
ವಿಧಾನ ಪರಿಷತ್ ಚುನಾವಣೆ| ಕಾಂಗ್ರೆಸ್‌ನಲ್ಲಿ 7 ಸೀಟು, 300 ಮಂದಿ ಲಾಬಿ! ಸಿಎಂ, ಡಿಸಿಎಂ ನಡೆಗೆ ಪರಂ ಬೇಸರ
ಜೂನ್ ತಿಂಗಳಲ್ಲಿ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆ ಟಿಕೆಟ್ ಗೆ ಕಾಂಗ್ರೆಸ್ ಪಕ್ಷದಲ್ಲಿ 300ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಟಿಟಕ್ ನೀಡುವ ಸಂಬಂಧ ಪಕ್ಷದೊಳಗಿನ ಗೊಂದಲ ಈಗ ಹೈಕಮಾಂಡ್ ಅಂಗಳದಲ್ಲಿದೆ. ಒಟ್ಟು 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ನ ತನ್ನ ವಿಧಾನಸಭಾ ಸದಸ್ಯರ ಮತ್ತು ಬೆಂಬಲಿಗರ ಸಂಖ್ಯೆ ಆಧರಿಸಿ ಒಟ್ಟು 7 ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಲು ಕಸರತ್ತು ನಡೆಸುತ್ತಿದೆ.
ಜೂನ್ ತಿಂಗಳಲ್ಲಿ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆ ಟಿಕೆಟ್ ಗೆ ಕಾಂಗ್ರೆಸ್ ಪಕ್ಷದಲ್ಲಿ 300ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಟಿಟಕ್ ನೀಡುವ ಸಂಬಂಧ ಪಕ್ಷದೊಳಗಿನ ಗೊಂದಲ ಈಗ ಹೈಕಮಾಂಡ್ ಅಂಗಳದಲ್ಲಿದೆ. ಒಟ್ಟು 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ನ ತನ್ನ ವಿಧಾನಸಭಾ ಸದಸ್ಯರ ಮತ್ತು ಬೆಂಬಲಿಗರ ಸಂಖ್ಯೆ ಆಧರಿಸಿ ಒಟ್ಟು 7 ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಲು ಕಸರತ್ತು ನಡೆಸುತ್ತಿದೆ.
ಕಾಂಗ್ರೆಸ್‌ನ ಆಕಾಂಕ್ಷಿಗಳ ಪಟ್ಟಿ ೩೦೦ರಷ್ಟು ಬೆಳೆದಿದ್ದು, ಸಹಜವಾಗಿ ವಿವಿಧ ಬಣಗಳಿಂದ ಒತ್ತಡ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತ್ರವಲ್ಲದೆ ಹಿರಿಯ ಸಚಿವರಾದ ಡಾ. ಜಿ. ಪರಮೇಶ್ವರ್ ಮತ್ತಿತರ ನಾಯಕರು ತಮ್ಮದೇ ಅಭ್ಯರ್ಥಿಗಳಿಗಾಗಿ ಒತ್ತಡ ಕಸರತ್ತನ್ನು ಆರಂಭಿಸಿದ್ದಾರೆ
ಜತೆಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಮಾತ್ರ ಟಿಕೆಟ್ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎನ್ನುವ ಬಗ್ಗೆ ಪಕ್ಷದ ಹಿರಿಯ ನಾಯಕರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಗೃಜ ಸಚಿವ ಡಾ.ಜಿ. ಪರಮೇಶ್ವರ ಅವರು ಸಿಎಂ ಮತ್ತು ಡಿಸಿಎಂ ಅವರೇ ಎಲ್ಲವನ್ನೂ ತೀರ್ಮಾನ ಮಾಡಬಾರದು, ಉಳಿದ ಹಿರಿಯ ನಾಯಕರನ್ನೂ ಈ ವಿಚಾರದಲ್ಲಿ ಪರಿಗಣಿಸಬೇಕು ಎಂದು ಹೇಳಿದ್ದಾರೆ. ಹಾಗಾಗಿ ಟಿಕೆಟ್ ಹಂಚಿಕೆಯಲ್ಲಿ ನಾಯಕರ ನಡುವೆ ವೈಮನಸ್ಸು ಈಗಾಗಲೇ ಆರಂಭವಾಗಿದೆ.
ಈ ಬಾರಿಯ ವಿಧಾನ ಪರಿಷತ್ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಬಹಳ ಗಂಭೀರವಾಗಿ ಪರಿಗಣಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಜತೆಯಾಗಿ ಚುನಾವಣೆ ಮಾಡುತ್ತಿದ್ದು, ಹೀಗಾಗಿ ಹಿಂದೆಂದೂ ನೀಡದ ಪ್ರಾಮುಖ್ಯತೆ ನೀಡಲಾಗುತ್ತಿದೆ. ಈಗ ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 29 ಶಾಸಕರಿದ್ದು, ಐದು ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಮೇಲ್ಮನೆಯಲ್ಲಿ ಬಹುಮತ ಪಡೆಯಲು ಇನ್ನು 14 ಸದಸ್ಯರ ಅಗತ್ಯ ಕಾಂಗ್ರೆಸ್‌ಗೆ ಇದೆ. ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರ ಚುನಾವಣೆಯಲ್ಲಿ ಆರು ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಜೂನ್‌ನಲ್ಲಿ ವಿಧಾನಸಭೆಯಿಂದ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಏಳು ಗೆದ್ದರೆ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆ. ಇಲ್ಲದಿದ್ದರೆ ಬಹುಮತ ಪಡೆಯಲು ಇನ್ನೂ 2 ವರ್ಷ ಕಾಯಬೇಕಾಗುತ್ತದೆ. ಹಾಗಾಗಿ ಈ ಚುನಾವಣೆಗಳನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ.
ಕಾಂಗ್ರೆಸ್ ಒಟ್ಟು 135 ಸ್ಥಾನಗಳನ್ನು ಗೆದ್ದಿದ್ದರೂ, ಸುರಪುರ ಶಾಸಕರು ನಿಧನರಾಗಿರುವುದರಿಂದ ಮತ್ತು ಉಪಚುನಾವಣೆ ಫಲಿತಾಂಶ ನಿರೀಕ್ಷೆಯಲ್ಲಿರುವುದರಿಂದ ಸದ್ಯಕ್ಕೆ 134 ಶಾಸಕರಿದ್ದಾರೆ. ಜತೆಗೆ 3 ಪಕ್ಷೇತರ ಶಾಸಕರ ಬೇಷರತ್ ಬೆಂಬಲ ಇರುವುದರಿಂದ ಒಟ್ಟು 137 ಶಾಸಕರಿದ್ದು, ತಲಾ ೨೦ ಮತಗಳಂತೆ ಏಳು ಮಂದಿ ಶಾಸಕರನ್ನು ಗೆಲ್ಲಿಸುವ ಜವಬ್ದಾರಿ ಪಕ್ಷಕ್ಕಿದೆ. ಇನ್ನೂ ಎರಡು ಅಥವಾ ಮೂರು ಮತಗಳು ಬಿಜೆಪಿಯಿಂದ "ಅಡ್ಡ ಮತದಾನʼ ಆಗುವ ನಿರೀಕ್ಷೆ ಇದ್ದು, ಕಾಂಗ್ರೆಸ್‌ನ ಎಲ್ಲಾ ಏಳು ಅಭ್ಯರ್ಥಿಗಳು ಅನಾಯಾಸ ಗೆಲುವು ಸಾಧಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಚರ್ಚೆ ನಡೆಸಿರುವ ರಾಜ್ಯ ಕಾಂಗ್ರೆಸ್ ಅಳೆದೂ ತೂಗಿ ತನ್ನದೇ ಪಟ್ಟಿಯನ್ನು ಸಿದ್ಧಪಡಿಸಿದ್ದರೂ, ಟಿಕೆಟ್ ಹಂಚಿಕೆ ನಿರ್ಧಾರವನ್ನು ಹೈಕಮಾಂಡ್ ಗೆ ಬಿಡಲು ನಿರ್ಧರಿಸಲಾಗಿದೆ. ಪಕ್ಷದ ಮಾಜಿ ಶಾಸಕರು ಮತ್ತು ನಾಯಕರು ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದು, ಈ ಬಾರಿ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೂ ಮಣೆ ನೀಡುವಂತೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಜತೆಗೆ ಕರಾವಳಿ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೇ ಮೈಸೂರು ಭಾಗಗಳಿಂದಲೂ ಪಕ್ಷ ಮುಖಂಡರ ಪ್ರಾತಿನಿಧ್ಯಕ್ಕೆ ಒತ್ತಡ ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಅಂಶಗಳನ್ನು ಪರಿಗಣಿಸಿ ಎಐಸಿಸಿ ಅಧ್ಯಕ್ಷರಾದ ಎಂ. ಮಲ್ಲಿಕಾರ್ಜುನ ಖರ್ಗೆ ಅವರೇ ನಿರ್ಧರಿಸಲಿ ಎಂದು ರಾಜ್ಯ ಕಾಂಗ್ರೆಸ್ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಟಿಕೆಟ್ ಹಂಚಿಕೆ ಚರ್ಚೆಗಾಗಿ ಹೈಕಮಾಂಡ್ ಭೇಟಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಂಗಳವಾರ ದೆಹಲಿಗೆ ಪ್ರಯಾಣಿಸಿದ್ದಾರೆ. "ಪರಿಷತ್ತಿನ 7 ಸ್ಥಾನಗಳಿಗೆ ಪಕ್ಷದಲ್ಲಿ 300ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಎಲ್ಲಾ ವರ್ಗದಲ್ಲೂ ಆಕಾಂಕ್ಷಿಗಳಿದ್ದಾರೆ. ಈ ಬಾರಿ ಎಲ್ಲಾ ವರ್ಗದವರಿಗೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ. ಎಲ್ಲರೂ ಬ್ಲಾಕ್, ಜಿಲ್ಲಾ, ರಾಜ್ಯಮಟ್ಟದಲ್ಲಿ ಪಕ್ಷಕ್ಕೆ ದುಡಿದಿದ್ದಾರೆ. ಕರಾವಳಿ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೇ ಮೈಸೂರು ಭಾಗ ಸೇರಿದಂತೆ ಎಲ್ಲಾ ಕಡೆಯಿಂದ ಅವಕಾಶ ನೀಡಬೇಕು ಎನ್ನುವ ಬೇಡಿಕೆ ಇದೆ. ಕೆಲವು ಸ್ಥಾನಗಳಲ್ಲಿ ಹಾಲಿ ಸದಸ್ಯರು ಇದ್ದಾರೆ. ಹೀಗಾಗಿ ಈ ಬಾರಿ ಕಷ್ಟಕರ ಪರಿಸ್ಥಿತಿ ಎದುರಾಗಿದೆ. ಹೈಕಮಾಂಡ್ ಯಾವ ತೀರ್ಮಾನ ಮಾಡಲಿದೆ ಎಂದು ನೋಡೋಣ," ಎಂದಿದ್ದಾರೆ. ಸಿಎಂ, ಡಿಸಿಎಂ ಅವರೇ ಎಲ್ಲಾ ತೀರ್ಮಾನ ಮಾಡಬಾರದು ಎನ್ನುವ ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಖಂಡಿತ, ನಾವು ಅವರ ಅಭಿಪ್ರಾಯವನ್ನು ಕೇಳುತ್ತೇವೆ ," ಎಂದು ಹಾರಿಕೆ ಉತ್ತರ ನೀಡಿದರು.