ಸಿಎಂ ಪರ ಜಿಟಿಡಿ ವಕಾಲತು | ಮನವೊಲಿಕೆಗೆ ಜೆಡಿಎಸ್ ಶಾಸಕರ ಮನವಿ
ಎಚ್‌ಡಿಕೆ ಟೀಕೆಯಿಂದ ಜಿ. ಟಿ. ದೇವೇಗೌಡ ನೊಂದುಕೊಂಡಿದ್ದು, ತಕ್ಷಣವೇ ಅವರನ್ನು ಕರೆಸಿ ಸಮಾಧಾನಪಡಿಸಬೇಕು ಎಂದು ಜೆಡಿಎಸ್ ಶಾಸಕರು ಹಾಗೂ ಪ್ರಮುಖ ನಾಯಕರು ವರಿಷ್ಠರಾದ ಎಚ್.ಡಿ.ದೇವೇಗೌಡ ಅವರಿಗೆ ಒತ್ತಾಯಿಸಿದ್ದಾರೆ.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿರುವ ಮೈತ್ರಿ ಪಕ್ಷದ (ಜೆಡಿಎಸ್-ಬಿಜೆಪಿ) ನಾಯಕರಿಗೆ ಜೆಡಿಎಸ್ ಕಾರ್ಯಾಧ್ಯಕ್ಷ ಜಿ.ಟಿ.ದೇವೇಗೌಡರು ನೀಡಿರುವ ತಿರುಗೇಟು ಉಭಯ ಪಕ್ಷಗಳಿಗೆ ಮುಜುಗರ ತರಿಸಿದೆ.
ಸಿಎಂ ಪರ ವಕಾಲತು ವಹಿಸಿದ್ದಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕಟು ಶಬ್ದಗಳಲ್ಲಿ ಟೀಕಿಸಿರುವುದರಿಂದ ಜಿ. ಟಿ. ದೇವೇಗೌಡ ನೊಂದುಕೊಂಡಿದ್ದು, ತಕ್ಷಣವೇ ಅವರನ್ನು ಕರೆಸಿ ಸಮಾಧಾನಪಡಿಸಬೇಕು ಎಂದು ಜೆಡಿಎಸ್ ಶಾಸಕರು ಹಾಗೂ ಪ್ರಮುಖ ನಾಯಕರು ವರಿಷ್ಠರಾದ ಎಚ್.ಡಿ.ದೇವೇಗೌಡ ಅವರಿಗೆ ದುಂಬಾಲು ಬಿದ್ದಿದ್ದಾರೆ.
ಸಿಎಂ ಸಿದ್ದರಾಮಯ್ಯ ಪರ ಜಿ.ಟಿ.ದೇವೇಗೌಡರ ಹೇಳಿಕೆಗೆ ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ. ನಮಗೇನೋ ಮಾಡಿಬಿಡುತ್ತಾರೆ ಎಂಬ ಭಯದಿಂದ ಹೇಳಿಕೆ ನೀಡಿರಬಹುದು ಎಂದು ಕಿಡಿಕಾರಿದ್ದರು.
ಕುಮಾರಸ್ವಾಮಿ ಅವರ ಈ ಮಾತುಗಳಿಂದ ಜಿ.ಟಿ. ದೇವೇಗೌಡರು ನೊಂದಿದ್ದಾರೆ. ಅವರನ್ನು ಕರೆಸಿ ಸಮಾಧಾನಪಡಿಸದೇ ಹೋದರೆ ಕಾಂಗ್ರೆಸ್ ನಾಯಕರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಿಟಿಡಿ ಅವರ ಹೇಳಿಕೆಯನ್ನು ಗುರಾಣಿಯನ್ನಾಗಿಸಿ ಬಳಸಿಕೊಳ್ಳುವ ಅಪಾಯವಿದೆ. ಜೊತೆಗೆ ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳಿಗೆ ತಡೆಯಾಗಿ, ಸಮಜಾಯಿಷಿಯಾಗಿ ಅವರ ಈ ಹೇಳಿಕೆಯನ್ನೇ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ಜೆಡಿಎಸ್ ನಾಯಕರು ಆತಂಕ ತೋಡಿಕೊಂಡಿದ್ದಾರೆ.
ಜಿ.ಟಿ.ದೇವೇಗೌಡ ಅವರಿಂದ ಇನ್ನಷ್ಟು ವ್ಯತಿರಿಕ್ತ ಹೇಳಿಕೆಗಳು ಹೊರಬರುವ ಮುನ್ನವೇ ಅವರೊಂದಿಗೆ ಮಾತುಕತೆ ನಡೆಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.