ಅರೆರೆ... ಅವರೆ....! ಬೆಂಗಳೂರು ಬಸವನಗುಡಿಯಲ್ಲಿ ʼಅವರೆʼ ಕಾರುಬಾರು
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭವಾಗಿರುವ 25ನೇ ವರ್ಷದ ಅವರೆ ಮೇಳ ವೈವಿದ್ಯಮಯ ಅವರೆ ಖಾದ್ಯಗಳಿಂದ ಜನರನ್ನು ಸೆಳೆಯುತ್ತಿದೆ. ಡಿ.27 ರಿಂದ ಆರಂಭವಾಗಿರುವ ಅವರೆ ಮೇಳ ಜ. 5 ರವರೆಗೆ ನಡೆಯಲಿದೆ.
ಮಕರ ಸಂಕ್ರಾಂತಿ ಸಮೀಪಿಸುತ್ತಿದ್ದಂತೆ ಅವರೆಕಾಯಿ ಸೊಗಡು ಎಲ್ಲೆಡೆ ವ್ಯಾಪಿಸುತ್ತಿದೆ. ಸಂಕ್ರಾಂತಿಯೊಂದಿಗೆ ಬರುವ ಸಾಲು ಸಾಲು ಪರಿಷೆ, ಜಾತ್ರೆಗಳಲ್ಲಿ ಅವರೆಕಾಯಿಯದ್ದೇ ಕಾರುಬಾರು. ಅವರೆಕಾಯಿ ಮಾರಾಟಕ್ಕಾಗಿಯೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅವರೆ ಮೇಳ ಆರಂಭವಾಗಿದೆ. ಕಡಲೆಕಾಯಿ ಪರಿಷೆಗೆ ಪ್ರಸಿದ್ಧಿ ಪಡೆದಿರುವ ಬೆಂಗಳೂರಿನ ಬಸವನಗುಡಿಯಲ್ಲಿ ಅವರೆ ಮೇಳ ಕೂಡ 25 ನೇ ವರ್ಷಕ್ಕೆ ಕಾಲಿಟ್ಟಿದೆ. ನೆಲಮೂಲ ಸಂಸ್ಕೃತಿಗೆ ಪ್ರತೀಕವಾದ ಹಲವು ಪರಿಷೆಗಳಲ್ಲಿ ಬಸವನಗುಡಿಯ ಅವರೆ ಮೇಳವೂ ಒಂದಾಗಿದೆ.
25ನೇ ವರ್ಷದ ಹಿನ್ನೆಲೆಯಲ್ಲಿ ಅವರೆಮೇಳ 10 ದಿನಗಳ ಕಾಲ ನಡೆಯುತ್ತಿದೆ. ಹಿಂದೆಲ್ಲ ಅದು 5 ದಿನಗಳ ಕಾಲ ನಡೆಯುತ್ತಿತ್ತು. ಅವರೆ ಬೇಳೆಯ ಸಿಹಿತಿಂಡಿಗಳು, ಖಾದ್ಯಗಳಾದ ಸಾರು, ಹೋಳಿಗೆ, ದೋಸೆ, ಉಪ್ಪಿಟ್ಟು, ಜಾಮೂನ್, ನಿಪ್ಪಟ್ಟು, ಕೋಡುಬಳೆ ಮತ್ತು ಬಿರಿಯಾನಿ ಪಲಾವ್ ಸೇರಿದಂತೆ 150 ಕ್ಕೂ ಹೆಚ್ಚು ಭಕ್ಷ್ಯಗಳನ್ನು ತಯಾರಾಗಲಿದೆ. ಮೇಳಕ್ಕಾಗಿ 30 ಟನ್ ಗಿಂತ ಹೆಚ್ಚು ಅವರೆಕಾಯಿ ಇಲ್ಲಿಗೆ ಬಂದಿದೆ.
ಬಾಯಲ್ಲಿ ನೀರೂರಿಸುವ ಖಾದ್ಯಗಳು
ಅವರೆ ಮೇಳದಲ್ಲಿ ತೆರೆಯಲಾಗಿರುವ 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಅವರೆಕಾಳಿನಿಂದ ಸಿದ್ಧಪಡಿಸಿದ ತರಹೇವಾರಿ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತಿವೆ. ಅವರೆ ಬೇಳೆ ಐಸ್‌ಕ್ರೀಮ್, ಸಾರು, ಪಲ್ಯ, ಉಪ್ಪಿಟ್ಟು, ಜಾಮೂನು, ಹೋಳಿಗೆಯಂತಹ ಖಾದ್ಯಗಳ ಘಮಲು ಅವರೆ ಮೇಳದತ್ತ ಜನರನ್ನು ಕೈ ಬೀಸಿ ಕರೆಯುತ್ತಿವೆ. ಅವರೆ ಬೇಳೆಯಿಂದ ತರಹೇವಾರಿ ಖಾದ್ಯಗಳನ್ನು ತಯಾರಿಸುವಲ್ಲಿ ಬಾಣಸಿಗರು ನಿರತರಾಗಿದ್ದಾರೆ.
ಇಲ್ಲಿನ ವಿ.ವಿ.ಪುರಂನ ಫುಡ್ ಸ್ಟ್ರೀಟ್ ನಲ್ಲಿರುವ ವಾಸವಿ ಕಾಂಡಿಮೆಂಟ್ಸ್ ಮಾಲೀಕರಾದ ಗೀತಾ ಶಿವಕುಮಾರ್ ಅವರು 2000ನೇ ಇಸವಿಯಲ್ಲಿ ಆರಂಭಿಸಿದ ಈ ಮೇಳವು ಬೆಂಗಳೂರಿನ ಅತಿ ದೊಡ್ಡ ಆಹಾರ ಉತ್ಸವಗಳಲ್ಲಿ ಒಂದು.
ಗೀತಾ ಅವರ ಮಗಳು ಸ್ವಾತಿ ಕೆ.ಎಸ್, ಈಗ ಈ ಮೇಳದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. 2017ರಲ್ಲಿ ದೊಡ್ಡ ಕಂಪನಿಯ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಸ್ವಾತಿ ಅವರು ತಾಯಿಯೊಂದಿಗೆ ಕಾಂಡಿಮೆಂಟ್ಸ್ ವಹಿವಾಟು ನೋಡಿಕೊಳ್ಳುತ್ತಿದಾರೆ. 25ನೇ ವರ್ಷದ ಅವರೆ ಮೇಳಕ್ಕೆ ಭರದ ಸಿದ್ಧತೆ ನಡೆಯುತ್ತಿದೆ ಎಂದು ಸ್ವಾತಿ ಹೇಳಿದ್ದಾರೆ.
"ನಾವು ಕಳೆದ ಆರು ತಿಂಗಳಿನಿಂದ ದೊಡ್ಡ ಪ್ರಮಾಣದಲ್ಲಿ ತಯಾರಿ ನಡೆಸುತ್ತಿದ್ದೇವೆ. ಮೊದಲಾಗಿ ಐದರ ಬದಲು ಈ ಬಾರಿ ಹತ್ತು ದಿನ ಮೇಳ ನಡೆಯಲಿದೆ. ಹೆಚ್ಚು ರೈತರು, ಹೆಚ್ಚು ಉತ್ಪನ್ನಗಳು ಮತ್ತು ಹೆಚ್ಚು ಮಳಿಗೆಗಳು ಬರಲಿದೆ. ಡಿಸೆಂಬರ್ 27 ರಿಂದ ಜನವರಿ 5, 2025 ರವರೆಗೆ ಮೇಳ ಆಯೋಜನೆಗೊಂಡಿದೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೇಳ ನಡೆಯಲಿದೆ,ʼʼ ಎಂದು ಸ್ವಾತಿ ಹೇಳಿದ್ದಾರೆ.
ಮಾಗಡಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಚಿಂತಾಮಣಿ ಮತ್ತು ಕೋಲಾರದಿಂದ ಅವರೆಕಾಯಿ ಬರಲು ಪ್ರಾರಂಭಿಸಿವೆ. ಹವಾಮಾನ ವೈಪರೀತ್ಯದಿಂದಾಗಿ ಸ್ವಲ್ಪ ತಡವಾಗಿ ಬೇಳೆ ನಗರಕ್ಕೆ ಬರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೊರತೆಯಿಂದಾಗಿ ಅವರೆ ಬೇಳೆ ಕೆ.ಜಿ.ಗೆ ಸುಮಾರು 600 ರೂಪಾಯಿಷ್ಟಾಗಿಗತ್ತು. ಇದೀಗ 350 ರೂಪಾಯಿ.
ಅವರೆ ಮೇಳ ಕುರಿತಂತೆ ʼದ ಫೆಡರಲ್ʼ ಜೊತೆ ಮಾತನಾಡಿದ ಸ್ವಾತಿ, ʼಅವರೆ ಮೇಳಕ್ಕಾಗಿ ಆರು ತಿಂಗಳಿಂದ ಸಿದ್ಧತೆ ಮಾಡಿಕೊಂಡಿದ್ದೆವು. ಮೇಳದಲ್ಲಿ ಈಗ 100ಕ್ಕೂ ಹೆಚ್ಚು ಮಳಿಗೆಗಳಿವೆ. ಈ ಮಳಿಗೆಗಲ್ಲಿ 125ಕ್ಕೂ ಹೆಚ್ಚು ಬಗೆ ಬಗೆಯ ಅವರೆಬೇಳೆಯ ಖಾದ್ಯಗಳಿವೆ. ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಮಾಗಡಿ, ಕೋಲಾರ, ಚಿಂತಾಮಣಿ ಸೇರಿದಂತೆ ವಿವಿಧ ಭಾಗಗಳಿಂದ ರೈತರು ಅವರೆಕಾಯಿ ತಂದಿದ್ದಾರೆ. 25ನೇ ವರ್ಷದ ಅವರೆ ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆʼ ಎಂದು ವಿವರಿಸಿದರು.
ʼಅವರೆ ಮೇಳದಲ್ಲಿ ಜನಸಂದಣಿ ಹೆಚ್ಚುವುದರಿಂದ ನಿರ್ವಹಣೆ, ಪೇಮೆಂಟ್, ಇಂಟರ್ನೆಟ್ ಸಮಸ್ಯೆ ಎದುರಾಗುವ ಆತಂಕದಿಂದ ವೈಫೈ ಸೌಲಭ್ಯ ಒದಗಿಸಿದ್ದೇವೆ. ನೂಕು ನುಗ್ಗಲು ತಡೆಯಲು ಎಕ್ಸ್ಪ್ರೆಸ್ ಕೌಂಟರ್ಗಳನ್ನು ತೆರೆದಿದ್ದೇವೆ. ಮೇಳದಲ್ಲಿ ಭಾಗವಹಿಸುವವರು ಬುಕ್ ಮೈ ಶೋ ಫ್ಲಾಟ್ಫಾರಂನಲ್ಲಿ ಮುಂಗಡ ಬುಕ್ಕಿಂಗ್ ಮಾಡುವ ಸೌಲಭ್ಯ ಪರಿಚಯಿಸಿದ್ದೇವೆʼ ಎಂದು ಸ್ವಾತಿ ಹೇಳಿದರು.
ಹಿತಕಿದ ಅವರೆ ಬೇಳೆ ಸಂಗ್ರಹ
ಅವರೆ ಮೇಳದಲ್ಲಿ ಬಗೆ ಬಗೆಯ ಖಾದ್ಯಗಳಿಗಾಗಿ ಹಿತಕಿದ ಬೇಳೆಯನ್ನು ಹುಣಸೂರು ಹಾಗೂ ತುಮಕೂರು ಜಿಲ್ಲೆಗಳಿಂದ ತರಿಸಿಕೊಂಡಿದ್ದೇವೆ. ಜೊತೆಗೆ ನಮ್ಮ ಸಂಪರ್ಕದಲ್ಲಿರುವ 200 ಕ್ಕೂ ಹೆಚ್ಚು ರೈತರಿಂದಲೂ ಅವರೆ ಬೇಳೆ ತರಿಸಿಕೊಂಡಿದ್ದೇವೆ. ಹಿತಕಿದ ಬೇಳೆಯಿಂದಾಗಿ ಮಹಿಳೆಯರಿಗೆ ಆದಾಯವೂ ಸಿಕ್ಕಿದೆ. ಬೇಳೆ ಪೂರೈಕೆಗಾಗಿ ಹಾಪ್ಕಾಮ್ಸ್ನೊಂದಿಗೂ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಮೇಳದ ಉಸ್ತುವಾರಿ ವಹಿಸಿಕೊಂಡಿರುವ ಸ್ವಾತಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಹುಣಸೂರಿನಿಂದ ಬೇಳೆಗಳ ಸಂಗ್ರಹ
ಭಾರಿ ಪ್ರಮಾಣದಲ್ಲಿ ಬೇಕಾಗಿರುವ ಅವರೆ ಬೇಳೆಯನ್ನು ಹುಣಸೂರು ಮತ್ತು ತುಮಕೂರಿನಿಂದ ತರಿಸಲಾಗುತ್ತಿದೆ. "ಈ ಬಾರಿ ನಮಗೆ ದೊಡ್ಡ ಪ್ರಮಾಣದಲ್ಲಿ ಅವರೆ ಬೇಳೆ ಅಗತ್ಯವಿದೆ. ಮೊದಲ ಬಾರಿಗೆ, ನಾವು ಇಲ್ಲಿಯವರೆಗೆ ಸಂಗ್ರಹಿಸದ ಜಿಲ್ಲೆಗಳ ರೈತರಿಂದ ಖರೀದಿಸುತ್ತಿದ್ದೇವೆ. ಅನೇಕರು ನಮ್ಮ ಜತೆ ಕೈಜೋಡಿಸಲು ಉತ್ಸುಕರಾಗಿದ್ದಾರೆ. ನಾವು ಹಾಪ್ ಕಾಮ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ" ಎಂದು ಸ್ವಾತಿ ಹೇಳಿದ್ದಾರೆ.
"ನಮ್ಮ ಅವರೆ ಮೇಳದ ಕುಟುಂಬ ಬೆಳೆದಿದೆ. 200ಕ್ಕೂ ಹೆಚ್ಚು ರೈತರು ನಮ್ಮೊಂದಿಗೆ ಇದ್ದಾರೆ. ಹಿತಕಿದ ಬೇಳೆಯಿಂದಾಗಿ ಮಹಿಳೆಯರಿಗೂ ಆದಾಯ ಸಿಗುತ್ತದೆ. ಹೆಚ್ಚಿನ ರೈತರು ವರ್ಷವಿಡೀ ಅವರೆ ಬೇಳೆ ಕಳುಹಿಸುತ್ತಾರೆ (ಬೇಸಿಗೆಯಲ್ಲಿ ಎರಡು ತಿಂಗಳುಗಳನ್ನು ಹೊರತುಪಡಿಸಿ). ನವೆಂಬರ್‌ನಿಂದ ಜನವರಿಯಲ್ಲಿ ಬೇಳೆಯ ಪ್ರಮಾಣ ಹೆಚ್ಚು. ರಾಮನಗರ / ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಪಟ್ಟಣದಿಂದ ಉತ್ತಮ ಅವರೆಬೇಳೆ ಬರುತ್ತವೆ ಎಂದು ಸ್ವಾತಿ ಹೇಳಿದ್ದಾರೆ.
ಹಸಿರು ಬಣ್ಣದ ಸಮೇತ ಈ ಬಾರಿ ಫಸಲು ಉತ್ತಮವಾಗಿದೆ. ಹಸಿರು ಬಣ್ಣ ಮಣ್ಣಿನ ಗುಣದಿಂದ ಬರುತ್ತದೆ. ಈ ಅವರೆಯ 'ಸೊಗಡು' ಆಕರ್ಷಕವಾಗಿದೆ. ಈ ಬೆಳೆಗಳನ್ನು ಕೇವಲ ವಾಸನೆಯಿಂದಲೇ ಗುರುತಿಸಬಹುದು ಎಂದು ಸ್ವಾತಿ ಹೇಳುತ್ತಾರೆ.