ಮೋದಿ ಗ್ಯಾರಂಟಿಗೆ ವ್ಯಾಲ್ಯೂ ಇಲ್ಲ: ದಿನೇಶ್ ಗುಂಡೂರಾವ್ ಟೀಕೆ
ಮೋದಿ ಮೈಸೂರಿನಲ್ಲಿ ಕುಟುಂಬ ರಾಜಕೀಯದ ಬಗ್ಗೆ ಏಕೆ ಮಾತನಾಡಲಿಲ್ಲ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಮೋದಿ ರಾಜ್ಯ ಪ್ರವಾಸ ಮಾತಿಗಷ್ಟೇ ಸೀಮಿತವಾಗಿತ್ತು ಎಂದು ಟೀಕಿಸಿದ್ದಾರೆ.
ʻಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸವು ಬಂದ ಪುಟ್ಟ ಹೋದ ಪುಟ್ಟ ಎನ್ನುವಂತಿದೆʼ ಎಂದು ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ʻಮೋದಿ ಕರ್ನಾಟಕದ ಭೇಟಿಯು ಕೇವಲ ಮಾತಿಗಷ್ಟೇ ಸೀಮಿತವಾಗಿದೆ. ಬಿಜೆಪಿ ಪ್ರಣಾಳಿಕೆಯಲ್ಲಿ "ಮೋದಿಕಿ ಗ್ಯಾರಂಟಿ" ಎಂದು ಹೇಳಿದ್ದಾರೆ. ಬಿಜೆಪಿ ಮೋದಿ ಪಕ್ಷವಾಗಿದೆಯೇ ಹೊರತು, ಪಕ್ಷವಾಗಿ ಉಳಿದಿಲ್ಲ. ಪ್ರಧಾನಿ ಮಾಡಲು ಮತ ನೀಡುವಂತೆ ಜನರನ್ನು ಕೇಳುತ್ತಿದ್ದಾರೆ. ವ್ಯಕ್ತಿ ಪೂಜೆಯ ಪರಾಕಾಷ್ಠೆ ನಡೆಯುತ್ತಿದ್ದು, ಆತ್ಮರತಿಯ ಅತಿರೇಕದ ಭ್ರಮೆ ಸೃಷ್ಟಿಯಾಗಿದೆ. ನರೇಂದ್ರ ಮೋದಿ ಅವರು ಸಹ ಮೋದಿಯ ಕುರಿತೇ ಮಾತನಾಡತ್ತಿದ್ದಾರೆʼ ಎಂದು ಹೇಳಿದರು.
ʻರೈತರ ಬಗ್ಗೆ, ಬರಗಾಲದ ಬಗ್ಗೆ ಮೋದಿ ಮಾತನಾಡಿಲ್ಲ. ದೇಶ, ಒಂದೇ ಮಾತರಂ ಬಗ್ಗೆ ಮಾತನಾಡಿದ್ದು, ಹಿಂದೂ, ಮುಸ್ಲಿಂ ಎಂದು ಇನ್ನೇಷ್ಟು ದಿನ ಮಾತನಾಡುತ್ತೀರಿʼ ಎಂದು ಪ್ರಶ್ನೆ ಮಾಡಿದರು.
ʻಪಿ.ಎಂ ಆವಾಸ್ ಯೋಜನೆ ಗ್ಯಾರಂಟಿ ಬಗ್ಗೆ ಹೇಳಿದ್ದಾರೆ. ವಿಪರ್ಯಾಸವೆಂದರೆ ಈ ಯೋಜನೆಯಲ್ಲಿ ನಿಗದಿಯಾಗಿದ್ದ 1,8000 ಮನೆಗಳಲ್ಲಿ ಒಂದೇ ಒಂದು ಮನೆ ಸಹ ಪೂರ್ಣವಾಗಿಲ್ಲ. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಇದೀಗ ರಾಜ್ಯ ಸರ್ಕಾರ 500 ಕೋಟಿ ರೂಪಾಯಿ ಬಿಡುಗಡೆ ಮಾಡಿದೆʼ ಎಂದರು.
ʻಕಾಂಗ್ರೆಸ್ ಗ್ಯಾರಂಟಿ ಹಾಗೂ ಮೋದಿ ಗ್ಯಾರಂಟಿಗಳನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಮೋದಿ ಗ್ಯಾರಂಟಿಗೆ ವ್ಯಾಲ್ಯೂನೇ ಇಲ್ಲ. ತೆರಿಗೆ ಪಾವತಿಯಲ್ಲಿ ದೇಶದಲ್ಲೇ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಎಫ್‌ಡಿಐ ಹೂಡಿಕೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ, ಕರ್ನಾಟಕ ದಿವಾಳಿ ಆಗಿದೆ ಎನ್ನುತ್ತಿದ್ದಾರೆ. ಹಾಗಾದರೆ, ರಾಜ್ಯದಿಂದ ಎಷ್ಟು ಆದಾಯ ಬರುತ್ತಿದೆ ಮೋದಿ ವಿವರಿಸಬೇಕುʼ ಎಂದು ಆಗ್ರಹಿಸಿದರು.
ಕುಟುಂಬ ರಾಜಕೀಯದ ಬಗ್ಗೆ ಏಕೆ ಮಾತನಾಡಲಿಲ್ಲ
ʻಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡ್ತಾರೆ. ಆದರೆ, ಮೈಸೂರಿನ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕುಟುಂಬ ರಾಜಕೀಯದ ಬಗ್ಗೆ ಏಕೆ ಮಾತನಾಡಲಿಲ್ಲ. ಅಲ್ಲಿ ಏಕೆ ರಾಜಕಾರಣದ ಬಗ್ಗೆ ಮೌನವಾಗಿದ್ದರು. ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ಮೋದಿ ಅವರಿದ್ದ ವೇದಿಕೆಯಲ್ಲಿ ಎಚ್.ಡಿ ದೇವೇಗೌಡ ಅವರ ಕುಟುಂಬ, ಬಿ.ಎಸ್ ಯಡಿಯೂರಪ್ಪ ಅವರ ಕುಟುಂಬದವರು ಇದ್ದರು. ಆದರೂ ಮೋದಿ ಅವರು ಮೌನವಾಗಿದ್ದರು. ರಾಜಕೀಯಕ್ಕೆ ಅವಶ್ಯಕತೆ ಇದ್ದಾಗ ಅವರು ಕುಟುಂಬ ರಾಜಕಾರಣದ ಬೆಂಬಲ ಪಡೆದುಕೊಳ್ಳುತ್ತಾರೆ. ಇಲ್ಲದಿದ್ದಾಗ ತೆಗಳುತ್ತಾರೆʼ ಎಂದು ಹೇಳಿದರು.