
Mock Drill in India : ರಾಜ್ಯದ ಮೂರು ಜಿಲ್ಲೆಗಳು ಸೇರಿದಂತೆ ದೇಶದ 244 ಜಿಲ್ಲೆಗಳಲ್ಲಿ ಅಣಕು ಪ್ರದರ್ಶನ
ಈ ಅಣಕು ಪ್ರದರ್ಶನವು ವಾಯುದಾಳಿಯ ಸಂದರ್ಭದಲ್ಲಿ ಸಂಭವಿಸಬಹುದಾದ ಅನಾಹುತಗಳು, ತೊಂದರೆಗಳು ಮತ್ತು ಅವುಗಳ ರಕ್ಷಣಾ ಕ್ರಮಗಳ ಬಗ್ಗೆ ಕೇಂದ್ರೀಕೃತವಾಗಿತ್ತು
ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಇಂದು ದೇಶದಾದ್ಯಂತ 244 ಜಿಲ್ಲೆಗಳಲ್ಲಿ ವಾಯುದಾಳಿಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅಣಕು ಪ್ರದರ್ಶನ (ಮಾಕ್ ಡ್ರಿಲ್) ನಡೆಯಿತು. ಇದರ ಭಾಗವಾಗಿ ಕರ್ನಾಟಕ ಬೆಂಗಳೂರು, ರಾಯಚೂರು ಮತ್ತು ಕಾರವಾರ ಜಿಲ್ಲೆಗಳಲ್ಲಿಯೂ ಈ ಅಣಕು ಪ್ರದರ್ಶನ ಆಯೋಜಿಸಲಾಗಿತ್ತು. ಬೆಂಗಳೂರಿನಲ್ಲಿ, ಹಲಸೂರು ಬಳಿಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕಚೇರಿ, ಗೃಹ ರಕ್ಷಕ ದಳದ ಕಚೇರಿ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಕಚೇರಿಯ ಸಮೀಪ ಈ ಮಾಕ್ ಡ್ರಿಲ್ ನಡೆಯಿತು. ರಾಜ್ಯದ ಗೃಹ ಸಚಿವ ಪರಮೇಶ್ವರ್ ಅವರು ಈ ಅಣಕು ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಅಣಕು ಪ್ರದರ್ಶನವು ವಾಯುದಾಳಿಯ ಸಂದರ್ಭದಲ್ಲಿ ಸಂಭವಿಸಬಹುದಾದ ಅನಾಹುತಗಳು, ತೊಂದರೆಗಳು ಮತ್ತು ಅವುಗಳ ರಕ್ಷಣಾ ಕ್ರಮಗಳ ಬಗ್ಗೆ ಕೇಂದ್ರೀಕೃತವಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಎತ್ತರದ ಕಟ್ಟಡಕ್ಕೆ ಬೆಂಕಿ ಬಿದ್ದಾಗ ಅದನ್ನು ಹೇಗೆ ನಂದಿಸುವುದು ಮತ್ತು ಅಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತವಾಗಿ ಹೇಗೆ ಹೊರತೆಗೆಯುವುದು ಎಂಬುದರ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಇದರ ಜೊತೆಗೆ, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಸಿದ್ಧವಾಗಿತ್ತು. ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಂಚಾರವನ್ನು ನಿರ್ವಹಿಸಲು ಸಂಚಾರಿ ಪೊಲೀಸರು ಸಹಕಾರ ನೀಡಿದರು. ಒಂದು ವೇಳೆ ವಾಯುದಾಳಿ ಸಂಭವಿಸಿದಲ್ಲಿ ಕೈಗೊಳ್ಳಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳ ಕುರಿತು ಈ ಸಮಗ್ರ ಅಣಕು ಪ್ರದರ್ಶನ ನಡೆಯಿತು.
ಸಾರ್ವಜನಿಕರ ಅಭಿಪ್ರಾಯ
ಅಣಕು ಪ್ರದರ್ಶನದ ಸಂದರ್ಭದಲ್ಲಿ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದು ವೀಕ್ಷಿಸಿದರು. ಅನೇಕರಿಗೆ ಇದು ಮೊದಲ ಅನುಭವವಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಾರ್ವಜನಿಕರು, ಇಂದಿನ ಪೀಳಿಗೆಗೆ ಇಂತಹ ಅಣಕು ಪ್ರದರ್ಶನಗಳು ಹೊಸತು. ಯುದ್ಧದ ಕುರಿತ ಚರ್ಚೆಗಳ ನಡುವೆ ಈ ಮಾಕ್ ಡ್ರಿಲ್ ಅನ್ನು ವೀಕ್ಷಿಸಿದ್ದು ಒಂದು ರೀತಿಯ ಜಾಗೃತಿ ಮೂಡಿಸಿದೆ ಎಂದು ಅಭಿಪ್ರಾಯಪಟ್ಟರು.