
ಸಾಂದರ್ಭಿಕ ಚಿತ್ರ
ಮೊಬೈಲ್ ಗೀಳು: ಶೇ.99 ಸ್ಮಾರ್ಟ್ ಪೋನ್ ಬಳಕೆ ಮಾಡುವವರು ಹದಿಹರೆಯದವರು!
ಯುವ ಪೀಳಿಗೆಗೆ ಓದಿನ ರುಚಿ ಹತ್ತಿಸುವ ಕೆಲಸವಾಗಬೇಕಿದೆ. ಒಂದು ಕುಟುಂಬದಲ್ಲಿ ಪೋಷಕರು ಮತ್ತು ಮಕ್ಕಳು ಒಟ್ಟಿಗೆ ಕುಳಿತಿದ್ದರೆ, ಒಬ್ಬರನ್ನೊಬ್ಬರು ಮಾತನಾಡದ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಶೇ. 93ರಷ್ಟು ಮಕ್ಕಳಿಗೆ ಮನೆಯಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿದ್ದು, 14 ರಿಂದ 16 ವರ್ಷದೊಳಗಿನ ಮಕ್ಕಳಲ್ಲಿ ಬಹುತೇಕ ಶೇ. 90ರಷ್ಟು ಹುಡುಗರು ಮತ್ತು ಹುಡುಗಿಯರು ಮನೆಯಲ್ಲಿ ಸ್ಮಾರ್ಟ್‌ಫೋನ್ ಹೊಂದಿರುವುದಾಗಿ ಶಿಕ್ಷಣ ಸ್ಥಿತಿ ವರದಿ ತಿಳಿಸಿದೆ.
2024 ವಾರ್ಷಿಕ ಶಿಕ್ಷಣ ಸ್ಥಿತಿ ವರದಿ ಪ್ರಕಾರ, ಇವರಲ್ಲಿ ಶೇ. 76ರಷ್ಟು ಮಕ್ಕಳು ಸ್ಮಾರ್ಟ್‌ಫೋನ್ ಬಳಸುವ ಸಾಮರ್ಥ್ಯ ಹೊಂದಿದ್ದಾರೆ. 2021ರ ಹಳೆಯ ವರದಿ ಪ್ರಕಾರ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಶೇ. 71.6ರಷ್ಟು ವಿದ್ಯಾರ್ಥಿಗಳ ಮನೆಗಳಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿತ್ತು.
ಮೊಬೈಲ್ ಗೀಳು
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (KSCPCR) ಅಧ್ಯಯನ ಪ್ರಕಾರ 8ರಿಂದ18 ವರ್ಷದ ಮಕ್ಕಳಲ್ಲಿ ಮೊಬೈಲ್ ಗೀಳು ಆಘಾತಕಾರಿಯಾಗಿದೆ ಎಂದು ವರದಿಯಲ್ಲಿ ತಿಳಿಸಿತ್ತು. 15 ರಿಂದ 18 ವರ್ಷದೊಳಗಿನ ಹುಡುಗರು ಶೇ. 99ರಷ್ಟು ಮತ್ತು ಹುಡುಗಿಯರು ಶೇ. 100ರಷ್ಟು ಮೊಬೈಲ್ ಗೀಳಿಗೆ ಒಳಗಾಗಿದ್ದಾರೆ. ದಾವಣಗೆರೆಯಲ್ಲಿ ಶಾಲಾ ಹದಿಹರೆಯದವರ ಅಧ್ಯಯನದ ಪ್ರಕಾರ ಶೇ. 67.2ರಷ್ಟು ವಿದ್ಯಾರ್ಥಿಗಳಲ್ಲಿ ಮೊಬೈಲ್ ಫೋನ್ ಅವಲಂಬನೆ ಕಂಡುಬಂದಿತ್ತು. ಅಧ್ಯಯನದಲ್ಲಿ ಭಾಗವಹಿಸಿದ್ದ ಶೇ. 81ರಷ್ಟು ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್ ಹೊಂದಿದ್ದು, ದಿನಕ್ಕೆ ಸರಾಸರಿ 101 ನಿಮಿಷಗಳ ಕಾಲ ಮೊಬೈಲ್ ಬಳಸುತ್ತಾರೆ ಎಂದು ತಿಳಿಸಿದೆ.
16ರಿಂದ 30 ವರ್ಷ ವಯಸ್ಸಿನ ಗ್ರಾಮೀಣ ಯುವಕರ ಪೈಕಿ ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಶೇ. 60ರಷ್ಟು ಯುವಕರು ಮೊಬೈಲ್ ಫೋನ್ ಬಳಸುತ್ತಿದ್ದಾರೆ. ಈ ಬಳಕೆದಾರರಲ್ಲಿ ಶೇ. 15.9ರಷ್ಟು ಯುವಕರು ಮೊಬೈಲ್ ಚಟಕ್ಕೆ ಒಳಗಾಗುವ ಅಪಾಯದಲ್ಲಿದ್ದಾರೆ. ಶೇ. 17.4ರಷ್ಟು ಯುವಕರು ಚಟಕ್ಕೆ ಒಳಗಾಗುವ ಗಡಿಯಲ್ಲಿದ್ದಾರೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿತ್ತು.
ಮೊಬೈಲ್‌ನಲ್ಲೇ ಜೀವನ
ಈ ಅಧ್ಯಯನದ ಮಾಹಿತಿಗಳಿಗೆ ಪೂರಕವಾಗಿ ಸಚಿವ ಶಿವರಾಜ್ ತಂಗಡಗಿಯವರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಯುವ ಪೀಳಿಗೆ ಮೊಬೈಲ್ ಗೀಳಿಗೆ ಬಿದ್ದಿದ್ದು,ಅದೇ ಜೀವನವಾಗಿಬಿಟ್ಟಿದೆ. ನಿಜಕ್ಕೂ ಇದು ದುರದೃಷ್ಟಕರ. ಇವರಿಗೆ ಓದಿನ ರುಚಿ ಹತ್ತಿಸುವ ಮೂಲಕ ನಾಡಿನ ಇತಿಹಾಸ ಪುರುಷರ ಬಗ್ಗೆ ತಿಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ಹಾಗೂ ಯುವ ಪೀಳಿಗೆಗೆ ಇತಿಹಾಸದ ವಾಸ್ತವ ಸ್ಥಿತಿಯನ್ನು ತಿಳಿಸುವ ಮೂಲಕ ಓದಿನ ರುಚಿ ಹತ್ತಿಸುವ ಕೆಲಸವಾಗಬೇಕಿದೆ. ಒಂದು ಕುಟುಂಬದಲ್ಲಿ ಪೋಷಕರು ಮತ್ತು ಮಕ್ಕಳು ಒಟ್ಟಿಗೆ ಕುಳಿತಿದ್ದರೆ, ಒಬ್ಬರನ್ನೊಬ್ಬರು ಮಾತನಾಡದ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಚೆನ್ನಮ್ಮ ಹೆಣ್ಣುಮಕ್ಕಳ ಪ್ರತಿನಿಧಿ
ಹೆಣ್ಣೆಂದರೆ ಶಕ್ತಿದೇವತೆ. ಹೆಣ್ಣೊಬ್ಬಳು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬ ಪರಮಸತ್ಯವನ್ನು ಜಗತ್ತಿಗೆ ಸಾರಿದ ಚೆನ್ನಮ್ಮ ನಮ್ಮ ಕನ್ನಡ ಮಣ್ಣಿನ ಮಗಳು. ಅಪಾರ ಶೌರ್ಯ, ಧೈರ್ಯ, ತ್ಯಾಗ, ರಾಜನೀತಿ, ಮಾತೃವಾತ್ಸಲ್ಯ ಮುಂತಾದ ಸದ್ಗುಣಗಳ ಖನಿ. ಇಂದು ಕಿತ್ತೂರು ಸಂಸ್ಥಾನ ಬ್ರಿಟೀಷ್ ಕಲೆಕ್ಟರ್ ಥ್ಯಾಕರೆ ವಿರುದ್ಧ ವಿಜಯೋತ್ಸವ ಸಾಧಿಸಿದ ದಿನವಾಗಿದೆ. ಈ ಐತಿಹಾಸಿಕ ದಿನವನ್ನೇ ಕಿತ್ತೂರ ರಾಣಿ ಜಯಂತಿ ಆಚರಿಸಲು ನಿರ್ಧರಿಸಿ ಸಿಎಂ ಸಿದ್ದರಾಮಯ್ಯ 2017ರಲ್ಲಿ ಹೊರಡಿಸಿದ್ದರು ಎಂದು ತಿಳಿಸಿದರು.
ಇಂತಹ ಉದಾತ್ತ ಚಿಂತನೆಯ ಮೂಲಕ ಸಮಸಮಾಜದ ಸಾಕಾರಕ್ಕೆ ಮುನ್ನುಡಿಯನ್ನು ಬರೆದಿದ್ದ ರಾಣಿ ಚೆನ್ನಮ್ಮನವರಂಥ ವೀರವನಿತೆಯರು ಉದಿಸಿದ ಕನ್ನಡ ನಾಡು ಧನ್ಯ. ನಾವೆಲ್ಲರು ವೀರಮಾತೆಯ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಆ ಮೂಲಕ ನಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳೋಣ ಎಂದು ಸಲಹೆ ನೀಡಿದರು.