
ಕಲಬುರ್ಗಿ ಹತ್ಯೆ ಆರೋಪಿಗಳ ಜಾಮೀನು ಅರ್ಜಿ; ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್
ವಿಚಾರವಾದಿ ಹಾಗೂ ಸಂಶೋಧಕ ಪ್ರೊ. ಎಂ ಎಂ ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಇಬ್ಬರು ಪ್ರಮುಖ ಆರೋಪಿಗಳ ಜಾಮೀನು ಆರ್ಜಿಯನ್ನು ಧಾರವಾಡದ ವಿಚಾರಣಾಧೀನ ನ್ಯಾಯಾಲಯ ಈ ಹಿಂದೆ ತಿರಸ್ಕರಿಸಿತ್ತು. ಇದೀಗ ಈ ಜಾಮೀನು ಅರ್ಜಿಗೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೊಟೀಸ್ ನೀಡಿದೆ.
ಕಲಬುರ್ಗಿ ಅವರ ಹತ್ಯೆ ಪ್ರಕರಣದಲ್ಲಿ ಅರೋಪಿಗಳಾದ ವಾಸುದೇವ್ ಭಗವಾನ್ ಸೂರ್ಯವಂಶಿ ಮತ್ತು ಅಮಿತ್ ಬುದ್ಧಿ ಸಲ್ಲಿಸಿರುವ ಜಾಮೀನು ಅರ್ಜಿಯ ಸಂಬಂಧ ಮೇಲ್ಮನವಿ ಅರ್ಜಿಗೆ ಸಂಬಂಧಿಸಿ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ನೋಟಿಸ್ ಜಾರಿ ಮಾಡಿದೆ. ವಾಸುದೇವ್ ಭಗವಾನ್ ಸೂರ್ಯವಂಶಿ ಅಲಿಯಾಸ್ ವಾಸು ಅಲಿಯಾಸ್ ಮೆಕ್ಯಾನಿಕ್ ನಾಲ್ಕನೇ ಆರೋಪಿಯಾಗಿದ್ದು, ಹಾಗೂ ಅಮಿತ್ ಬುದ್ಧಿ ಅಲಿಯಾಸ್ ಅಮಿತ್ ಅಲಿಯಾಸ್ ಗೋವಿಂದ್ ಆರನೇ ಆರೋಪಿಯಾಗಿದ್ದಾರೆ. ಈ ಇಬ್ಬರು ಆರೋಪಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ಆರಂಭಿಸಿದ್ದು, ಸರ್ಕಾರಕ್ಕೆ ನೊಟೀಸ್ ಜಾರಿಗೊಳಿಸಲಾಗಿದೆ.
ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠವು ಅರ್ಜಿದಾರರ ವಾದ ಆಲಿಸಿ, ತನಿಖಾ ತಂಡಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ. ಈ ಇಬ್ಬರು ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡದ ವಿಚಾರಣಾಧೀನ ನ್ಯಾಯಾಲಯವು 2024ರ ಏಪ್ರಿಲ್ 16ರಂದು ತಿರಸ್ಕರಿಸಿತ್ತು.
ಜಾಮೀನು ಅರ್ಜಿಯಲ್ಲಿ ಏನಿದೆ?
ಎಸ್‌ಐಟಿ ಅಧಿಕಾರಿಗಳು ಎಂ ಎಂ ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ಆಗಸ್ಟ್ 14ರಂದು ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 2021ರ ಸೆಪ್ಟೆಂಬರ್ 7ರಂದು ಆರೋಪಿಗಳ ವಿರುದ್ಧ ಆರೋಪ ಹೊರಿಸಲಾಗಿದೆ. ಮುಂದೆ ಸೆ. 28ರಂದು ಮೊದಲ ವಿಚಾರಣೆ ನಡೆದಿದೆ. ಅಧಿಕೃತವಾಗಿ 2022ರ ಫೆಬ್ರವರಿ 19ರಂದು ವಿಚಾರಣೆ ಆರಂಭವಾಗಿದೆ. ಪ್ರಾಸಿಕ್ಯೂಷನ್ 138 ಸಾಕ್ಷಿಗಳನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದು, ಇದುವರೆಗೆ 9 ಸಾಕ್ಷಿಗಳ ವಿಚಾರಣೆ ಮಾತ್ರ ನಡೆಸಲಾಗಿದೆ. ಇನ್ನೂ 129 ಸಾಕ್ಷಿಗಳ ವಿಚಾರಣೆ ನಡೆಸಬೇಕಿದೆ. ಸೂರ್ಯವಂಶಿಯನ್ನು 2019ರ ಫೆಬ್ರವರಿ 2ರಂದು ಮತ್ತು ಅಮಿತ್‌ನನ್ನು 2018ರ ಸೆಪ್ಟೆಂಬರ್ 15ರಂದು ಬಂಧಿಸಲಾಗಿದೆ ಆದರೆ ಇದುವರೆಗೂ ಇಬರ ವಿರುದ್ಧ ಇದುವರೆಗೂ ಯಾವುದೇ ಸಾಕ್ಷಿಗೆ ಸಮನ್ಸ್ ನೀಡಿಲ್ಲ.ಎಂದು ಜಾಮೀನು ಅರ್ಜಿಯಲ್ಲಿ ವಿವರಿಸಲಾಗಿದೆ.
ಎಂಎಂ ಕಲಬುರ್ಗಿ ಹತ್ಯೆ ನಡೆದಿದ್ದು ಹೇಗೆ? ಯಾಕೆ?
2015ರ ಆಗಸ್ಟ್ 30ರ ಬೆಳಿಗ್ಗೆ ಧಾರವಾಡದ ಎಂಎಂ ಕಲಬುರ್ಗಿ ಅವರ ನಿವಾಸಕ್ಕೆ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು, ಬಾಗಿಲು ತಟ್ಟಿದ್ದಾರೆ. ಆಗ ಬಾಗಿಲು ಕಲಬುರ್ಗಿ ಅವರು ಬಾಗಿಲು ತೆರೆದು ಹೊರ ಬರುತ್ತಿದ್ದಂತೆ ಅವರ ಹಣೆಯ ಭಾಗಕ್ಕೆ ಶೂಟ್ ಮಾಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಲಬುರ್ಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆಗಾಗಲೇ ಪ್ರಾಣಬಿಟ್ಟಿದ್ದರು.
ಈ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಧಾರವಾಡದ ವಿದ್ಯಾಗಿರಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120ಬಿ, 109, 449, 302, 201 ಮತ್ತು 35 ಜೊತೆಗೆ ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್‌ಗಳಾದ 25(1)(ಎ), 25(1)ಬಿ, 27(1) ಅಡಿ ಪ್ರಕರಣ ದಾಖಲಾಗಿದ್ದು, ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.
ಗೌರಿ ಹತ್ಯೆ ಪ್ರಕರಣದಲ್ಲೂ ಸಂಬಂಧ ಹೊಂದಿದ್ದ ಗಣೇಶ್ ವಿಸ್ಕಿನ್ ಮತ್ತು ಅಮಿತ್ ಬುದ್ಧಿ ಅವರುಗಳೇ ಕಲಬುರ್ಗಿ ಅವರ ಹತ್ಯೆ ಮಾಡಿದ್ದಾಗಿ ಪೊಲೀಸರು ದೋಷಾರೋಪ ಪಟ್ಟಿ ಈಗಾಗಲೇ ಸಲ್ಲಿಸಿದ್ದಾರೆ. ತಾವು ಹತ್ಯೆ ಮಾಡಿದ್ದ ಬಗ್ಗೆ ಈ ಇಬ್ಬರೂ ಪೊಲೀಸರ ಬಳಿ ಒಪ್ಪಿಕೊಂಡಿದ್ದಾಗಿಯೂ ಅವರ ಹೇಳಿಕೆಗಳ ಸಮೇತ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಗೌರಿ ಲಂಕೇಶ್ ಕೊಲೆಯ ಮಾಸ್ಟರ್ ಮೈಂಡ್ ಅಮೋಲ್ ಕಾಳೆಯೇ ಈ ಕೊಲೆಯ ಹಿಂದಿನ ಸೂತ್ರಧಾರಿ ಆಗಿದ್ದು. ಗಣೇಶ್ ವಿಸ್ಕಿನ್ ಮತ್ತು ಅಮಿತ್ ಬುದ್ಧಿ ಅವರಿಗೆ ಸೂಕ್ತ ತರಬೇತಿ ನೀಡಿ ಕಲಬುರ್ಗಿ ಅವರ ಕೊಲೆ ಮಾಡಿಸಿದ್ದಾನೆ.
ಒಂದು ಹೇಳಿಕೆಯಿಂದ ಕಲಬುರ್ಗಿಯನ್ನು ಕೊಲ್ಲುವ ನಿರ್ಧಾರ
ಬೆಂಗಳೂರಿನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಎಂಎಂ ಕಲಬುರ್ಗಿ ಅವರು, ಅನಂತಮೂರ್ತಿ ಅವರು ಬರೆದಿದ್ದ 'ನಾಗರ ಕಲ್ಲಿನ ಮೇಲೆ ಮೂತ್ರ ಮಾಡಿದ್ದೆ' ಎಂಬ ವಾಕ್ಯವನ್ನು ಉಲ್ಲೇಖ ಮಾಡಿ. ದೇವರ ನಂಬಿಕೆಯನ್ನು ಪ್ರಶ್ನೆ ಮಾಡಿದ್ದರು. ಇದೇ ಮಾತು ಅವರನ್ನು ಕೊಲ್ಲಲು ಈ ಹಂತಕರಿಗೆ ಕಾರಣವಾಯಿತಂತೆ. ಹೀಗೆಂದು ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾರೆ. ಆ ಕಾರ್ಯಕ್ರಮಕ್ಕೆ ಕಲಬುರ್ಗಿ ಅವರು ಮತ್ತೊಬ್ಬ ವಿಚಾರವಾದಿ ದಾಬೋಲ್ಕರ್ ಅವರ ಸೊಸೆಯೊಂದಿಗೆ ಬಂದಿದ್ದರಂತೆ. ದಾಬೋಲ್ಕರ್ ಅವರನ್ನೂ ಸಹ ಆಗಸ್ಟ್ 2013ರಲ್ಲಿ ಹತ್ಯೆ ಮಾಡಲಾಯಿತು. ಅದರ ಹಿಂದೆಯೂ ಅಮೋಲ್ ಕಾಳೆ ಕೈವಾಡದ ಶಂಕೆ ಇದೆ.
ಬಂದೂಕು ಚಲಾಯಿಸುವ ತರಬೇತಿ ಕೊಟ್ಟಿದ್ದ ಕಾಳೆ
ಅಮೋಲ್ ಕಾಳೆಯು ಧರ್ಮ ರಕ್ಷಣೆ ಕಾರ್ಯಕ್ರಮವೊಂದರಲ್ಲಿ ಗಣೇಶ್ ವಿಸ್ಕಿನ್ ಮತ್ತು ಅಮಿತ್ ಬುದ್ಧಿ ಅವರನ್ನು ಭೇಟಿ ಆಗಿ ಅವರನ್ನು ಕೊಲೆಗೆ ಆಯ್ದುಕೊಂಡನಂತೆ. ನಂತರ ಈ ಇಬ್ಬರಿಗೂ ಬೆಳಗಾವಿ ಸಮೀಪದ ಕಾಡುಗಳಲ್ಲಿ ಬಂದೂಕು ಚಲಾಯಿಸುವುದು, ಬಾಂಬ್ ತಯಾರಿಸುವುದು ಮತ್ತಿತರೆ ವಿಷಯಗಳ ತಾಲೀಮು ನೀಡಿದ್ದಾನೆ.
ಕದ್ದು ಬೈಕ್ ತಂದುಕೊಟ್ಟ ಸೂರ್ಯವಂಶಿ
ನಂತರ ಸೂರ್ಯವಂಶಿ ಎಂಬುವನಿಗೆ ಬೈಕ್ ಒಂದನ್ನು ಕದ್ದು ತರಲು ಹೇಳಿದ್ದಾನೆ ಅಮೋಲ್ ಕಾಳೆ. ಅದರಂತೆ ಹುಬ್ಬಳ್ಳಿಯಲ್ಲಿ ಬೈಕ್ ಒಂದನ್ನು ಕದ್ದು ತಂದ ಸೂರ್ಯವಂಶಿ ಅದನ್ನು ಬೆಳಗಾವಿಯ ಗಣೇಶ್ ವಿಸ್ಕಿನ್ ಫ್ಯಾಕ್ಟರಿ ಬಳಿ ಬಿಟ್ಟುಬರಲು ಹೇಳಿದ್ದಾನೆ. ನಂತರ 2015 ರ ಆಗಸ್ಟ್ 15 ರಿಂದ ಎಂ.ಎಂ.ಕಲಬುರ್ಗಿ ಅವರ ಚಲನವಲನದ ಮೇಲೆ ನಿಗಾ ಇರಿಸಿದ್ದಾರೆ. ಕಲಬುರ್ಗಿ ಅವರನ್ನು ಬಹಳ ವಾರದ ವರೆಗೆ ಹಿಂಬಾಲಿಸಿದ್ದಾರೆ.
ವಿದ್ಯಾರ್ಥಿಗಳ ಸೋಗಿನಲ್ಲಿ ಕಲಬುರ್ಗಿ ಮನೆಗೆ ಬಂದ ಹಂತಕರು
ಅಂತಿಮವಾಗಿ ಆಗಸ್ಟ್ 30 ರಂದು ಗಣೇಶ್ ವಿಸ್ಕಿನ್ ಮತ್ತು ಅಮಿತ್ ಬುದ್ಧಿ ಅವರುಗಳು ಕಲಬುರ್ಗಿ ಅವರ ಮನೆ ಬಳಿ ಹೋಗಿದ್ದಾರೆ ಬಾಗಿಲು ತೆರೆದ ಕಲಬುರ್ಗಿ ಅವರ ಪತ್ನಿಗೆ 'ನಾವು ಎಂಎಂ ಕಲಬುರ್ಗಿ ಅವರ ವಿದ್ಯಾರ್ಥಿಗಳು ಅವರನ್ನು ಕಾಣಲು ಬಂದಿದ್ದೇವೆ' ಎಂದು ಹೇಳಿದ್ದಾರೆ, ಕಲಬುರ್ಗಿ ಅವರು ಬಾಗಿಲ ಬಳಿ ಬರುತ್ತಿದ್ದಂತೆ ಮೊದಲಿಗೆ ಗಣೇಶ್ ವಿಸ್ಕಿನ್ ಗುಂಡು ಹೊಡೆದಿದ್ದಾನೆ. ಆ ನಂತರ ಅಮಿತ್ ಬುದ್ದಿ ಗುಂಡು ಹಾರಿಸಿ ಕಲಬುರ್ಗಿ ಅವರನ್ನು ಕೊಂದು, ಕದ್ದ ಬೈಕಿನಲ್ಲಿ ಅಲ್ಲಿಂದ ಪರಾರಿ ಆಗಿದ್ದಾರೆ. ನಂತರ ಆ ಬೈಕ್ ಅನ್ನು ಬೇರೊಬ್ಬರ ಸಹಾಯದಿಂದ ನಾಶ ಮಾಡಿದ್ದಾರೆ.