
ಮೆಕ್ಕೆಜೋಳ ಖರೀದಿ, ಬೆಳೆ ಪರಿಹಾರಕ್ಕೆ ಒತ್ತಾಯಿಸಿ ಸಿಎಂಗೆ ಸಂಸದ ಬೊಮ್ಮಾಯಿ ಪತ್ರ
ರಾಜ್ಯದಲ್ಲಿ ಸುಮಾರು 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಕಳೆದ ವರ್ಷ 54 ಲಕ್ಷ ಮೆಟ್ರಿಕ್ ಟನ್ ಇಳುವರಿ ಬಂದಿದೆ. ಈ ವರ್ಷವೂ ಅಷ್ಟೇ ಪ್ರಮಾಣದ ಉತ್ಪನ್ನ ಬರುವ ನಿರೀಕ್ಷೆ ಇದೆ.
ರಾಜ್ಯದಲ್ಲಿ ಕಳೆದೆರೆಡು ವರ್ಷಗಳಿಂದ ಸಂಭವಿಸಿರುವ ಅತಿವೃಷ್ಟಿಯಿಂದ ಲಕ್ಷಾಂತರ ಹೆಕ್ಟೇರ್ ಬೆಳೆ ನಾಶವಾಗಿದೆ. ಬೆಳೆ ನಷ್ಟ ಪರಿಹಾರ ಸಮೀಕ್ಷೆಯಲ್ಲಿ ಲೋಪಗಳಾಗಿದ್ದು, ಕೂಡಲೇ ರೈತರಿಗೆ ಬೆಳೆ ಪರಿಹಾರ ನೀಡಲು ಕ್ರಮ ಜರುಗಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಅವರು ಸಿಎಂಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಕಳೆದ ಎರಡು ವರ್ಷದಿಂದ ವಿಪರೀತ ಮಳೆಯಾಗಿದೆ. ರಾಜ್ಯದ ಬಹುತೇಕ ಬೆಳೆಗಳು ನಾಶವಾಗಿ ರೈತರು ಎರಡೂ ವರ್ಷ ನಷ್ಟ ಅನುಭವಿಸಿದ್ದಾರೆ. ಮೆಕ್ಕೆಜೋಳ, ಸೊಯಾಬಿನ್, ಹೆಸರು, ಈರುಳ್ಳಿ ಬೆಳೆಗಳು ನಾಶವಾಗಿವೆ. ಕಳೆದ ವರ್ಷ ಮಳೆಯಿಂದ ನಷ್ಟವಾಗಿರುವ ಬೆಳೆಗೆ ಇಲ್ಲಿಯವರೆಗೂ ಯಾವುದೇ ಪರಿಹಾರ ನೀಡಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದು ದೂರಿದ್ದಾರೆ.
ಬೆಳೆ ನಷ್ಟ ಪರಿಹಾರ ಸಮೀಕ್ಷೆ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಕೃಷಿ, ಕಂದಾಯ ಮತ್ತು ಸಾಂಖ್ಯಿಕ ಇಲಾಖೆ ಅಧಿಕಾರಿಗಳು ರೈತರ ಜಮೀನಿನಲ್ಲಿ ಪರೀಕ್ಷೆ ಮಾಡದೇ ವರದಿ ಸಲ್ಲಿಸಿದ್ದಾರೆ. ಇದರ ಪರಿಣಾಮ ಹಲವು ತಾಲೂಕುಗಳಲ್ಲಿ ಒಟ್ಟು ಬಿತ್ತನೆಯಾದ ಪ್ರದೇಶದ ಶೇ 10 ರಷ್ಟು ಬೆಳೆ ನಾಶವಾಗಿಲ್ಲ. ಕೆಲವು ತಾಲೂಕುಗಳಲ್ಲಿ ನಷ್ಟವೇ ಆಗಿಲ್ಲ ಎನ್ನುವುದು ಸತ್ಯಕ್ಕೆ ದೂರವಾಗಿದೆ. ಉದಾಹರಣೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಸಾಕಷ್ಟು ಬೆಳೆ ನಷ್ಟವಾಗಿದ್ದರೂ ನಷ್ಟವಾಗಿಲ್ಲ ಎಂದು ತೋರಿಸಲಾಗಿದೆ. ರಾಜ್ಯಾದ್ಯಂತ ಕೆಲ ತಾಲೂಕುಗಳಲ್ಲಿ ಹೀಗೆಯೇ ಆಗಿದೆ. ಕೂಡಲೇ ಇಂತಹ ಸಮಸ್ಯೆಗಳನ್ನು ಸರಿಪಡಿಸಬೇಕು. ನಷ್ಟವಾದ ಎಲ್ಲ ರೈತರಿಗೆ ಬೆಳೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಮೆಕ್ಕೆಜೋಳ ಖರೀದಿಗೆ ನಿರ್ದೇಶನ ನೀಡಿ
ರಾಜ್ಯದಲ್ಲಿ ಸುಮಾರು 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆ ಜೋಳ ಬೆಳೆಯಲಾಗಿದೆ. ಕಳೆದ ವರ್ಷ 54 ಲಕ್ಷ ಮೆಟ್ರಿಕ್ ಟನ್ ಇಳುವರಿ ಬಂದಿದ್ದು, ಈ ವರ್ಷವೂ ಅಷ್ಟೇ ಪ್ರಮಾಣದ ಇಳುವರಿ ಬರುವ ನಿರೀಕ್ಷೆ ಇದೆ. ಈ ವರ್ಷ ಮೆಕ್ಕೆಜೋಳದ ಬೆಲೆ ಪ್ರತಿ ಕ್ವಿಂಟಲ್ 1,600 ರೂ.ಗೆ ಇಳಿದಿರುವುದು ರೈತರಿಗೆ ಆಘಾತ ತಂದಿದೆ. ಕೇಂದ್ರ ಸರ್ಕಾರ ಈಗಾಗಲೇ ಎಂಎಸ್‌ಪಿ 2,400 ರೂ. ಘೋಷಣೆ ಮಾಡಿದೆ. ಇದರ ಮೇಲೆ ರಾಜ್ಯ ಸರ್ಕಾರ ಕನಿಷ್ಠ 500 ರೂ. ಪ್ರತಿ ಕ್ವಿಂಟಲ್‌ಗೆ ಕೊಡಬೇಕೆಂದು ಎಲ್ಲ ಜಿಲ್ಲೆಗಳಲ್ಲಿ ಆಗ್ರಹಿಸುತ್ತಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರದ ನಿರ್ದೇಶನಕ್ಕೆ ಕಾಯದೇ ಮೆಕ್ಕೆ ಜೋಳ ಖರೀದಿಸಲಾಗಿತ್ತು. ಈಗ ರಾಜ್ಯ ಸರ್ಕಾರ ಕೂಡ ಮೆಕ್ಕೆ ಜೋಳ ಖರೀದಿಸಿ ರೈತರ ನೆರವಿಗೆ ಧಾವಿಸಬೇಕು. ನಂತರ ಕೇಂದ್ರದ ಬಳಿ ನೆರವು ಕೋರಬಹುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
15 ಲಕ್ಷ ಹೆಕ್ಟರ್ ಬೆಳೆ ನಾಶ
ಸದ್ಯಕ್ಕೆ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಸರ್ಕಾರ ಎಕರೆಗೆ 6,700 ರೂ. ಪರಿಹಾರ ನೀಡಲು ಮುಂದಾಗಿದೆ. ಆದರೆ, ಈ ಮೊತ್ತವನ್ನು ಪರಿಷ್ಕರಿಸ ಬೇಕೆಂದು ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರ ಕೃಷ್ಣಾ ನದಿಗೆ ಹೆಚ್ಚು ನೀರು ಬಿಟ್ಟಿದ್ದರಿಂದ ಪ್ರವಾಹ ಉಂಟಾಗಿ ಮತ್ತು ಅತಿಯಾದ ಮಳೆಯಿಂದಾಗಿ ಮೆಕ್ಕೆಜೋಳ, ಹತ್ತಿ, ಕಬ್ಬು, ಹೆಸರು, ತೊಗರಿ, ಭತ್ತ, ಶುಂಠಿ, ಅಡಕೆ, ಮೆಣಸಿನಕಾಯಿ ಮತ್ತು ವಿವಿಧ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿತ್ತು. ಕಲಬುರಗಿ, ರಾಯಚೂರು, ಬೀದರ್, ಬೆಳಗಾವಿ, ಯಾದಗಿರಿ, ಹಾವೇರಿ ಸೇರಿದಂತೆ ಧಾರವಾಡದ ರೈತರಿಗೆ ಹೆಚ್ಚಿನ ನಷ್ಟ ಉಂಟಾಗಿತ್ತು.

