ಮುಂಗಾರು ಅಧಿವೇಶನ | ಪ್ರತಿಪಕ್ಷ ಅಹೋರಾತ್ರಿ ಧರಣಿ: ಕಾಂಗ್ರೆಸ್ ವಿರುದ್ಧ ಘೋಷಣೆ, ರಾಮನ ಭಜನೆ
x

ಮುಂಗಾರು ಅಧಿವೇಶನ | ಪ್ರತಿಪಕ್ಷ ಅಹೋರಾತ್ರಿ ಧರಣಿ: ಕಾಂಗ್ರೆಸ್ ವಿರುದ್ಧ ಘೋಷಣೆ, ರಾಮನ ಭಜನೆ


ಸದನದಲ್ಲಿ ಮುಡಾ ಹಗರಣದ ಕುರಿತ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕು ಮತ್ತು ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್​ ಸದಸ್ಯರು ವಿಧಾನಮಂಡಲದ ಉಭಯ ಸದನಗಳಲ್ಲಿ ಬುಧವಾರ ರಾತ್ರಿ ಅಹೋರಾತ್ರಿ ಧರಣಿ ನಡೆಸಿದರು. ವಿಪಕ್ಷ ನಾಯಕರು ಜಂಟಿಯಾಗಿ ಧರಣಿ ಕುಳಿತು, ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗುತ್ತಾ ರಾಮನ ಭಜನೆ ಮಾಡಿದರು.

ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಹಾಗೂ ವಿರೋಧ ಪಕ್ಷ ನಾಯಕ ಆರ್‌ ಅಶೋಕ್‌ ನೇತೃತ್ವದಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್​ನಲ್ಲಿ ನಡೆದ ಅಹೋರಾತ್ರಿ ಧರಣಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಭಾಗಿಯಾಗಿದ್ದರು.

ಧರಣಿಗೂ ಮೊದಲು ಶಾಸಕರನ್ನು ಹೊರಗೆ ಬಿಟ್ಟು ಮಾರ್ಶಲ್‌ಗಳು ಬಾಗಿಲು ಹಾಕಿಕೊಂಡರು. ವಿಧಾನಸೌಧದ ಪೂರ್ವದ ಬಾಗಿಲನ್ನು ಮಾರ್ಶಲ್‌ಗಳು ಬಂದ್ ಮಾಡಿದ್ದರು. ಬಾಗಿಲು ತೆಗೆಯುವವರೆಗೂ ಶಾಸಕರು ಕಾದು ನಿಂತರು. ಬಾಗಿಲಲ್ಲೇ ಜೆಡಿಎಲ್‌ಪಿ ನಾಯಕ ಸುರೇಶ್ ಬಾಬು, ಬಿಜೆಪಿ ಉಪನಾಯಕ ಅರವಿಂದ್ ಬೆಲ್ಲದ್ ಸೇರಿದಂತೆ ಹಲವು ಶಾಸಕರು ನಿಂತರು. ಸ್ಥಳಕ್ಕೆ ಬಂದ ಡಿಸಿಪಿ, ಬಾಗಿಲು ತೆಗೆಸಿ ಒಳಗೆ ಬಿಡಿಸಿದರು. ಇದೇ ವೇಳೆ, ಆರ್‌. ಅಶೋಕ್‌ ಅವರು ಪೊಲೀಸರ ಜತೆ ವಾಗ್ವಾದ ನಡೆಸಿದರು.

ವಿಧಾನಸೌಧದ ಪೂರ್ವ ದ್ವಾರದ ಬಳಿ ಗೃಹ ಸಚಿವ ಪರಮೇಶ್ವರ್ ಜೊತೆ ಕೆಲ ಬಿಜೆಪಿ ಶಾಸಕರು ಅನೌಪಚಾರಿಕ ಚರ್ಚೆ ನಡೆಸಿರುವುದು ಕಂಡುಬಂತು. ಬಿಜೆಪಿ ಶಾಸಕರಾದ ಅಶ್ವತ್ಥ ನಾರಾಯಣ, ಮುನಿರತ್ನ ಹಾಗೂ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಚರ್ಚೆಯಲ್ಲಿದ್ದರು. ಈ ವೇಳೆ ಬಿಜೆಪಿ ಶಾಸಕ ಮುನಿರತ್ನ ಅವರು ಚಾಪೆಯೋ ಅಥವಾ ಬೆಡ್ಡೋ ವ್ಯವಸ್ಥೆ ಮಾಡಿ ಸಾಹೇಬರೇ ಎಂದು ಗೃಹ ಸಚಿವ ಪರಮೇಶ್ವರ್‌ಗೆ ಕಿಚಾಯಿಸಿದರು.

ಬಿಜೆಪಿ-ಜೆಡಿಎಸ್ ಸದಸ್ಯರು ಅಹೋರಾತ್ರಿ ಧರಣಿ ಕುಳಿತಿರುವ ವಿಷಯ ತಿಳಿಯುತ್ತಿದ್ದಂತೆಯೇ ವಿಧಾನಸಭಾ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಭೇಟಿ ನೀಡಿ ಶಾಸಕರಿಗೆ ರಾತ್ರಿ ಊಟದ ವ್ಯವಸ್ಥೆ ಬಗ್ಗೆ ವಿಚಾರಿಸಿದರು. ಆದರೆ, ಸರ್ಕಾರದ ಊಟವನ್ನು ನಿರಾಕರಿಸಿದ್ದು, ಹಗರಣದ ಹಣದಿಂದ ನಮಗೆ ಊಟದ ವ್ಯವಸ್ಥೆ ಬೇಡ. ರಾತ್ರಿಯ ಊಟ, ಹಾಸಿಗೆ ವ್ಯವಸ್ಥೆ ತಾವೇ ಮಾಡಿಕೊಂಡಿಕೊಳ್ಳುವುದಾಗಿ ಧರಣಿನಿರತ ಶಾಸಕರು ಹೇಳಿದರು. ಬಳಿಕ ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಅವರಿಗೆ ಸದಸ್ಯರಿಗೆ ಊಟ ಹಾಗೂ ಹಾಸಿಗೆ ವ್ಯವಸ್ಥೆ ಮಾಡುವ ಹೊಣೆ ನೀಡಿದರು.

ಅಹೋರಾತ್ರಿ ಧರಣಿ ವಿಚಾರವಾಗಿ ರಾಜ್ಯ ಬಿಜೆಪಿ ಘಟಕ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ʻʻಭ್ರಷ್ಟ ಕಾಂಗ್ರೆಸ್ ಸರ್ಕಾರದ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಭ್ರಷ್ಟಾಚಾರ, ಎಸ್.ಸಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿದ್ದ ಹಣ ಅನ್ಯ ಕಾರ್ಯಗಳಿಗೆ ಬಳಸಿ ಪರಿಶಿಷ್ಟ ಜಾತಿ ಪಂಗಡಗಳ ಸಮುದಾಯಗಳಿಗೆ ದ್ರೋಹ ಬಗೆದು, ಮೂಡಾ ಹಗರಣದ ಪಿತಾಮಹ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿ, ವಿಧಾನಸೌಧದಲ್ಲಿ ಉಭಯ ಸದನಗಳ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರೊಂದಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭವಾಯಿತು. ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಹಾಗೂ ಬಡವರಿಗೆ ನ್ಯಾಯ ಸಿಗುವವರೆಗೂ ಬಿಜೆಪಿ ಹೋರಾಟ ಮುಂದುವರಿಯಲಿದೆʼʼ ಎಂದು ತಿಳಿಸಿದೆ.

ʻʻಭ್ರಷ್ಟ ಹಾಗೂ ಸ್ವಜನ ಪಕ್ಷಪಾತಿ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹʼʼ ಎಂದು ಮತ್ತೊಂದು ಪೋಸ್ಟ್‌ನ ಮಾಡಿರುವ ಬಿಜೆಪಿ, ʻʻಸಿದ್ದರಾಮಯ್ಯ ನವರು ಭಾಗಿಯಾಗಿರುವ ಮೈಸೂರು ಮೂಡಾ ಹಗರಣ ಖಂಡಿಸಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಸೇರಿದಂತೆ ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸೌಧದಲ್ಲಿ ಉಭಯ ಸದನಗಳ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರೊಂದಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

Read More
Next Story