Moral Policing in Davanagere: Woman Assaulted with Stick and Pipe, Six Arrested
x

ಮಹಿಳೆ ಮೇಲೆ ಹಲ್ಲೆ ನಡೆಸಿದ ಗುಂಪು (ವಿಡಿಯೊದಿಂದ ಪಡೆದ ಚಿತ್ರ)

ದಾವಣಗೆರೆಯಲ್ಲಿ ನೈತಿಕ ಪೊಲೀಸ್​ಗಿರಿ; ಮಹಿಳೆ ಮೇಲೆ ದೊಣ್ಣೆ, ಪೈಪ್​ನಿಂದ ಹಲ್ಲೆ, ಆರು ಮಂದಿಯ ಬಂಧನ

ಮಸೀದಿಯ ಹೊರಗೆ ಶಬೀನಾ ಹೋದಾಗ ಆರು ಜನರ ಗುಂಪೊಂದು ಆಕೆಯ ಮೇಲೆ ದಾಳಿ ನಡೆಸಿತ್ತು. ಶಬೀನಾ ಅವರಿಗೆ ಕೋಲು, ಕಬ್ಬಿಣದ ಪೈಪ್, ಹಗ್ಗ ಮತ್ತು ಕಲ್ಲುಗಳಿಂದ ಹೊಡೆದಿದ್ದರು.


ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರಕೆರೆ ಗ್ರಾಮದಲ್ಲಿ ಏಪ್ರಿಲ್ 9ರಂದು ಆಘಾತಕಾರಿ ಘಟನೆಯೊಂದು ನಡೆದಿದ್ದು, ಕಾನೂನು ಕೈಗೆತ್ತಿಕೊಂಡ ಗುಂಪೊಂದು 38 ವರ್ಷದ ಮಹಿಳೆ ಶಬೀನಾ ಬಾನು ಎಂಬವರ ಮೇಲೆ ಕಬ್ಬಿಣದ ಪೈಪ್​ ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ.

ಇಲ್ಲಿನ ಜಮಾ ಮಸೀದಿಯ ಹೊರಗೆ ಘಟನೆ ನಡೆದಿದ್ದು, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ದಾಳಿಯಲ್ಲಿ ಶಬೀನಾ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ.


ಹಲ್ಲೆಗೊಳಗಾದ ಶಬೀನಾ ಬಾನು, ತಾವರಕೆರೆ ಗ್ರಾಮದ ನಿವಾಸಿಯಾಗಿದ್ದು, ಮನೆ ಕೆಲಸಕ್ಕೆ ಹೋಗಿ ಜೀವನ ನಿರ್ವಹಿಸುತ್ತಿದ್ದಾರೆ. ಏಪ್ರಿಲ್ 7 ಶಬೀನಾ ಅವರ ಸಂಬಂಧಿ ನಸ್ರೀನ್​ (32) ಮತ್ತು ಫಯಾಜ್ ಎಂಬುವರು ಶಬೀನಾ ಅವರ ಮನೆಗೆ ಭೇಟಿ ನೀಡಿದ್ದರು. ಬಳಿಕ ಮೂವರು ಶಬೀನಾ ಅವರ ಮಕ್ಕಳೊಂದಿಗೆ ಬುಕ್ಕಾಂಬುದಿ ಬೆಟ್ಟಕ್ಕೆ ವಿಹಾರಕ್ಕೆ ತೆರಳಿ ಸಂಜೆ ಮನೆಗೆ ಮರಳಿದ್ದರು. ಶಬಿನಾ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ನಸ್ರೀನ್ ಹಾಗೂ ಫಯಾಜ್ ಅಲ್ಲೇ ಉಳಿದಿದ್ದರು. ಈ ವೇಳೆ ಶಬೀನಾ ಅವರ ಪತಿ ಜಮೀಲ್ ಅಹ್ಮದ್ (ಶಮೀರ್) ಮನೆಗೆ ಮರಳಿದ್ದು, ನಸ್ರೀನ್​ ಹಾಗೂ ಫಯಾಜ್ ಅವರನ್ನು ನೋಡಿ ಸ್ಥಳೀಯ ಜಮಾ ಮಸೀದಿಗೆ ಹೋಗಿ ಮೂವರ ವಿರುದ್ಧ ದೂರು ಸಲ್ಲಿಸಿದರು. ಬಳಿಕ ಮಸೀದಿ ಜನರು ಮೂವರನ್ನು ಕರೆಸಿದ್ದರು.

ಅಂತೆಯೇ ಮಸೀದಿಯ ಹೊರಗೆ ಶಬೀನಾ ಹೋದಾಗ ಆರು ಜನರ ಗುಂಪೊಂದು ಆಕೆಯ ಮೇಲೆ ದಾಳಿ ನಡೆಸಿತ್ತು. ಶಬೀನಾ ಅವರಿಗೆ ಕೋಲು, ಕಬ್ಬಿಣದ ಪೈಪ್, ಹಗ್ಗ ಮತ್ತು ಕಲ್ಲುಗಳಿಂದ ಹೊಡೆದಿದ್ದರು. ಘಟನೆಯ ವಿಡಿಯೊ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಏಪ್ರಿಲ್ 11ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಪೊಲೀಸ್ ಕಾರ್ಯಾಚರಣೆ

ವಿಡಿಯೊ ವೈರಲ್ ಆದ ಬಳಿಕ, ದಾವಣಗೆರೆ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ವಿಚಾರಿಸಿದ್ದರು. ಬಳಿಕ ಶಬಿನಾ ಅವರ ದೂರಿನಂತೆ ಮೊಹಮ್ಮದ್ ನಿಯಾಜ್ (32), ಮೊಹಮ್ಮದ್ ಗೌಸ್‌ಪೀರ್ (45), ಚಾಂದ್ ಬಾಷಾ (35), ಇನಾಯತ್ ಉಲ್ಲಾ (51) ದಸ್ತಗೀರ್ (24), ರಸೂಲ್ ಟಿ.ಆರ್ ಎಂಬುವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ಒಟ್ಟು ಎಂಟರಿಂದ ಹತ್ತು ಜನ ಹಲ್ಲೆ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದ್ದು, ಉಳಿದ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ

ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಎಕ್ಸ್‌ನಲ್ಲಿ, ವ್ಯಾಪಕವಾಗಿ ಹಂಚಿಕೆಯಾಗಿದೆ. ಕೆಲವರು ಈ ದಾಳಿಯನ್ನು "ತಾಲಿಬಾನ್ ಶೈಲಿಯ ಶಿಕ್ಷೆ" ಎಂದು ಖಂಡಿಸಿದ್ದಾರೆ. ಸಂಸದೆ ರೇಖಾ ಶರ್ಮಾ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ "ತಾಲಿಬಾನ್ ಆಡಳಿತ" ಜಾರಿಯಾಗುತ್ತಿದೆ ಎಂದು ಟೀಕಿಸಿದ್ದಾರೆ. ಎಕ್ಸ್ ಬಳಕೆದಾರರೊಬ್ಬರು, "ಮಸೀದಿಗಳಲ್ಲಿ ದೂರು ದಾಖಲಾಗುತ್ತಿವೆ, ಮೌಲಾನಾಗಳು ಶಿಕ್ಷೆಯನ್ನು ನಿರ್ಧರಿಸುತ್ತಿದ್ದಾರೆ, ಇಸ್ಲಾಮಿಕ್ ಗುಂಪುಗಳು ಶಿಕ್ಷೆ ಜಾರಿಗೊಳಿಸುತ್ತಿವೆ," ಎಂದು ಬರೆದಿದ್ದಾರೆ.

Read More
Next Story