MP Sudhakar’s Wife Faces Cyber Shock: Fraudsters Loot ₹14 Lakh
x

ಸಂಸದ ಡಾ. ಕೆ. ಸುಧಾಕರ್‌ ಪತ್ನಿ ಡಾ.ಪ್ರೀತಿ 

ಸಂಸದ ಸುಧಾಕರ್ ಪತ್ನಿಗೆ ಸೈಬರ್ ಶಾಕ್: ಕಳ್ಳರು 14 ಲಕ್ಷ ರೂಪಾಯಿ ದೋಚಿದ್ದು ಹೀಗೆ...

ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, 'ಗೋಲ್ಡನ್ ಅವರ್' ಒಳಗೆ ವಂಚಕರು ಬಳಸಿದ್ದ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


Click the Play button to hear this message in audio format

"ನಾವು ಮುಂಬೈ ಸೈಬರ್ ಪೊಲೀಸರು, ನಿಮ್ಮ ದಾಖಲೆಗಳನ್ನು ಬಳಸಿ ಅಕ್ರಮ ವ್ಯವಹಾರ ನಡೆಸಲಾಗಿದೆ, ತಕ್ಷಣ ವಿಡಿಯೋ ಕಾಲ್‌ಗೆ ಬನ್ನಿ," ಎಂದು ಕರೆ ಮಾಡಿ, 'ಡಿಜಿಟಲ್ ಅರೆಸ್ಟ್'ನಲ್ಲಿದ್ದೀರಿ ಎಂದು ಬೆದರಿಸಿ, ಕುಟುಂಬದವರಿಗೂ ತಿಳಿಸದಂತೆ ನಿರ್ಬಂಧಿಸಿ, ಚಿಕ್ಕಬಳ್ಳಾಪುರದ ಸಂಸದ ಡಾ. ಕೆ. ಸುಧಾಕರ್ ಅವರ ಪತ್ನಿ ಡಾ. ಪ್ರೀತಿ ಸುಧಾಕರ್ ಅವರಿಂದ ಸೈಬರ್ ವಂಚಕರು ಬರೋಬ್ಬರಿ 14 ಲಕ್ಷ ಹಣವನ್ನು ದೋಚಿದ್ದಾರೆ. ಅತ್ಯಂತ ವ್ಯವಸ್ಥಿತವಾಗಿ ಹೆಣೆದ ಈ ವಂಚನೆಯ ಜಾಲವು, ಸೈಬರ್ ಕಳ್ಳರು ಸಮಾಜದ ಗಣ್ಯ ವ್ಯಕ್ತಿಗಳನ್ನೇ ಗುರಿಯಾಗಿಸಿಕೊಂಡು ಹೇಗೆ ಭಯ ಹುಟ್ಟಿಸಿ ಹಣ ದೋಚುತ್ತಾರೆ ಎಂಬುದಕ್ಕೆ ಮತ್ತೊಂದು ಆಘಾತಕಾರಿ ಉದಾಹರಣೆ.

ಕಳೆದ ಆಗಸ್ಟ್ 26 ರಂದು ಈ ಘಟನೆ ನಡೆದಿದ್ದು, ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ. ಪ್ರೀತಿ ಅವರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆಯಲ್ಲಿದ್ದ ವ್ಯಕ್ತಿಗಳು, ತಾವು ಮುಂಬೈ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. "ನಿಮ್ಮ ವೈಯಕ್ತಿಕ ದಾಖಲೆಗಳನ್ನು 'ಸದ್ಭತ್ ಖಾನ್' ಎಂಬ ವ್ಯಕ್ತಿಯು ದುರ್ಬಳಕೆ ಮಾಡಿಕೊಂಡು, ಅಕ್ರಮವಾಗಿ ಕ್ರೆಡಿಟ್ ಕಾರ್ಡ್ ಪಡೆದು, ಹಣಕಾಸು ವಂಚನೆ ಎಸಗಿದ್ದಾನೆ. ಆ ಹಣವನ್ನು ಬಳಸಿ ವಿಯೆಟ್ನಾಂ, ಕಾಂಬೋಡಿಯಾದಂತಹ ದೇಶಗಳಿಗೆ ಅಕ್ರಮವಾಗಿ ಜನರನ್ನು ಕಳುಹಿಸಲಾಗಿದೆ. ನಾವು ಆತನನ್ನು ಬಂಧಿಸಿದ್ದು, ವಿಚಾರಣೆ ವೇಳೆ ನಿಮ್ಮ ಹೆಸರು ಬಹಿರಂಗವಾಗಿದೆ," ಎಂದು ನಂಬಲರ್ಹ ಕಥೆ ಕಟ್ಟಿ, ಡಾ. ಪ್ರೀತಿ ಅವರನ್ನು ಆತಂಕಕ್ಕೆ ದೂಡಿದ್ದಾರೆ.

ಭರ್ಜರಿ ಪ್ಲ್ಯಾನ್​

ತಮ್ಮ ಮಾತಿಗೆ ಮತ್ತಷ್ಟು ಪುಷ್ಟಿ ನೀಡಲು, ಆರೋಪಿಯೊಬ್ಬನನ್ನು ಬಂಧಿಸಿರುವ ಫೋಟೋವನ್ನು ಕಳುಹಿಸಿ, ತಕ್ಷಣವೇ ವಿಡಿಯೋ ಕಾಲ್ ಮೂಲಕ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ವಿಡಿಯೋ ಕಾಲ್‌ನಲ್ಲಿ, ಅವರನ್ನು 'ಅರೆಸ್ಟ್' ಮಾಡಲಾಗಿದೆ ಎಂದು ಘೋಷಿಸಿ, ಈ ವಿಷಯವನ್ನು ಯಾರಿಗೂ ತಿಳಿಸದಂತೆ ಕಟ್ಟುನಿಟ್ಟಾಗಿ ಎಚ್ಚರಿಸಿದ್ದಾರೆ. ಒಂದು ವೇಳೆ ಈ ವಿಷಯ ಹೊರಗೆ ತಿಳಿದರೆ, ಅವರ ಎಲ್ಲಾ ಗುರುತಿನ ಚೀಟಿಗಳನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಬಳಿಕ, "ನಿಮ್ಮ ಬ್ಯಾಂಕ್ ಖಾತೆಯನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಲಾಗಿದೆ. ಅದನ್ನು ಪರಿಶೀಲಿಸಬೇಕಿರುವುದರಿಂದ, ನಿಮ್ಮ ಖಾತೆಯಲ್ಲಿರುವ ಹಣವನ್ನು ನಾವು ನೀಡುವ 'ಪರಿಶೀಲನಾ ಖಾತೆ'ಗೆ ವರ್ಗಾಯಿಸಿ. ಆರ್‌ಬಿಐ ನಿಯಮಗಳ ಪ್ರಕಾರ, 45 ನಿಮಿಷಗಳಲ್ಲಿ ಪರಿಶೀಲಿಸಿ ಹಣವನ್ನು ಹಿಂದಿರುಗಿಸುತ್ತೇವೆ," ಎಂದು ನಂಬಿಸಿದ್ದಾರೆ. ವಂಚಕರ ಮಾತನ್ನು ನಂಬಿದ ಮತ್ತು ಬಂಧನದ ಭಯದಲ್ಲಿದ್ದ ಡಾ. ಪ್ರೀತಿ, ಅವರು ನೀಡಿದ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ 14 ಲಕ್ಷ ವರ್ಗಾಯಿಸಿದ್ದಾರೆ.

ಹಣ ವರ್ಗಾವಣೆಯಾದ ಸ್ವಲ್ಪ ಸಮಯದ ನಂತರ, ತಾವು ಮೋಸ ಹೋಗಿರುವುದು ಅವರ ಅರಿವಿಗೆ ಬಂದಿದೆ. ತಕ್ಷಣವೇ ಅವರು ಪಶ್ಚಿಮ ವಿಭಾಗದ ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, 'ಗೋಲ್ಡನ್ ಅವರ್' ಒಳಗೆ ವಂಚಕರು ಬಳಸಿದ್ದ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ, ನ್ಯಾಯಾಲಯದ ಆದೇಶದ ಮೇರೆಗೆ, ಫ್ರೀಜ್ ಆಗಿದ್ದ ಸಂಪೂರ್ಣ 14 ಲಕ್ಷ ರೂಪಾಯಿ ಹಣವನ್ನು ಡಾ. ಪ್ರೀತಿ ಅವರ ಖಾತೆಗೆ ಮರುಪಾವತಿ ಮಾಡಲಾಗಿದೆ.

Read More
Next Story