ಮುಂಗಾರು ಅಧಿವೇಶನ | ರಚನಾತ್ಮಕ ಚರ್ಚೆ ಇಲ್ಲದೆ, ಗದ್ದಲದಲ್ಲೇ ಮುಗಿದ ಅಧಿವೇಶನ
x

ಮುಂಗಾರು ಅಧಿವೇಶನ | ರಚನಾತ್ಮಕ ಚರ್ಚೆ ಇಲ್ಲದೆ, ಗದ್ದಲದಲ್ಲೇ ಮುಗಿದ ಅಧಿವೇಶನ


ಹತ್ತು ದಿನಗಳ ಕಾಲ ನಡೆಯಬೇಕಿದ್ದ ಮುಂಗಾರು ಅಧಿವೇಶನ ಒಂದು ದಿನ ಮುಂಚಿತವಾಗಿ ಮುಕ್ತಾಯಗೊಂಡಿದೆ. ಕಳೆದ ವಾರ ಜು.15 ರಂದು ಅಧಿವೇಶನ ಆರಂಭಗೊಂಡಾಗಿನಿಂದ ಮುಗಿಯುವವರೆಗೆ ಪ್ರತಿಪಕ್ಷಗಳು ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮೈಸೂರು ಮುಡಾ ಅಕ್ರಮಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ನಿರಂತರ ಧರಣಿ, ಕಲಾಪ ಬಹಿಷ್ಕಾರ ನಡೆಸಿದವು. ಕೊನೆಯ ದಿನ ಗುರುವಾರ ಕೂಡ ಇಡೀ ದಿನ ಮುಡಾ ಹಗರಣದ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಗದ್ದಲ ನಡೆಸಿದರು.

ಈ ನಡುವೆ ಹಲವು ವಿಧೇಯಕಗಳು ಅಂಗೀಕಾರಗೊಂಡವು. ಮುಡಾ ಹಗರಣ‌ ಕುರಿತಂತೆ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕಲ್ಪಿಸುವಂತೆ, ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಒತ್ತಾಯ ಮಾಡುತ್ತಿರುವ ನಡುವೆಯೇ ಆರು ವಿಧೇಯಕಗಳು ಅಂಗೀಕಾರವಾಗಿವೆ. ಧರಣಿ ನಡೆಸುತ್ತಿರುವ ಸಂದರ್ಭದಲ್ಲಿ ಸ್ಪೀಕರ್ ಯು.ಟಿ ಖಾದರ್ ಅವರಿಗೆ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್ ಅವರು ಹೂ ಕೊಟ್ಟು ಚರ್ಚೆಗೆ ಅವಕಾಶ ಕೋರಿದರು.

ಪ್ರತಿಪಕ್ಷಗಳ ಸದಸ್ಯರು ಒಂದೆಡೆ ಪ್ರತಿಭಟನೆ, ಗದ್ದಲ ನಡೆಸುತ್ತಿರುವಾಗಲೇ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಭಾಷಣ ಮಾಡಿದರು. ಒಂದು ಕಡೆಯಲ್ಲಿ ಪ್ರಶ್ನೋತ್ತರ ಅವಧಿ ನಡೆದರೆ, ಮತ್ತೊಂದು ಕಡೆಯಲ್ಲಿ ಆರ್ ಅಶೋಕ್ ಮುಡಾ ವಿಚಾರವಾಗಿ ಭಾಷಣ ಮಾಡಿದರು.

ಈ ಮಧ್ಯೆ ಕಾನೂನು ಸಚಿವ ಎಚ್.ಕೆ‌‌.ಪಾಟೀಲ್ ಮಾತನಾಡಿ, "ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಮ್ಮ ಮೇಲೆ ಬಂದಿರುವ ಆರೋಪ ಸಂಬಂಧ ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಅವರು ಒಪ್ಪಿದ್ದಾರೆ. ಈ ಮೂಲಕ ಹಗರಣದಲ್ಲಿ ತಾನೊಬ್ಬ ಪ್ರಾಮಾಣಿಕ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಇಂತಹ ನಿರ್ಧಾರ ಕೈಗೊಳ್ಳುವುದಕ್ಕೂ ಗಟ್ಟಿತನ ಬೇಕು‌. ಅದನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬೊಮ್ಮಾಯಿ, ಕುಮಾರಸ್ವಾಮಿ ಮೇಲೆಯೂ ಆರೋಪಗಳು ಕೇಳಿ ಬಂದಿತ್ತು. ಅವರೇನಾದರೂ ತನಿಖೆಗೆ ಒಪ್ಪಿದ್ರಾ?" ಎಂದು ಮರು ಪ್ರಶ್ನಿಸಿದರು.

ಇದಕ್ಕೆ ಆಕ್ಷೇಪಿಸಿದ ವಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಈ ಗದ್ದಲದ ನಡುವೆಯೂ, ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕ ಮತ್ತು ಪುರಾತತ್ವ ಸ್ಥಳಗಳ ಅವಶೇಷ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ತಿದ್ದುಪಡಿ ವಿಧೇಯಕಗಳು, ಕರ್ನಾಟಕ ಭೂ ಕಂದಾಯ ವಿಧೇಯಕ, ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕ, ಕರ್ನಾಟಕ ವೈದ್ಯಕೀಯ ನೋಂದಣಿ‌ ಮತ್ತು ಇತರೆ ವಿಧೇಯಕ, ಕೆಲವು ಕಾನೂನು ತಿದ್ದುಪಡಿ ವಿಧೇಯಕಗಳು ಅಂಗೀಕಾರಗೊಂಡವು.

ತೊಡೆ ತಟ್ಟಿದ ನರೇಂದ್ರ ಸ್ವಾಮಿ

ಇನ್ನು ಬಿಜೆಪಿ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರೆ, ಕಾಂಗ್ರೆಸ್ ಸದಸ್ಯರು ಕೂಡಾ ಎದ್ದು ನಿಂತು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಕಾಂಗ್ರೆಸ್ ಸದಸ್ಯ ನರೇಂದ್ರ ಸ್ವಾಮಿ ಅವರು, ತೊಡೆ ತಟ್ಟಿಕೊಂಡು ಬಿಜೆಪಿ ಸದಸ್ಯರಿಗೆ ಸವಾಲು ಹಾಕಿದರು.

ಸದನದಲ್ಲಿ ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ತಡವಾಗಿ ಕಲಾಪ ಆರಂಭವಾದರೂ ಹತ್ತು ನಿಮಿಷಗಳ ಬಳಿಕ ಮತ್ತೆ ಕಲಾಪ ಮುಂದೂಡಲಾಯ್ತು. ಇತ್ತ ಬಿಜೆಪಿ ಸದಸ್ಯರು ಸದನದಲ್ಲಿ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು‌.

ಆನಂತರ ಪುನಃ ಕಲಾಪ ಆರಂಭಿಸಲು ಮುಂದಾದಾಗ ಮತ್ತೆ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಶುರು ಮಾಡಿದರು. ಆಗ ವಿಧಾನಸಭೆ ಹಾಗೂ ವಿಧಾನಪರಿಷತ್ ಕಲಾಪ ಅನಿರ್ದಿಷ್ಟಾವಧಿಗಳ ಕಾಲ ಮುಂದೂಡಿಕೆ ಮಾಡಲಾಯಿತು. ಸದನದಲ್ಲಿ ಮುಡಾ ವಿಚಾರವಾಗಿ ಬಿಜೆಪಿ- ಜೆಡಿ ಎಸ್ ಸದಸ್ಯರು ತೀವ್ರ ಗದ್ದಲ ಉಂಟು ಮಾಡಿದರು. ವಿಧಾನ ಪರಿಷತ್ ನಲ್ಲೂ ಬಿಜೆಪಿ ಜೆಡಿಎಸ್ ಸದಸ್ಯರು ಗದ್ದಲ ಉಂಟು ಮಾಡಿದರು. ಈ ಹಿನ್ನೆಲೆಯಲ್ಲಿ ಉಭಯ ಸನದಗಳ ಸಭಾಧ್ಯಕ್ಷರು ಅಧಿವೇಶನವನ್ನು ಅನಿರ್ದಿಷ್ಟಾವದಿಗೆ ಮುಂದೂಡಿದರು.

ಬಳಿಕ ಬಿಜೆಪಿ ಸದಸ್ಯರು ಜೈ ಶ್ರೀರಾಮ್ ಘೋಷಣೆ ಕೂಗಿದರು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಜೈಭೀಮ್ ಘೋಷಣೆ ಕೂಗಿದರು.

ಬಿಜೆಪಿ ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣದಲ್ಲಿ ಸರ್ಕಾರದ ಮತ್ತು ಸಿಎಂ ಸಿದ್ದರಾಮಯ್ಯ ಪಾತ್ರ ಆರೋಪಿಸಿ ಬಿಜೆಪಿ ರಾಜಭವನ ಚಲೋ ನಡೆಸಿದೆ. ಸದನ ಮುಗಿದ ಬೆನ್ನಲ್ಲೇ ಬಿಜೆಪಿ ಶಾಸಕರು ವಿಪಕ್ಷ ನಾಯಕ ಆರ್ ಅಶೋಕ ಅವರ ನೇತೃತ್ವದಲ್ಲಿ ರಾಜಭವನ ತೆರಳಿದರು.

Read More
Next Story