ಶಿಕ್ಷಕನ ಕನಸು ನನಸು; ಸಂಬಳ ಕೂಡಿಟ್ಟು ವಿದ್ಯಾರ್ಥಿಗಳಿಗೆ ವಿಮಾನಯಾನ ಮಾಡಿಸಿದ ರಾಜಣ್ಣ ಮೇಷ್ಟ್ರು
x

ಶಿಕ್ಷಕನ ಕನಸು ನನಸು; ಸಂಬಳ ಕೂಡಿಟ್ಟು ವಿದ್ಯಾರ್ಥಿಗಳಿಗೆ ವಿಮಾನಯಾನ ಮಾಡಿಸಿದ ರಾಜಣ್ಣ ಮೇಷ್ಟ್ರು

ಚಿಕ್ಕಂದಿನಲ್ಲಿ ವಿಮಾನವನ್ನು ಹತ್ತಿರದಿಂದ ನೋಡಬೇಕು, ಅದರಲ್ಲಿ ಹಾರಾಡಬೇಕು ಎಂಬ ಆಸೆ ಪೂರೈಸದಾಗ ಸಂಕಟ ಪಟ್ಟಿದ್ದೆ. ಇಂತಹ ಸಂಕಟ ನಮ್ಮ ಮಕ್ಕಳು ಪಡಬಾರದು ಎಂಬುದು ನನ್ನ ಉದ್ದೇಶ ಎನ್ನುತ್ತಾರೆ ಅವರು.


ಒಂದು ಸಲವಾದರೂ ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬ ಆಸೆ ಯಾರಿಗೆ ಇರುವುದಿಲ್ಲ ಹೇಳಿ?. ಅಂದುಕೊಂಡ ಮಾತ್ರಕ್ಕೆ ವಿಮಾನದಲ್ಲಿ ಪ್ರಯಾಣಿಸಲು ಆಗುತ್ತಾ? ಇಲ್ಲ. ಅದಕ್ಕೆ ಹಣದ ಅಗತ್ಯ ಇರುತ್ತದೆ. ಆದರೆ ತುಮಕೂರಿನ ಮಾದರಿ ಶಿಕ್ಷಕರೊಬ್ಬರು ತಮ್ಮ ಸಂಬಳದ ಕೂಡಿಟ್ಟ ಹಣದಲ್ಲಿ ತಮ್ಮ ವಿದ್ಯಾರ್ಥಿಗಳನ್ನು ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಬಂದಿದ್ದಾರೆ!

ತುಮಕೂರು ತಾಲೂಕಿನ ಹರಳೂರು ಗ್ರಾಮದ ಶ್ರೀ ಸಿದ್ದಗಂಗಾ ಸಂಸ್ಥೆಯ ಶ್ರೀ ವೀರಭದ್ರೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಜಣ್ಣ ಅವರೇ ಮಕ್ಕಳಿಗೆ ವಿಮಾನಯಾನ ಮಾಡಿಸಿದ ಶಿಕ್ಷಕರಾಗಿದ್ದಾರೆ. ಅವರು, ಮಾಗಡಿ ತಾಲೂಕು ಕುದೂರು ಹೋಬಳಿ ಕಣನೂರುಪಾಳ್ಯದ ಊರಿನವರು.

ಮುಖ್ಯಶಿಕ್ಷಕ ರಾಜಣ್ಣ ತಮ್ಮ ಶಾಲೆಯ ಮಕ್ಕಳನ್ನು ವಿಮಾನಯಾನ ಮಾಡಿಸಿದ್ದು ಯಾಕೆ ಎಂಬ ಅಂಶ ಕುತೂಹಲಕಾರಿಯಾಗಿದೆ. ಒಟ್ಟು 51 ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಾಲೆಯ ಅಡುಗೆ ಸಿಬ್ಬಂದಿ ಬೆಂಗಳೂರಿನಿಂದ ಪುಣೆಗೆ ಹೋಗಿ, 5 ದಿನಗಳ ಶೈಕ್ಷಣಿಕ ಪ್ರವಾಸ ಮುಗಿಸಿಕೊಂಡು ಬಂದಿದ್ದಾರೆ. ಮಕ್ಕಳ ಮೊದಲ ವಿಮಾನ ಪ್ರಯಾಣದ ಅನುಭವ ಅದ್ಭುತವಾಗಿತ್ತು ಎಂದು ಮಕ್ಕಳು ಖುಷಿ ಪಟ್ಟಿದ್ದಾರೆ.

ಶಾಲೆಯ 51 ಮಕ್ಕಳು, ಐವರು ಶಿಕ್ಷಕರು, ಇಬ್ಬರು ಅಡುಗೆ ಸಿಬ್ಬಂದಿ ಸೇರಿ ಒಟ್ಟು 58 ಜನರು ವಿಮಾನಯಾನ ಮಾಡಿದ್ದಾರೆ. ಹರಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರದ ಪುಣೆಗೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಪ್ರತಿಯೊಬ್ಬರ ಟಿಕೆಟಿಗಾಗಿ 4,675 ರೂಪಾಯಿಗಳಂತೆ ಒಟ್ಟು 2,71,150 ರೂಪಾಯಿಗಳನ್ನು ಸಂಬಳದಲ್ಲಿ ಕೂಡಿಟ್ಟ ಹಣದಿಂದ ರಾಜಣ್ಣ ವ್ಯಯಿಸಿದ್ದಾರೆ.

ವಿಮಾನದಲ್ಲಿ ಪ್ರಯಾಣಿಸಿ ಬಂದಿರುವ ಮಕ್ಕಳ ಖುಷಿ ಹೇಳತೀರದು. ನಾವು ರೈತರ ಮಕ್ಕಳು. ವಿಮಾನದಲ್ಲಿ ಹೋಗುವುದನ್ನು ಕನಸು ಮನಸಿನಲ್ಲಿಯೂ ಕಲ್ಪಸಿಕೊಂಡಿರಲಿಲ್ಲ. ಮುಗಿಲಿನಲ್ಲಿ ಹಾರುವ ವಿಮಾನಗಳಿಗೆ ಇದ್ದಲ್ಲಿಂದಲೇ ಕೈ ಮಾಡಿ ಬೈ ಹೇಳುತ್ತಿದ್ದೆವು. ಆದರೆ ಉಚಿತವಾಗಿ ನಮ್ಮ ರಾಜಣ್ಣ ಸರ್ ನಮ್ಮೆಲ್ಲರನ್ನೂ ವಿಮಾನದಲ್ಲಿ ಕರೆದುಕೊಂಡು ಹೋಗಿ ಬಂದಿದ್ದಾರೆ. ಮೊದಲ ಬಾರಿ ವಿಮಾನ ಹತ್ತಿರುವುದು ಮರೆಯಲಾರದ ಅನುಭವ ಎಂದು ವಿದ್ಯಾರ್ಥಿಗಳು ಖುಷಿಪಟ್ಟಿದ್ದಾರೆ.

ಪ್ರವಾಸಕ್ಕೆ ಹೋಗುವ ಸಿದ್ಧತೆ ಹಾಗೂ ಅದಕ್ಕೆ ಬೇಕಾದ ಹಣದ ವ್ಯವಸ್ಥೆಯನ್ನೇನೊ ಶಿಕ್ಷಕ ರಾಜಣ್ಣ ಮಾಡಿಕೊಂಡಿದ್ದರು. ಆದರೆ ಮಕ್ಕಳನ್ನು ವಿಮಾನದಲ್ಲಿ ಕರೆದೊಯ್ಯಲು ಪಾಲಕರನ್ನು ಒಪ್ಪಿಸುವ ದೊಡ್ಡ ಸವಾಲು ಅವರಿಗೆ ಎದುರಾಗಿತ್ತು. ಆದರೆ, ಮಕ್ಕಳ ವಿಮಾನ ಯಾನದ ಬಳಿಕ ರಾಜಣ್ಣರವರ ಸೇವೆಗೆ ಮಕ್ಕಳು ಮತ್ತು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.


ಮಾದರಿ ಶಿಕ್ಷಕ ರಾಜಣ್ಣ

ರಾಜಣ್ಣರವರು ಕಾರ್ಯ ನಿರ್ವಹಿಸುವ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮಗಳಾದರು ನಮ್ಮ ಹಳ್ಳಿಗಾಡಿನ ಶಾಲಾ ಮಕ್ಕಳು ಯಾವುದಾದರು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಶಾಲೆಗೆ ಕರೆತಂದು ಸಂವಾದ ಮಾಡಿಸುತ್ತಾರೆ. ಸಾಲುಮರದ ತಿಮ್ಮಕ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಲನಚಿತ್ರ ವಿಭಾಗ, ಅಧ್ಯಾತ್ಮಕ್ಷೇತ್ರ, ಮಾಧ್ಯಮರಂಗ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಶಾಲೆಗೆ ಕರೆಸಿ ಮಕ್ಕಳಿಗೆ ಅವರ ಅನುಭವವನ್ನು ಕೇಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಓದುವ ಸಂದರ್ಭದಲ್ಲೇ ಮಕ್ಕಳು ವಿಮಾನ ಪ್ರಯಾಣವನ್ನು ಒಮ್ಮೆಯಾದರು ಮಾಡಬೇಕು. ಏಕೆಂದರೆ ನಾನು ಚಿಕ್ಕಂದಿನಲ್ಲಿ ವಿಮಾನವನ್ನು ಹತ್ತಿರದಿಂದ ನೋಡಬೇಕು, ಅದರಲ್ಲಿ ಹಾರಾಡಬೇಕು ಎಂಬ ಆಸೆಯಿತ್ತು. ಆಗದೇ ಇದ್ದಾಗ ಬಹಳ ಸಂಕಟ ಪಟ್ಟಿದ್ದೆ. ಇಂತಹ ಸಂಕಟ ನಮ್ಮ ಮಕ್ಕಳು ಪಡಬಾರದು. ಅದಕ್ಕಾಗಿ ಒಮ್ಮೆಯಾದರು ಅವರನ್ನು ವಿಮಾನದಲ್ಲಿ ಪ್ರಯಾಣ ಮಾಡಿಸಬೇಕು. ಮನುಷ್ಯ ಎತ್ತರಕ್ಕೆ ಹೋದಾಗ ಅವನ ಸಣ್ಣತನಗಳೆಲ್ಲಾ ಗೊತ್ತಾಗುತ್ತದೆ. ಮಕ್ಕಳ ಆಲೋಚನೆಗಳು ಎತ್ತರಕ್ಕೆ ಬೆಳೆಯಬೇಕು ಅದಕ್ಕಾಗಿ ಇಂತಹ ಒಂದು ಪ್ರಯೋಗವನ್ನು ಮಾಡುತ್ತಿದ್ದೇನೆ. ಮಕ್ಕಳಿಂದ ಇದುವರೆಗು ನಮಗೆ ಸಂಬಳ ಪಡೆಯುತ್ತಿದ್ದೇನೆ. ಅದರಲ್ಲಿ ಒಂದು ಬಾಗವನ್ನಷ್ಟೇ ಮಕ್ಕಳಿಗೆ ಖರ್ಚು ಮಾಡುತ್ತಿದ್ದೇನೆ ಎಂಬುದೇ ನನಗೆ ಖುಷಿ ತರುವಂತದಾಗಿದೆ ಎಂದು ರಾಜಣ್ಣ ಖುಷಿಯಿಂದ ವಿವರಿಸುತ್ತಾರೆ.

ಶಾಲೆಯ ಮಕ್ಕಳು ಮತ್ತು ಶಿಕ್ಷಕರ ಜೊತೆಗೆ ಬಿಸಿಯೂಟ ತಯಾರಿಸುವ ತಾಯಂದಿರು ಮತ್ತು ಶಾಲೆಯಲ್ಲಿ ಕಸ ಹೊಡೆದು ಶಾಲೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವ ಸಿಬ್ಬಂದಿಯನ್ನು ರಾಜಣ್ಣ ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನ ಪ್ರಯಾಣ ಮಾಡಿಸುತ್ತಿದ್ದಾರೆ.


ಸಂಸ್ಕೃತ ವಿಶ್ವವಿದ್ಯಾಲಯ

ಮಾಗಡಿ ತಾಲೂಕು ತಿಪ್ಪಸಂಸ್ರ ಹೋಬಳಿಯಲ್ಲಿ ನೂರು ಎಕ್ಕರೆ ಸಂಸ್ಕೃತ ವಿಶ್ವವಿದ್ಯಾಲಯ ಮಂಜೂರಾಗಲು ರಾಜಣ್ಣರವರ ಶ್ರಮವೂ ಇದೆ. ರಾಜ್ಯ ಸಂಸ್ಕೃತ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜಣ್ಣರವರಿಗೆ ಸಾಲುಮರದದ ತಿಮ್ಮಕ್ಕ ಪರಿಸರ ಪ್ರಶಸ್ತಿ, ಉತ್ತಮ ಶಿಕ್ಷಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ.

ಶಿಕ್ಷಕ ರಾಜಣ್ಣ ಅವರ ಬಗ್ಗೆ ಶಾಲಾ ವಿದ್ಯಾರ್ಥಿಗಳು ಏನು ಹೇಳುತ್ತಾರೆ? ರಾಜಣ್ಣ ಅಭಿಪ್ರಾಯವೇನು? ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ



Read More
Next Story