
ಮಾಕ್ ಡ್ರಿಲ್
Mock Drill| ಕರ್ನಾಟಕದ ಎಲ್ಲೆಲ್ಲಿ ನಾಳೆ ಅಣಕು ಕವಾಯತುಗಳು ನಡೆಯುತ್ತವೆ? ಇಲ್ಲಿದೆ ಎಲ್ಲ ಮಾಹಿತಿ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಬಳಿಕ ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚಾಗಿದೆ. ಹೀಗಾಗಿ ದೇಶದ ಎಲ್ಲಾ ರಾಜ್ಯಗಳಿಗೆ ಬುಧವಾರ (ಮೇ 07) ಮಾಕ್ ಡ್ರಿಲ್ ಮಾಡುವಂತೆ ಕೇಂದ್ರ ಸಂದೇಶ ರವಾನಿಸಿದೆ.
ಕೇಂದ್ರ ಗೃಹ ಸಚಿವಾಲಯ ಆದೇಶದ ಪ್ರಕಾರ, ಬೆಂಗಳೂರು ನಗರ, ರಾಯಚೂರು ಮತ್ತು ಕಾರವಾರ ಸೇರಿದಂತೆ ದೇಶಾದ್ಯಂತ 244 ಸ್ಥಳಗಳಲ್ಲಿ ಬುಧವಾರ ( ಮೇ 7) ಅಣಕು ಕವಾಯತುಗಳನ್ನು ನಡೆಯಲಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಬಳಿಕ ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನದ ವಿರುದ್ಧ ಭಾರತ ಯಾವ ಕ್ಷಣದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಹೀಗಾಗಿ ದೇಶದ ಎಲ್ಲಾ ರಾಜ್ಯಗಳಿಗೆ ಬುಧವಾರ (ಮೇ 07) ಮಾಕ್ ಡ್ರಿಲ್ ಮಾಡುವಂತೆ ಕೇಂದ್ರ ಸಂದೇಶ ರವಾನಿಸಿದೆ. ಹೀಗಾಗಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಅಣಕು ಕವಾಯತು ನಡೆಸಲಾಗುತ್ತಿದೆ.
ಗಡಿ, ಕರಾವಳಿ ಜಿಲ್ಲೆಗಳಿಗೆ ವಿಶೇಷ ಗಮನ
ಮಾಕ್ ಡ್ರಿಲ್ ನಡೆಸಲು ಗಡಿ ಮತ್ತು ಕರಾವಳಿ ಜಿಲ್ಲೆಗಳಿಗೆ ವಿಶೇಷ ಗಮನ ನೀಡಲಾಗಿದೆ. ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರಿನಲ್ಲಿ ದೇಶದ ಜಿಡಿಪಿಗೆ ಗಮನಾರ್ಹ ಮೊತ್ತವನ್ನು ಕೊಡುಗೆ ನೀಡುವ ಪ್ರಮುಖ ಐಟಿ ಮತ್ತು ಜೈವಿಕ ತಂತ್ರಜ್ಞಾನ (BT) ಕೈಗಾರಿಕೆಗಳಿವೆ. ನಗರವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಯಲಹಂಕ ವಾಯುಪಡೆ ನೆಲೆ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಸೇರಿದಂತೆ ಪ್ರಮುಖ ಸಂಸ್ಥೆಗಳನ್ನು ಸಹ ಹೊಂದಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಳಿ ನದಿಯ ಬಳಿ ಇರುವ ಕೈಗಾ ಪರಮಾಣು ವಿದ್ಯುತ್ ಸ್ಥಾವರ (ಕೆಎಪಿಎಸ್) ದೇಶದ ಮೂರನೇ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾಗಿದೆ. ಕರಾವಳಿ ಪಟ್ಟಣವು ಪ್ರಮುಖ ನೌಕಾ ನೆಲೆಯಾದ ಐಎನ್ಎಸ್ ಕದಂಬವನ್ನು ಸಹ ಹೊಂದಿದೆ.
ರಾಜ್ಯದ ಮೊದಲನೆಯ ರಾಯಚೂರು ಉಷ್ಣ ವಿದ್ಯುತ್ ಸ್ಥಾವರವು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರವಾಗಿದ್ದು, ಕರ್ನಾಟಕದಲ್ಲಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್‌ನ ಶೇಕಡಾ 70ರಷ್ಟನ್ನು ಇಲ್ಲಿಂದನೇ ರವಾನೆಯಾಗುತ್ತದೆ.
ಬೆಂಗಳೂರು ನಗರದ 32 ಕಡೆ ಮಾಕ್ ಡ್ರಿಲ್
ಬೆಂಗಳೂರಿನ 35 ಕಡೆ ಸೈರನ್ ಇದ್ದು, 32 ಕಡೆ ಕಾರ್ಯ ನಿರ್ವಹಿಸುತ್ತಿವೆ. ಇಂಡಿಯನ್ ಇನ್ಸ್ಟಿಟ್ಯೂಟ್, ಸಿಕ್ಯುಎಎಲ್, ಇಎಸ್ಐ ಆಸ್ಪತ್ರೆ, ಎನ್ಎಎಲ್, ಬೆಂಗಳೂರು ಡೈರಿ, ಕೆನರಾ ಬ್ಯಾಂಕ್, SRS ಪೀಣ್ಯ, ವಿವಿ ಟವರ್ ಅಗ್ನಿಶಾಮಕ ಠಾಣೆ, ಜ್ಞಾನಭಾರತಿ ಅಗ್ನಿಶಾಮಕ ಠಾಣೆ, ಥಣಿಸಂದ್ರ ಅಗ್ನಿಶಾಮಕ ಠಾಣೆ, ಬಾಣಸವಾಡಿ ಅಗ್ನಿಶಾಮಕ ಠಾಣೆ, ಯಶವಂತಪುರ ಅಗ್ನಿಶಾಮಕ ಠಾಣೆ, ಬನಶಂಕರಿ ಅಗ್ನಿಶಾಮಕ ಠಾಣೆ, ರಾಜಾಜಿನಗರ ಅಗ್ನಿಶಾಮಕ ಠಾಣೆ, ಚಾಮರಾಜಪೇಟೆ ಅಗ್ನಿಶಾಮಕ ಠಾಣೆ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ, ಹಲಸೂರು ಗೇಟ್ ಠಾಣೆ, ಹಲಸೂರು ಪೊಲೀಸ್ ಠಾಣೆ, ಉಪ್ಪಾರಪೇಟೆ ಪೊಲೀಸ್ ಠಾಣೆ, ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ, ಕಾಮಾಕ್ಷಿಪಾಳ್ಯ ಠಾಣೆ, ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆ, ವೈಯಾಲಿಕಾವಲ್ ಠಾಣೆ, ಹಲಸೂರು ಗೃಹರಕ್ಷಕದಳ ಕೇಂದ್ರ ಕಚೇರಿ, ಪೀಣ್ಯ ಅಗ್ನಿಶಾಮಕ ಠಾಣೆ, ಬೆಂಗಳೂರು ಗ್ರಾಮಾಂತರ ಗೃಹರಕ್ಷಕದಳ ಕಚೇರಿ, ಬಾಗಲೂರು ಅಗ್ನಿಶಾಮಕ ಠಾಣೆ, ಅಂಜನಾಪುರ ಅಗ್ನಿಶಾಮಕ ಠಾಣೆ, ITPL ಅಗ್ನಿಶಾಮಕ ಠಾಣೆ, ಸರ್ಜಾಪುರ ಅಗ್ನಿಶಾಮಕ ಠಾಣೆ, ಎಲೆಕ್ಟ್ರಾನಿಕ್ ಅಗ್ನಿಶಾಮಕ ಠಾಣೆ ಮತ್ತು ಡೈರಿ ಸರ್ಕಲ್ ಅಗ್ನಿಶಾಮಕ ಠಾಣೆಯಲ್ಲಿ ನಡೆಯಲಿದೆ.
ಮೂರು ಹಂತದಲ್ಲಿ ಸೈರನ್
ಬುಧವಾರ ನಡೆಯುವ ಮಾಕ್ ಡ್ರಿಲ್‌ನಲ್ಲಿ ಸೈರನ್ ಹಾಕಲಾಗುತ್ತದೆ. ಮೂರು ಹಂತದಲ್ಲಿ ಸೈರನ್ ಹಾಕಲಾಗುತ್ತದೆ. ಸೈರನ್ ಸಹ ಮೂರು ರೀತಿಯ ಶಬ್ದ ಮಾಡುತ್ತದೆ. ಈ ಸೈರನ್ ಸುಮಾರು 3ಕಿ.ಮೀ. ವ್ಯಾಪ್ತಿಯವರೆಗೂ ಕೇಳುತ್ತದೆ. ಈ ಅಣಕು ಕವಾಯತು, ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತರಬೇತಿ ನೀಡುವುದರ ಜೊತೆಗೆ ತಮ್ಮನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳುವುದಕ್ಕೆ ನೆರವಾಗುತ್ತದೆ.
ಮಾಕ್ ಡ್ರಿಲ್ ಯಾವ ರೀತಿ ನಡೆಯುತ್ತದೆ
ಅಣಕು ಕವಾಯತಿನ ಅಡಿಯಲ್ಲಿ ವಾಯುದಾಳಿ ಎಚ್ಚರಿಕೆ ಸೈರನ್‌ಗಳನ್ನು ನಿರ್ವಹಿಸಲಾಗುತ್ತದೆ. ಇದು ಪ್ರಮುಖ ಅಪಾಯ ಮತ್ತು ಶತ್ರು ಚಟುವಟಿಕೆಗಳ ಕುರಿತು ಎಚ್ಚರಿಕೆಯನ್ನು ನೀಡುವುದಕ್ಕೆ ಸಂಬಂಧಿಸಿದ ಒಂದು ಹಂತವಾಗಿದೆ. ಸಂಭವನೀಯ ದಾಳಿಗಳ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯ ನಾಗರಿಕ ರಕ್ಷಣಾ ತಂತ್ರಗಳಲ್ಲಿ ತರಬೇತಿ ನೀಡಲಾಗುವುದು. ಇದರ ಅಡಿಯಲ್ಲಿ, ಶತ್ರುಗಳ ವೈಮಾನಿಕ ಕಣ್ಗಾವಲು ಅಥವಾ ದಾಳಿಯಿಂದ ನಗರಗಳು ಮತ್ತು ರಚನೆಗಳನ್ನು ಮರೆಮಾಡಲು ತುರ್ತು ಪ್ರೋಟೋಕಾಲ್‌ಗಳನ್ನು ಅಳವಡಿಸಲಾಗುತ್ತದೆ. ಬುಧವಾರ ಯುದ್ಧದ ಸೈರನ್ ಮೊಳಗಿಸಲಾಗುತ್ತದೆ ಮತ್ತು ಅಣಕು ಕವಾಯತುಗಳನ್ನು ನಡೆಸಲಾಗುತ್ತದೆ.
ಏನಲ್ಲಾ ಅನುಕರಣೆ ಮಾಡಲಾಗುತ್ತದೆ?
ವಿದ್ಯುತ್ ಕಡಿತ
ವೈಮಾನಿಕ ದಾಳಿ ಸೈರನ್‌ಗಳು
ಸ್ಥಳಾಂತರದ ಸೂಚನೆ
ತುರ್ತು ಸಂವಹನ ಸ್ಥಗಿತಗಳು
ಆಶ್ರಯ ಪಡೆಯುವ ಪ್ರೋಟೋಕಾಲ್‌ಗಳು