ಮೋದಿ ಹಿಟ್ಲರ್ ಸಿದ್ಧಾಂತದಲ್ಲಿ ನಂಬಿಕೆ ಉಳ್ಳವರು: ಸಿಎಂ ಸಿದ್ದರಾಮಯ್ಯ
x

ಮೋದಿ ಹಿಟ್ಲರ್ ಸಿದ್ಧಾಂತದಲ್ಲಿ ನಂಬಿಕೆ ಉಳ್ಳವರು: ಸಿಎಂ ಸಿದ್ದರಾಮಯ್ಯ


ʻʻಪ್ರಧಾನಿ ನರೇಂದ್ರ ಮೋದಿಯವರು ಪ್ರಜಾಪ್ರಭುತ್ವದ ವಿರೋಧಿಯಾಗಿದ್ದು, ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆʼʼ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಇಂದು ಕೊಳ್ಳೆಗಾಲ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರ ಪರ ಪ್ರಜಾಧ್ವನಿ -02 ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ʻʻನರೇಂದ್ರ ಮೋದಿಯವರ ಸರ್ಕಾರದಲ್ಲಿ ಸಂವಿಧಾನ ಸುರಕ್ಷಿತವಾಗಿಲ್ಲ. ನಾವು ಉಳಿಯಬೇಕಾದರೆ ಸಂವಿಧಾನ ಉಳಿಯಲೇಬೇಕು. ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಗೆ ಮತ ಹಾಕಬೇಕು. ಮುಸಲೋನಿ, ಹಿಟ್ಲರ್ ಸಿದ್ಧಾಂತದಲ್ಲಿ ಬಿಜೆಪಿ ನಂಬಿಕೆ ಇಟ್ಟಿದ್ದಾರೆ. ಈ ದೇಶದಲ್ಲಿ ಸಂವಿಧಾನ ಜಾರಿಯಾದಾಗ ಆರ್ ಎಸ್ ಎಸ್ ವಿರೋಧಿಸಿತ್ತು. ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲೇಬೇಕುʼʼ ಎಂದು ಮನವಿ ಮಾಡಿದರು.

ʻʻಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.43 ರಷ್ಟು ಮತಗಳನ್ನು ಪಡೆದು 136 ಸ್ಥಾನಗಳನ್ನು ಪಡೆದಿದ್ದೇವೆ. ಅಧಿಕಾರದಲ್ಲಿದ್ದ ವಿರೋಧ ಪಕ್ಷ ಕೇವಲ 66 ಸ್ಥಾನಗಳನ್ನು ಪಡೆಯಿತು. ಜಾತ್ಯಾತೀತ ಎಂದು ಹೇಳಿಕೊಳ್ಳುವ ಪಕ್ಷ 19 ಸ್ಥಾನಗಳನ್ನು ಪಡೆಯಿತು. ಈಗ ಅವರಿಬ್ಬರಿಗೂ ಈ ಚುನಾವಣೆಯಲ್ಲಿ ಭಯ ಬಂದಿದೆ. ಒಟ್ಟುಗೂಡಿ ಕಾಂಗ್ರೆಸ್ ಪಕ್ಷವನ್ನು ಎದುರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಸಿದ್ಧಾಂತ, ಕಾರ್ಯಕ್ರಮ ಇಲ್ಲದೇ, ಕಾಂಗ್ರೆಸ್ ಸೋಲಿಸಬೇಕು ಎನ್ನುವುದೊಂದೇ ಅವರ ಗುರಿ. ¨ಬಡವರು, ರೈತರು, ದಲಿತರು, ಹಿಂದುಳಿದವರ, ಅಲ್ಪಸಂಖ್ಯಾತರ ಪರವಾಗಿ ಏನು ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಅವರು ಯಾವ ಸಾಧನೆಯನ್ನೂ ಮಾಡಿಲ್ಲ. ಜೆಡಿಎಸ್ ನ ಹೆಚ್.ಡಿ.ಕುಮಾರಸ್ವಾಮಿ ಒಂದು ವರ್ಷ ಮುಖ್ಯಮಂತ್ರಿಯಾಗಿದ್ದರು. ನಂತರ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. 5 ವರ್ಷಗಳ ಅವಧಿಯಲ್ಲಿ ಏನೂ ಕೆಲಸ ಮಾಡಿಲ್ಲ. ಅವರು ಕೆಲಸದ ಆಧಾರದ ಮೇಲೆ ಮತ ಕೇಳುತ್ತಿಲ್ಲ ಬದಲಿಗೆ ಮೋದಿಗೆ ಮತ ಹಾಕಿ ಎಂದು... ಇವರ್ಯಾರಿಗೂ ಮತ ಕೇಳಲು ಮುಖವೂ ಇಲ್ಲ, ನೈತಿಕತೆಯೂ ಇಲ್ಲʼʼ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ʻʻಅವರಿಗೆ(ಬಿಜೆಪಿ-ಜೆಡಿಎಸ್) ಮೋದಿ ಬಿಟ್ಟರೆ ಬೇರೆ ಚುನಾವಣಾ ವಸ್ತುವೇ ಇಲ್ಲ. ಎನ್‍ ಡಿಎ ನೇತೃತ್ವದಲ್ಲಿ 10 ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿರುವ ಮೋದಿ 10 ವರ್ಷಗಳಲ್ಲಿ ಏನು ಹೇಳಿದ್ದರು? ಏನು ಮಾಡಿದ್ದಾರೆ ಎಂದು ಪರಿಶೀಲನೆ ಮಾಡಬೇಕು‌ʼʼ ಎಂದರು.

ʻʻವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬನ ಮನೆಗೆ 15 ಲಕ್ಷ ರೂ ಹಣವನ್ನ ಖಾತೆಗೆ ಹಾಕುವುದಾಗಿ ಹೇಳಿದ್ದರು. ಹಾಕಿದ್ದಾರೆಯೇ..? ರೈತರ ಆದಾಯ 5 ವರ್ಷಗಳಲ್ಲಿ ದುಪ್ಪಟ್ಟು ಮಾಡುತ್ತೇನೆ ಎಂದಿದ್ದರು, ಮಾಡಿದರೆ? ರೈತರು ನೆಮ್ಮದಿಯಾಗಿದ್ದಾರೆಯೇ? ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದ್ದರು, ಮಾಡಿದರೆ? ಈವರೆಗೆ 20 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬೇಕಿತ್ತು ಆದರೆ ಈವರೆಗೆ 20 ಲಕ್ಷ ಉದ್ಯೋಗವನ್ನೂ ಸೃಷ್ಟಿಸಲಾಗಿಲ್ಲ. ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡುವುದಾಗಿ ಹೇಳಿದ್ದರು ಇಂದಿನವರೆಗೆ ಜಾರಿ ಮಾಡಲಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಯನ್ನು ಇಳಿಸುವುದಾಗಿ ಹೇಳಿದ್ದರು, ಅಕ್ಕಿ, ಬೇಳೆ, ರಾಗಿ ಜೋಳ ಬೆಲೆ ಇಳಿಯುತ್ತದೆ ಎಂದು ಹೇಳಿದ್ದರು. ಬೆಲೆಗಳನ್ನು ಇಳಿಸಲು ಪ್ರಯತ್ನ ಮಾಡಿದರೆ?ʼʼ ಎಂದು ಸರಣಿ ಪ್ರಶ್ನೆಗಳನ್ನು ಕೇಳಿದರು.

ʻʻ2014 ರಲ್ಲಿ ಡೀಸೆಲ್ ಬೆಲೆ ಒಂದು ಲೀಟರರ್‌ಗೆ 49 ರೂ.ಇತ್ತು ಇಂದು 95 ರೂ.ಆಗಿದೆ. ಪೆಟ್ರೋಲ್ ಬೆಲೆ 71 ರೂ.ಗಳಿತ್ತು ಈಗ 110 ರೂ.ಗಳಾಗಿದೆ. ಸಿಲಿಂಡರ್ ಬೆಲೆ 410 ರೂ ಇದ್ದರೆ ಈಗ 950 ರೂ.ಗಳಾಗಿದೆ. ಇಡೀ ದೇಶದ ಜನರಿಗೆ ಅಚ್ಚೇ ದಿನ್ ಆಯೇಗಾ ಎಂದು ಹೇಳಿದ್ದರು. ಒಳ್ಳೇ ದಿನಗಳು ಬಂದವೇ? ಎಂದು ಪ್ರಶ್ನಿಸಿದರು. ಮೇಕ್ ಇನ್ ಇಂಡಿಯಾ ಎಂದರು, ಈವರೆಗೂ ಮೇಕ್ ಇನ್ ಇಂಡಿಯಾ ಆಗಲಿಲ್ಲ. ಇಂದಿಗೂ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಲೇ ಇದ್ದಾರೆ. ನರೇಂದ್ರ ಮೋದಿಯವರು ಪ್ರಧಾನಮಂತ್ರಿಗಳಾಗಿ ಸಂಪೂರ್ಣ ವಿಫಲರಾಗಿದ್ದಾರೆ. ಎನ್‍ಡಿಎ ಸರ್ಕಾರದ ವೈಫಲ್ಯಗಳಿವುʼʼ ಎಂದು ಹೇಳಿದರು.

ʻʻನಮಗೆ ಅಧಿಕಾರ ಕೊಟ್ಟರೆ ನಾವು ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ನಾನು, ಡಿ.ಕೆ.ಶಿವಕುಮಾರ್, ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರು ಕರ್ನಾಟಕದ ಜನತೆಯಲ್ಲಿ ಮನವಿ ಮಾಡಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೋ ಇಲ್ಲವೋ ಎಂದು ಜನರೇ ಯೋಚಿಸಬೇಕುʼʼ ಎಂದರು.

ʻʻಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಓಡಾಡುತ್ತಿದ್ದಾರೆ. ಚಾಮರಾಜನಗರದ 98% ಗೃಹಗಳಿಗೆ ಉಚಿತ ವಿದ್ಯುತ್ ನೀಡಲಾಗಿದ್ದು, ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2000 ರೂ.ಗಳನ್ನು ಕೊಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಒಪ್ಪದಿದ್ದಾಗ 170 ರೂ.ಗಳನ್ನು ಪ್ರತಿಯೊಬ್ಬರಿಗೂ ನಮ್ಮ ಸರ್ಕಾರ ಕೊಡುತ್ತಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ 3000, ನಿರುದ್ಯೋಗಿ ಡಿಪ್ಲೊಮಾ ಹೊಂದಿದವರಿಗೆ ಪ್ರತಿ ತಿಂಗಳು 1500 ರೂ.ಗಳನ್ನು ನೀಡಲಾಗುತ್ತಿದೆʼʼ ಎಂದು ವಿವರಿಸಿದರು.

Read More
Next Story