದು, ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಹೀಗೆ ಸಾರ್ವಜನಿಕ ಕುತೂಹಲದ ಚರ್ಚೆಗೆ ಈಡಾಗುವ ಕುಂಕುಮ ಪ್ರಹಸನ ನಡೆದಿದ್ದು ಚಾಮರಾಜನಗರದ ಸಂಸದ ಸುನೀಲ್ ಬೋಸ್ ಅವರಿಂದ. ಮೈಸೂರು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರಾಗಿರುವ ಮಹಿಳಾ ಅಧಿಕಾರಿಯ ಹಣೆಗೆ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಕುಂಕುಮ ಇಟ್ಟು ಚರ್ಚೆಗೆ ಗ್ರಾಸವಾಗಿದ್ದಾರೆ.
ಮೂರನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮರಾಜನಗರದ ಸಂಸದ ಸುನೀಲ್ ಬೋಸ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ವೇಳೆ ಚಾಮುಂಡೇಶ್ವರಿ ಗರ್ಭಗುಡಿಯಲ್ಲಿಯೇ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿಯ ಹಣೆಗೆ ಕುಂಕುಮ ಇಟ್ಟಿದ್ದಾರೆ. ಅಲ್ಲದೇ ತಾಯಿಯ ಆಶೀರ್ವಾದದ ಪ್ರಸಾದವನ್ನು ಸಹ ಅರ್ಚಕರು ಜಂಟಿ ನಿರ್ದೇಶಕಿಗೆ ನೀಡಿ ಆಶೀರ್ವದಿಸಿದ್ದಾರೆ. ಈ ಕುಂಕುಮ ಪ್ರಸಂಗದ ಫೋಟೋಗಳು ಸದ್ಯ ವೈರಲ್ ಆಗುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಸಂಸದರೊಬ್ಬರು, ಮಹಿಳಾ ಅಧಿಕಾರಿಯ ಹಣೆಗೆ ಕುಂಕುಮ ಇಟ್ಟ ಸಂಗತಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಚಾಮುಂಡಿ ಬೆಟ್ಟಕ್ಕೆ ಸಂಸದ ಸುನೀಲ್ ಬೋಸ್ ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಜೊತೆ ಭೇಟಿ ನೀಡಿದ್ದರು. ಆ ವೇಳೆ ಸಂಸದರು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಈ ವೇಳೆ ತಮ್ಮ ಬೆಂಬಲಿಗರ ಸಮ್ಮುಖದಲ್ಲೇ ನಿರ್ದೇಶಕಿಯ ಹಣೆಗೆ ಕುಂಕುಮ ಇಟ್ಟಿದ್ದರು. ಘಟನೆಯ ವಿಡಿಯೋ, ಫೋಟೊಗಳು ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮದುವೆಯಾಗಿಲ್ಲ ಎಂದಿದ್ದ ಸಂಸದರು!
ಸಂಸದರು ಮಹಿಳಾ ಅಧಿಕಾರಿಗೆ ದೇವಾಲಯದಲ್ಲಿ ಕುಂಕುಮವಿಟ್ಟ ಘಟನೆ ಇಷ್ಟೊಂದು ವ್ಯಾಪಕ ಚರ್ಚೆಗೆ ಗ್ರಾಸವಾಗಲು, ಸಾರ್ವಜನಿಕ ಕುತೂಹಲ ಕೆರಳಿಸಲು ಮತ್ತು ವಿಶೇಷವಾಗಿ ಪ್ರತಿಪಕ್ಷಗಳ ಕಣ್ಣುಕೆಂಪಾಗಿಸಲು ಅಸಲಿ ಕಾರಣ ಬೇರೆಯೇ ಇದೆ. ಅದು ಚುನಾವಣಾ ಆಯೋಗಕ್ಕೆ ಸಂಸದರು ಸಲ್ಲಿಸಿರುವ ಅಫಿಡವಿಟ್!
ಚಾಮರಾಜನಗರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಸುನೀಲ್ ಬೋಸ್ ಚುನಾವಣಾ ಆಯೋಗಕ್ಕೆ ಅಫಿಡೆವಿಟ್ ಸಲ್ಲಿಸುವ ವೇಳೆ ತಮ್ಮ ವೈಯಕ್ತಿಕ ವಿವರದಲ್ಲಿ ಹೆಂಡತಿ, ಮಕ್ಕಳು ಹಾಗೂ ಹಿಂದೂ ಅವಿಭಕ್ತ ಕುಟುಂಬ ಬಗ್ಗೆ ನಿಖರವಾದ ಮಾಹಿತಿ ನೀಡಿರಲಿಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮಗೆ ʼಮದುವೆಯಾಗಿಲ್ಲʼ ಎಂದು ಸುನೀಲ್ ಬೋಸ್ ಅಫಿಡೆವಿಟ್ ಸಲ್ಲಿಸಿದ್ದರು ಎನ್ನಲಾಗಿದೆ.
ಆದರೆ, ಸುನೀಲ್ ಬೋಸ್ ತಮ್ಮ ವೈವಾಹಿಕ ಜೀವನವನ್ನು ಮರೆಮಾಚಿದ್ದಾರೆ. ಅವರಿಗೆ ವಿವಾಹವಾಗಿದೆ ಮತ್ತು ಮಗು ಕೂಡ ಇದೆ ಎಂದು ಚಾಮರಾಜನಗರ ಬಿಜೆಪಿ ಘಟಕ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಸುನೀಲ್ ಬೋಸ್ ಅವರು ಅಧಿಕಾರಿ ಎಂ.ಕೆ. ಸವಿತಾ ಅವರನ್ನು ಮದುವೆಯಾಗಿದ್ದು, ಅವರಿಗೆ ಆರು ವರ್ಷದ ಹೆಣ್ಣು ಮಗುವಿದೆ ಎಂದು ಫೋಟೊ ಸಹಿತ ಬಿಜೆಪಿ ದೂರು ದಾಖಲಿಸಿತ್ತು.
ಇದೀಗ ಚಾಮುಂಡಿ ಬೆಟ್ಟದ ಫೋಟೋ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಲು ಸಂಸದರ ಚುನಾವಣಾ ಆಯೋಗದ ಪ್ರಮಾಣಪತ್ರ ಮತ್ತು ಅದನ್ನು ಪ್ರಶ್ನಿಸಿ ಬಿಜೆಪಿ ಸಲ್ಲಿಸಿದ್ದ ದೂರು ಕಾರಣ!
ಹಿರಿಯ ಕಾಂಗ್ರೆಸ್ ನಾಯಕ, ಸಚಿವ ಡಾ ಎಚ್ ಸಿ ಮಹದೇವಪ್ಪ ಅವರ ಪುತ್ರರಾಗಿರುವ 42 ವರ್ಷದ ಸುನೀಲ್ ಬೋಸ್ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರ ಪರಿಶಿಷ್ಟ ಜಾತಿ ಮೀಸಲು ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು ಸಂಸದರಾಗಿದ್ದಾರೆ.