ವಿಧಾನಮಂಡಲ ಅಧಿವೇಶನ | ಸದನದಲ್ಲಿ ಪ್ರತಿಧ್ವನಿಸಿದ ಜಿಟಿ ಮಾಲ್ ಪ್ರಕರಣ: ಏಳು ದಿನ ಬಂದ್ ಮಾಡಲು ಕ್ರಮ ಎಂದ ಸಚಿವರು
ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನದ ಮೂರನೇ ದಿನದ ಕಲಾಪಗಳು ಗುರುವಾರ ಆರಂಭವಾಗಿದ್ದು, ಕನ್ನಡಿಗರಿಗೆ ಖಾಸಗಿ ಉದ್ಯಮಗಳಲ್ಲಿ ಮೀಸಲಾತಿ ನೀಡುವ ಮಸೂದೆ ಹಿಂದೆ ಪಡೆದ ಸರ್ಕಾರದ ನಡೆ ಹಾಗೂ ಬೆಂಗಳೂರಿನ ಜಿಟಿ ಮಾಲ್ನಲ್ಲಿ ರೈತರಿಗೆ ಅವಮಾನ ಮಾಡಿದ ಪ್ರಕರಣಗಳು ಬೆಳಗಿನ ಕಲಾಪದಲ್ಲಿ ಸಾಕಷ್ಟು ಸದ್ದು ಮಾಡಿದವು.
ಆರಂಭದಲ್ಲಿ ಜಿಟಿ ಮಾಲ್ ಸಿಬ್ಬಂದಿ ರೈತರೊಬ್ಬರಿಗೆ ಪ್ರವೇಶ ನೀಡದೇ ಅವಮಾನಿಸಿದ ಘಟನೆ ಸದನದಲ್ಲಿ ಪ್ರತಿಧ್ವನಿಸಿತು. ನಾಡಿಗೆ ಅನ್ನ ಕೊಡುವ ಅನ್ನದಾತ ರೈತನನ್ನು ಮಾಲ್ ಒಳಗಡೆ ಬಿಡದೆ ಅವಮಾನಿಸಲಾಗಿದೆ. ಇದು ದುರಹಂಕಾರದ ಪರಮಾವಧಿ ಎಂದು ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಮಾಲ್ ಧೋರಣೆಯ ವಿರುದ್ಧ ಒಕ್ಕೊರಲಿನಿಂದ ಧ್ವನಿ ಎತ್ತಿದರು.
ಸಾಕಷ್ಟು ಕಾಲ ಈ ಬಗ್ಗೆ ಚರ್ಚೆ ನಡೆದು ಕಲಾಪದಲ್ಲಿ ಒಕ್ಕೊರಲಿನಿಂದ ರೈತನ ಪರ ದನಿ ಪ್ರತಿಧ್ವನಿಸಿತು.
“ರೈತರು ಕಚ್ಚೆಪಚ್ಚೆ ತೊಟ್ಟಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವರನ್ನು ಹೊರದಬ್ಬಿದ ಮಾಲ್ ಸೆಕ್ಯುರಿಟಿ ಏಜೆನ್ಸಿ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು. ಜೊತೆಗೆ ಇಂತಹ ಘಟನೆಗೆ ಕಾರಣವಾಗಿರುವ ಮಾಲ್ ಮಾಲೀಕರ ವಿರುದ್ಧ ಪೊಲೀಸ್ ಕೇಸ್ ಹಾಕಿ ಎಫ್ಐಆರ್ ದಾಖಲಿಸಿ ಎಂದು ಗುರುಮಿಠಕಲ್ ಕಾಂಗ್ರೆಸ್ ಶಾಸಕ ಶರಣಗೌಡ ಕಂದಕೂರ ಅವರು ಸರ್ಕಾರವನ್ನು ಒತ್ತಾಯಿಸಿದರು. ಆಡಳಿತ ಪಕ್ಷದ ಶಾಸಕರ ಈ ಒತ್ತಾಯಕ್ಕೆ ಸದನದಲ್ಲಿದ್ದ ಶಾಸಕರು ಪಕ್ಷಬೇಧ ಮರೆತು ದನಿಗೂಡಿಸಿದರು.
ಶಾಸಕರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಘಟನೆಯ ಕುರಿತು ವರದಿ ತರಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಆದರೆ, ಹಿರಿಯ ಸಚಿವರ ಆ ಭರವಸೆಗೆ ಸೊಪ್ಪು ಹಾಕದ ಶಾಸಕರು, ವರದಿ ತರಿಸಿಕೊಳ್ಳುವುದೇಕೆ? ಘಟನೆ ನಡೆದಿರುವುದು ಎಲ್ಲರ ಕಣ್ಣೆದುರಲ್ಲೇ, ಮಾಧ್ಯಮಗಳಲ್ಲಿ ನೇರವಾಗಿ ಪ್ರಸಾರವಾಗಿದೆ. ಹಾಗಾಗಿ ರೈತರ ವಿಷಯದಲ್ಲಿ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.
ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ “ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವುದೇನಿದೆ ಇದರಲ್ಲಿ? ಹಿರಿಯ ಸಚಿವರಾಗಿ ನೀವು ಈ ರೀತಿ ಮಾತಾಡಬೇಡಿ. ಇದು ರೈತರ ವಿಚಾರ. ಆದ್ದರಿಂದ ಸರ್ಕಾರ ಗಂಭೀರವಾಗಿ ಪರಿಗಣಿಸಿ. ಕೂಡಲೆ ಮಾಲ್ಗೆ ಒಂದು ವಾರ ವಿದ್ಯುತ್ ಸರಬರಾಜು ಬಂದ್ ಮಾಡಿ ಬಿಸಿ ಮುಟ್ಟಿಸಿ” ಎಂದು ಹೇಳಿದರು.
ಈ ಕುರಿತ ಸಚಿವರ ಹೇಳಿಕೆಯಿಂದ ಸಮಾಧಾನಗೊಳ್ಳದ ಶಾಸಕರು ಜೋರು ದನಿಯಲ್ಲಿ ಸರ್ಕಾರವನ್ನು ಒತ್ತಾಯಿದ ಹಿನ್ನೆಲೆಯಲ್ಲಿ ಮಧ್ಯಪ್ರವೇಶ ಮಾಡಿದ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಅವರು, ಸರ್ಕಾರ ಏನು ಕ್ರಮ ಕೈಗೊಳ್ಳುತ್ತೆ ಎಂದು ಸ್ಪಷ್ಟಪಡಿಸಿ ಎಂದು ಸಚಿವರಿಗೆ ತಾಕೀತು ಮಾಡಿದರು.
ಸ್ಪೀಕರ್ ಸೂಚನೆಯ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ “ಘಟನೆಯ ಕುರಿತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಯಾವುದೇ ಮುಲಾಜಿಲ್ಲ. ಬಿಬಿಎಂಪಿ ಮುಖ್ಯ ಆಯುಕ್ತರ ಜೊತೆ ಈಗಾಗಲೇ ಚರ್ಚೆ ಮಾತಾಡಿದ್ದೇವೆ. ಏಳು ದಿನ ಜಿ.ಟಿ. ಮಾಲ್ ಮುಚ್ಚಿಸಲಾಗುತ್ತದೆ. ಕಾನೂನಿನಲ್ಲಿ ಇಂತಹ ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದಿದ್ದಾರೆ. ಹಾಗಾಗಿ ಸರ್ಕಾರ ಕ್ರಮ ಜರುಗಿಸಲಿದೆ” ಎಂದು ಸದನಕ್ಕೆ ಭರವಸೆ ನೀಡಿದರು.
ಸಚಿವರ ಭರವಸೆ ಬಳಿಕ ಶಾಸಕರು ಸಮಾಧಾನಗೊಂಡು ಆ ವಿಷಯದ ಮೇಲಿನ ಚರ್ಚೆಗೆ ವಿರಾಮ ನೀಡಿದರು.