ಹಣಕ್ಕಾಗಿ ಬೇಡಿಕೆ | ಎಫ್ಐಆರ್ ಪ್ರಶ್ನಿಸಿದ್ದ ಎಚ್ ಡಿಕೆ ಅರ್ಜಿ ವಿಚಾರಣೆ ಮುಂದಕ್ಕೆ
50 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ್ ತಾತಾ ದಾಖಲಿಸಿದ ಎಫ್ಐಆರ್ ರದ್ದು ಕೋರಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಎಂಎಲ್ಸಿ ರಮೇಶ್ ಗೌಡ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ರಾಜ್ಯ ಹೈಕೋರ್ಟ್ ಅ.21ಕ್ಕೆ ಮುಂದೂಡಿದೆ.
ಉದ್ಯಮಿ ವಿಜಯ್ ತಾತಾಗೆ ಬೆದರಿಕೆ ಕೇಸ್ನಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಎಂಎಲ್ಸಿ ರಮೇಶ್ ಗೌಡ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಎಫ್ಐಆರ್ ರದ್ದು ಕೋರಿ ಎಚ್ ಡಿಕೆ ಹೈಕೋರ್ಟ್ ಮೊರೆ ಹೋಗಿದ್ದರು.
ನಿಖಿಲ್ ಕುಮಾರಸ್ವಾಮಿಯನ್ನು ಚನ್ನಪಟ್ಟಣ ಬೈ ಎಲೆಕ್ಷನ್ಗೆ ನಿಲ್ಲಿಸ್ತಾ ಇದ್ದೀನಿ, 50 ಕೋಟಿ ರೂ. ಕೊಡದೇ ಇದ್ರೆ ನಿಮ್ಮ ಪ್ರಾಜೆಕ್ಟ್ಗಳನ್ನು ಕಂಪ್ಲೀಟ್ ಮಾಡೋಕೆ ಬಿಡಲ್ಲ…” ಎಂದು ಎಚ್ ಡಿ ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ ಎಂದು ವಿಜಯ್ ತಾತಾ ಪೊಲೀಸರಿಗೆ ದೂರು ನೀಡಿದ್ದರು.
ಅಲ್ಲದೆ ರಮೇಶ್ ಗೌಡ ವಿರುದ್ಧವೂ 5 ಕೋಟಿ ರೂ. ಬೇಡಿಕೆಯ ಆರೋಪ ಮಾಡಿದ್ದರು.
ವಿಜಯ್ ತಾತಾ ದೂರು ನೀಡಿದ ಬೆನ್ನಲ್ಲೇ ರಮೇಶ್ ಗೌಡ ಕೂಡ ತಾತಾ ವಿರುದ್ಧ ಪ್ರತಿದೂರು ನೀಡಿ, ಅವರೇ 100 ಕೋಟಿ ರೂ. ನೀಡುವಂತೆ ತಮಗೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದರು.
ತಮ್ಮ ವಿರುದ್ಧದ ಪ್ರತಿದೂರಿನ ಬೆನ್ನಲ್ಲೇ, ಪ್ರತಿಕ್ರಿಯೆ ನೀಡಿದ್ದ ವಿಜಯ್ ತಾತಾ, ನಾನು ಯಾರು ಅಂತಾನೇ ಗೊತ್ತಿಲ್ಲ ಅಂತಿದ್ದವರು, ಈಗ ನನ್ನ ವಿರುದ್ಧ ದೂರು ನೀಡಿದ್ದಾರೆ. ಕುಮಾರಸ್ವಾಮಿ ಅವರ ಬಳಿ ನಾನು, 100 ಕೋಟಿ ಕೇಳೋಕೆ ಸಾಧ್ಯವೆ? ಎಂದಿದ್ದರು. ಅಲ್ಲದೆ, ಕುಮಾರಸ್ವಾಮಿ ನನ್ನ ಬಳಿ 50 ಕೋಟಿ ರೂ. ಕೇಳಿ ಬೆದರಿಕೆ ಹಾಕಿದ್ದನ್ನು ನಾನು ಸಾಭೀತು ಮಾಡುವೆ. ನನ್ನ ಬಳಿ ಸಾಕ್ಷ್ಯ ಇದೆ ಎಂದೂ ತಾತಾ ಹೇಳಿದ್ದರು.