ಮೋದಿ 3.0 ಸಂಪುಟ ಸೇರಿದ ಸೋಮಣ್ಣ | ಪಕ್ಷದ ರಾಜ್ಯ ನಾಯಕರಿಗೆ ಸಂದೇಶ ಕೊಟ್ಟ ಹೈಕಮಾಂಡ್ !
x

ಮೋದಿ 3.0 ಸಂಪುಟ ಸೇರಿದ ಸೋಮಣ್ಣ | ಪಕ್ಷದ ರಾಜ್ಯ ನಾಯಕರಿಗೆ ಸಂದೇಶ ಕೊಟ್ಟ ಹೈಕಮಾಂಡ್ !


ತುಮಕೂರು ಲೋಕಸಭಾ ಸದಸ್ಯ, ಲಿಂಗಾಯತ ಮುಖಂಡ ವಿ ಸೋಮಣ್ಣ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ರಾಜ್ಯದಿಂದ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಐವರನ್ನು ಸೋಮಣ್ಣ ಕೂಡ ಒಬ್ಬರು.

ಬಿಬಿಎಂಪಿ ಕೋರ್ಪೊರೇಟರ್ ಹಂತದಿಂದ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವವರೆಗಿನ ವಿ ಸೋಮಣ್ಣ ಅವರ ಪಯಣ ಸುದೀರ್ಘ ನಾಲ್ಕು ದಶಕಗಳ ರಾಜಕೀಯ ಏಳುಬೀಳಿನ ಕಥೆ.

ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯನಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ ವಿ ಸೋಮಣ್ಣ ಜನತಾ ಪರಿವಾರದ ಮೂಲಕ ರಾಜಕೀಯ ಅಸ್ತಿತ್ವ ಕಂಡುಕೊಂಡವರು. ಎರಡು ಬಾರಿ ಅವರು ಮಹಾನಗರ ಪಾಲಿಕೆಯ ಸದಸ್ಯರಾಗಿದ್ದರು.

ಬೆಂಗಳೂರಿನ ಬಿನ್ನಿಪೇಟೆ ಮತ್ತು ಗೋವಿಂದರಾಜಪುರ ವಿಧಾನಸಭಾ ಕ್ಷೇತ್ರಗಳಿಂದ ಐದು ಬಾರಿ(ಒಮ್ಮೆ ಪಕ್ಷೇತರರಾಗಿ) ಶಾಸಕರಾಗಿ ಆಯ್ಕೆಯಾಗಿರುವ ಸೋಮಣ್ಣ, ಆ ಭಾಗದ ಅತ್ಯಂತ ಜನಪ್ರಿಯ ನಾಯಕ. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಕೆಲಸ ಮಾಡಿರುವ ಅವರು ವಸತಿ, ತೋಟಗಾರಿಕೆ, ರೇಷ್ಮೆ, ಮುಜರಾಯಿ, ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಬಂಧೀಖಾನೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ರಾಮನಗರ ಜಿಲ್ಲೆಯ ದೊಡ್ಡಮರಳವಾಡಿ ಗ್ರಾಮದ ಮೂಲದ ವಿ ಸೋಮಣ್ಣ ರಾಜ್ಯದ ನಾಲ್ವರು ಮುಖ್ಯಮಂತ್ರಿಗಳ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿರುವ ಅನುಭವಿ ರಾಜಕಾರಣಿ.

ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಅದೇ ಹೊತ್ತಿಗೆ ಅವರು ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದಲೂ ಕಣಕ್ಕಿಳಿದಿದ್ದರು. ಆದರೆ, ಎರಡೂ ಕಡೆ ಅವರು ಸೋಲು ಕಂಡಿದ್ದರು. ವಾಸ್ತವವಾಗಿ ಗೋವಿಂದರಾಜಪುರ ವಿಧಾನಸಭಾ ಕ್ಷೇತ್ರದಿಂದ ದಶಕಗಳಿಂದ ಆಯ್ಕೆಯಾಗುತ್ತಿದ್ದ ಅವರಿಗೆ ಅಲ್ಲಿ ಟಿಕೆಟ್ ತಪ್ಪಿಸಿ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಉದ್ದೇಶದಿಂದಲೇ ಪಕ್ಷದೊಳಗಿನ ಅವರ ವಿರೋಧಿಗಳು ಅವರನ್ನು ಚಾಮರಾಜನಗರ ಮತ್ತು ವರುಣಾಕ್ಕೆ ಕಳಿಸಿದ್ದರು ಎಂಬ ಆರೋಪವನ್ನು ಸ್ವತಃ ಸೋಮಣ್ಣನವರೇ ಮಾಡಿದ್ದರು.

ದಶಕದ ಹಿಂದೆ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಬಲಗೈ ಬಂಟನಾಗಿ ಗುರುತಿಸಿಕೊಂಡಿದ್ದ ಸೋಮಣ್ಣ ಕ್ರಮೇಣ ದೂರಾಗಿದ್ದರು. ಕಳೆದ ವಿಧಾನಸಭಾ ಚುನಾವಣೆ ಟಿಕೆಟ್ ಹಂಚಿಕೆ ವೇಳೆ ತಮಗೆ ಗೋವಿಂದರಾಜನಗರ ಟಿಕೆಟ್ ತಪ್ಪಲು ಯಡಿಯೂರಪ್ಪ ಅವರೇ ಕಾರಣವೆಂದು ಸೋಮಣ್ಣ ಗಂಭೀರ ಆರೋಪ ಮಾಡಿದ್ದರು ಕೂಡ. ಅಲ್ಲದೆ, ವರುಣಾ ಮತ್ತು ಚಾಮರಾಜನಗರದ ಅವರ ಸೋಲಿನ ಹಿಂದೆಯೂ ತಮ್ಮದೇ ಪಕ್ಷದ ಹಿರಿಯ ನಾಯಕರ ಕೈವಾಡವಿದೆ ಎಂದೂ ಅವರು ಗಂಭೀರ ಆರೋಪ ಮಾಡಿದ್ದರು. ಆಗ ಆ ಸೋಲಿನ ಮೂಲಕ ಸೋಮಣ್ಣ ಪಕ್ಷದಲ್ಲಿ ಮೂಲೆಗುಂಪಾಗಿಯೇಬಿಟ್ಟರು ಎಂಬಂತಹ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬಂದಿದ್ದವು.

ಆದರೆ, ಒಂದೇ ವರ್ಷದಲ್ಲಿ ಸೋಮಣ್ಣ ಮತ್ತೆ ಎದ್ದುಬಂದಿದ್ದಾರೆ. ರಾಜ್ಯ ರಾಜಕಾರಣದಿಂದ ದೆಹಲಿ ರಾಜಕಾರಣಕ್ಕೆ ಪದಾರ್ಪಣೆ ಮಾಡುತ್ತಲೇ ಕೇಂದ್ರ ಸಚಿವರಾಗುವ ಅವಕಾಶವೂ ಸಿಕ್ಕಿದೆ. ರಾಜ್ಯದಿಂದ ಆಯ್ಕೆಯಾಗಿರುವ ಪಕ್ಷದ ಹಲವು ಹಿರಿಯ, ಅನುಭವಿ ಸಂಸದರ ಹೊರತಾಗಿಯೂ ಸೋಮಣ್ಣ ಮೊಟ್ಟಮೊದಲ ಬಾರಿ ಸಂಸದರಾಗಿ ಆಯ್ಕೆಯಾಗುತ್ತಲೇ ಸಚಿವಗಿರಿಯ ಅಧಿಕಾರ ಸಿಕ್ಕಿದೆ. ಈ ಬೆಳವಣಿಗೆಯ ಹಿಂದೆ ಪಕ್ಷದ ಹೈಕಮಾಂಡ್ ಸ್ವತಃ ಇದ್ದು, ಸೋಮಣ್ಣ ಅವರನ್ನು ರಾಜ್ಯದಲ್ಲಿ ಪರ್ಯಾಯ ಲಿಂಗಾಯತ ನಾಯಕರಾಗಿ ಬೆಳೆಸುವ ಮೂಲಕ ಈಗಾಗಲೇ ಪಕ್ಷದಲ್ಲಿ ಕ್ರಮೇಣ ಬದಿಗೆ ಸರಿಯುತ್ತಿರುವ ಹಳೆಯ ಲಿಂಗಾಯತ ನಾಯಕರನ್ನು ಇನ್ನಷ್ಟು ಅಂಚಿಗೆ ತಳ್ಳುವ ಹೈಕಮಾಂಡ್ ಲೆಕ್ಕಾಚಾರ ಈ ಎಲ್ಲದರ ಹಿಂದಿದೆ ಎಂಬ ಮಾತು ಸೋಮಣ್ಣ ಅವರ ಅನಿರೀಕ್ಷಿತ ಸಚಿವಗಿರಿಯ ಕುರಿತ ಚರ್ಚೆಯಲ್ಲಿ ಕೇಳಿಬರುತ್ತಿದೆ.

Read More
Next Story