ಮುಂಗಾರು ಅಧಿವೇಶನ | ವಿಪಕ್ಷ ಧರಣಿ ನಡುವೆ ನೀಟ್ ಪರೀಕ್ಷೆ ರದ್ದು ಸೇರಿದಂತೆ ಹಲವು ನಿರ್ಣಯ‌ಗಳು ಅಂಗೀಕಾರ
x

ಮುಂಗಾರು ಅಧಿವೇಶನ | ವಿಪಕ್ಷ ಧರಣಿ ನಡುವೆ ನೀಟ್ ಪರೀಕ್ಷೆ ರದ್ದು ಸೇರಿದಂತೆ ಹಲವು ನಿರ್ಣಯ‌ಗಳು ಅಂಗೀಕಾರ

ಪ್ರತಿಪಕ್ಷಗಳ ಗಲಾಟೆ ನಡುವೆಯೇ ವಿಧಾನಸಭೆ ಕೆಲವು ಮಹತ್ವದ ವಿಧೇಯಕಗಳನ್ನು ಅಂಗೀಕಾರ ಮಾಡಿದೆ. ನೀಟ್ ಪರೀಕ್ಷೆ ರದ್ದುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.


ನೀಟ್ ಪರೀಕ್ಷೆ ರದ್ದುಪಡಿಸುವಂತೆ(NEED Ban) ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಸಿಇಟಿ ಅಂಕಗಳನ್ನು ಆಧರಿಸಿ ವೃತ್ತಿಪರ ಕೋರ್ಸುಗಳಿಗೆ ಪ್ರವೇಶಾತಿ ನೀಡಬೇಕೆಂದು ಒತ್ತಾಯಿಸಲಾಗಿದೆ.

ಬುಧವಾರ ರಾತ್ರಿ ವಿಧಾನಸಭೆಯಲ್ಲೇ ಮಲಗಿ, ಅಹೋರಾತ್ರಿ ಧರಣಿ ಮಾಡಿದ್ದ ಬಿಜೆಪಿ-ಜೆಡಿಎಸ್ ನಾಯಕರು, ಗುರುವಾರ (ಇಂದು) ಕಲಾಪ ಆರಂಭವಾಗುತ್ತಿದ್ದಂತೆ ಮತ್ತೆ ಮೂಡಾ ಹಗರಣ ವಿಚಾರ ಪ್ರಸ್ತಾಪಿಸಿದರು. ಸದನದಲ್ಲಿ ನಿರಂತರವಾಗಿ ಗಲಾಟೆ ಗದ್ದಲ ಮುಂದುವರಿದಿತ್ತು. ಪ್ರತಿಪಕ್ಷಗಳ ಗಲಾಟೆ ನಡುವೆಯೇ ವಿಧಾನಸಭೆ ಕೆಲವು ಮಹತ್ವದ ವಿಧೇಯಕಗಳನ್ನು ಅಂಗೀಕಾರ ಮಾಡಿದೆ. ನೀಟ್ ಪರೀಕ್ಷೆ ರದ್ದುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

ವಿಧಾನಪರಿಷತ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು NEET ರದ್ದತಿಗೆ ಕೋರಿ ನಿರ್ಣಯ ಮಂಡಿಸಿದರು. ಸಿಇಟಿ ಅಂಕಗಳನ್ನು ಆಧರಿಸಿ ಪ್ರವೇಶಾತಿ ನೀಡಬೇಕು ಮತ್ತು ನೀಟ್ ಪರೀಕ್ಷೆ ರದ್ದುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ನಿರ್ಣಯ ಅಂಗೀಕಾರ ಮಾಡಲಾಯಿತು.

ಒನ್ ನೇಷನ್, ಒನ್ ಎಲೆಕ್ಷನ್ ವಿರುದ್ಧ ನಿರ್ಣಯ

ಇನ್ನು ಒನ್ ನೇಷನ್, ಒನ್ ಎಲೆಕ್ಷನ್(ಒಂದು ದೇಶ, ಒಂದು ಚುನಾವಣೆ) ವಿರೋಧಿಸಿ ವಿಧಾನಪರಿಷತ್​ನಲ್ಲಿ ಸಿಎಂ ಸಿದ್ದರಾಮಯ್ಯ ​ನಿರ್ಣಯ ಮಂಡಿಸಿದರು. ಬಿಜೆಪಿ, ಜೆಡಿಎಸ್ ಸದಸ್ಯ ಬಲ ಹೆಚ್ಚಿದ್ದರೂ‌, ಪ್ರತಿಪಕ್ಷ ಸದಸ್ಯರು ಕಲಾಪ ಬಹಿಷ್ಕರಿಸಿ ಗದ್ದಲದಲ್ಲಿ ನಿರತರಾಗಿದ್ದಾಗ ನಿರ್ಣಯ ಪಾಸ್ ಮಾಡಲಾಗಿದೆ. ಒಂದು ರಾಷ್ಟ್ರ ಒಂದು ಚುನಾವಣೆ ನೀತಿಯನ್ನು ಅನುಷ್ಠಾನಗೊಳಿಸಬಾರದು. ಈ ಬಗ್ಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಅಂಗೀಕಾರ ಮಾಡಲಾಗಿದೆ.

ಪಾರಂಪರಿಕ ಅರಣ್ಯವಾಸಿಗಳ ಅಧಿನಿಯಮ ತಿದ್ದುಪಡಿ

ವಿಧಾನಸಭೆಯಲ್ಲಿ ಅರಣ್ಯ ವಾಸಿ ಅನುಸೂಚಿತ ಬುಡಕಟ್ಟುಗಳಿಗೆ ಸಮಾನವಾಗಿ ಇತರ ಪಾರಂಪರಿಕ ಅರಣ್ಯ ವಾಸಿಗಳನ್ನು ಪರಿಗಣಿಸುವ ಹಾಗೆ, ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ(ಅರಣ್ಯ ಹಕ್ಕುಗಳ ಮಾನ್ಯತೆ) ಅಧಿನಿಯಮ 2006(2007ರ ಕೇಂದ್ರ ಅಧಿನಿಯಮ 02) ಮತ್ತು ಅದರ ಅಡಿಯಲ್ಲಿ ಮಾಡಲಾದ ನಿಯಮಗಳನ್ನು ಸೂಕ್ತ ಮತ್ತು ಸಮರ್ಪಕವಾಗಿ ಮಾರ್ಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಅಂಗೀಕಾರ ಮಾಡಲಾಯಿತು.

ಕ್ಷೇತ್ರ ಪುನರ್ ವಿಂಗಡಣಾ ಪ್ರಕ್ರಿಯೆ ವಿರೋಧಿ ನಿರ್ಣಯ

ಹೊಸ ಜನಗಣತಿಯ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡಣಾ ಪ್ರಕ್ರಿಯೆ ನಡೆಸಬಾರದು ಮತ್ತು ಜನಸಂಖ್ಯೆ ಆಧರಿಸಿ ಸ್ಥಾನಗಳ ಹೆಚ್ಚಿಸುವ ಸಂದರ್ಭದಲ್ಲಿ ಪ್ರತಿ ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭಾ ಮತ್ತು ವಿಧಾನಸಭೆ ಸ್ಥಾನಗಳನ್ನು 1971ರ ಜನಗಣತಿ ಆಧರಿಸಿ ನಿರ್ಧರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಅಂಗೀಕಾರ ಮಾಡಲಾಯಿತು. ಚರ್ಚೆಗೆ ವಿಶೇಷ ಸದನ ಕರೆಯುವಂತೆ ವಿಪಕ್ಷ ನಾಯಕ ಅಶೋಕ್ ಒತ್ತಾಯಿಸಿದ್ದು ವಿಪಕ್ಷಗಳ ಬೇಡಿಕೆಗೆ ಮಣಿಯದೇ ನಿರ್ಣಯ ಅಂಗೀಕಾರ ಮಾಡಿದರು.

ಸ್ಮಾರಕಗಳು, ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ (ತಿದ್ದುಪಡಿ) ವಿಧೇಯಕ ಅಂಗೀಕಾರ

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು ವಿಧೇಯಕ ಕುರಿತು ಮಾತನಾಡಿ, ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕ ಮತ್ತು ಪುರಾತತ್ವ ಸ್ಥಳಗಳ ಸಂರಕ್ಷಣೆ ಮಾಡುವ ಕರ್ತವ್ಯವಿದೆ. ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳಲು ಈ ವಿಧೇಯಕ ಅವಕಾಶ ಮಾಡಿಕೊಡಲಿದೆ. ಸೊಸೈಟಿ, ಸಹಕಾರ ಸಂಘಗಳು, ಟ್ರಸ್ಟ್​​ಗಳು, ಸರ್ಕಾರೇತರ ಸಂಸ್ಥೆಗಳು ಆಸಕ್ತಿ ಉಳ್ಳ ವ್ಯಕ್ತಿಗಳನ್ನು ಸ್ಮಾರಕ ಪಟ್ಟಿಯಲ್ಲಿ ಸೇರಿಸುವುದಕ್ಕೆ ಅರ್ಹರಾಗಿಸುವುದಕ್ಕೆ ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.

ನಂತರ ಸ್ಪೀಕರ್ 2024ನೇ ಸಾಲಿನ ಕರ್ನಾಟಕ ಪ್ರಾಚೀನ, ಐತಿಹಾಸಿಕ ಸ್ಮಾರಕಗಳು, ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ (ತಿದ್ದುಪಡಿ) ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಒಪ್ಪಿಗೆ ದೊರೆಯಿತು.

ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಕ್ಕೆ ಒಪ್ಪಿಗೆ

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಮಂಡಿಸಿದ 2024ನೇ ಸಾಲಿನ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಕ್ಕೂ ಸದನದ ಒಪ್ಪಿಗೆ ಸಿಕ್ಕಿತು.

ವಿಧೇಯಕ ಕುರಿತು ಮಾತನಾಡಿದ ರಾಮಲಿಂಗಾರೆಡ್ಡಿ, ಯಲ್ಲಮ್ಮ ದೇವಾಲಯಕ್ಕೆ ಕರ್ನಾಟಕ, ಗೋವಾ, ಆಂಧ್ರ, ತೆಲಂಗಾಣದಿಂದ ವಾರ್ಷಿಕ 80 ಲಕ್ಷದಿಂದ 1 ಕೋಟಿ ಭಕ್ತರು ಬರುತ್ತಾರೆ. ಹೀಗಾಗಿ, ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಮತ್ತು ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ಸ್ವತಂತ್ರ ಶಾಸನದ ಪ್ರಾಧಿಕಾರದ ರಚನೆಗೆ ಉಪಂಧ ಕಲ್ಪಿಸಲು ಈ ವಿಧೇಯಕವನ್ನು ತರಲಾಗಿದೆ. ರಾಜ್ಯಮಟ್ಟದಲ್ಲಿ ಒಂದು ಸಮಿತಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇನ್ನೊಂದು ಸಮಿತಿ ಕಾರ್ಯ ನಿರ್ವಹಿಸಲಿದೆ. ಆ ಮೂಲಕ ದೇವಸ್ಥಾನದ ಅಭಿವೃದಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಭೂ ಕಂದಾಯ 2ನೇ ತಿದ್ದುಪಡಿ ವಿಧೇಯಕಕ್ಕೂ ಒಪ್ಪಿಗೆ

ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಮಂಡಿಸಿದ 2024ನೇ ಸಾಲಿನ ಕರ್ನಾಟಕ ಭೂ ಕಂದಾಯ 2ನೇ ತಿದ್ದುಪಡಿ ವಿಧೇಯಕಕ್ಕೂ ಸದನದಲ್ಲಿ ಒಪ್ಪಿಗೆ ದೊರೆಯಿತು.

ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು ತಿದ್ದುಪಡಿ ವಿಧೇಯಕ ಅಂಗೀಕಾರ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಂಡಿಸಿದ 2024ನೇ ಸಾಲಿನ ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು ತಿದ್ದುಪಡಿ ವಿಧೇಯಕಕ್ಕೂ ಸದನ ಅಂಗೀಕಾರ ನೀಡಿತು. ಬಳಿಕ ತೋಟಗಾರಿಕಾ ಸಚಿವ ಮಲ್ಲಿಕಾರ್ಜುನ ಅವರ ಪರವಾಗಿ ಕಾನೂನು ಸಚಿವರು ಮಂಡಿಸಿದ 2024ನೇ ಸಾಲಿನ ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣಾ) (ತಿದ್ದುಪಡಿ) ವಿಧೇಯಕಕ್ಕೂ ಸದನದಲ್ಲಿ ಒಪ್ಪಿಗೆ ಪಡೆದುಕೊಳ್ಳಲಾಯಿತು.

Read More
Next Story