ಘಟಿಕೋತ್ಸವ ಕಾರ್ಯಕ್ರಮದಲ್ಲಿ ನೂತನ ಶಾಸಕ ಯಾಸೀರ್ ಖಾನ್ ಪಠಾಣ ಗಲಾಟೆ?
x
ಶಾಸಕ ಯಾಸೀರ್ ಖಾನ್ ಪಠಾಣ ತಮ್ಮ ಬೆಂಬಲಿಗರೊಂದಿಗೆ

ಘಟಿಕೋತ್ಸವ ಕಾರ್ಯಕ್ರಮದಲ್ಲಿ ನೂತನ ಶಾಸಕ ಯಾಸೀರ್ ಖಾನ್ ಪಠಾಣ ಗಲಾಟೆ?

ಹಾವೇರಿಯ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ನೂತನ ಶಾಸಕ ಯಾಸೀರ್ ಖಾನ್ ಪಠಾಣ ತಮ್ಮ ಬೆಂಬಲಿಗರೊಂದಿಗೆ ವಿವಿ ಸಿಬ್ಬಂದಿಯ ಕೊಠಡಿಗೆ ತರೆಳಿ ದಾಂಧಲೆ ನಡೆಸಿರುವ ಘಟನೆ ನಡೆದಿದೆ.


ಹಾವೇರಿಯ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮಕ್ಕೆ ತಮಗೆ ಆಹ್ವಾನ ನೀಡಿಲ್ಲ ಎಂದು ಶಿಗ್ಗಾವಿಯ ನೂತನ ಶಾಸಕ ಯಾಸೀರ್ ಖಾನ್ ಪಠಾಣ ಅವರು ತಮ್ಮ ಬೆಂಬಲಿಗರೊಂದಿಗೆ ವಿವಿ ಸಿಬ್ಬಂದಿಯ ಕೊಠಡಿಗೆ ತರೆಳಿ ದಾಂಧಲೆ ನಡೆಸಿರುವ ಘಟನೆ ನಡೆದಿದೆ.

ಜಾನಪದ ವಿವಿ ಆವರಣದಲ್ಲಿ ವಿವಿ ನಿಯಮಾವಳಿ ಪ್ರಕಾರ ಘಟಿಕೋತ್ಸವ ಆಯೋಜಿಸಲಾಗಿತ್ತು. ಬೆಳಿಗ್ಗೆ, ಜಾನಪದ ಶೈಲಿಯಲ್ಲಿ ಮೆರವಣಿಗೆ ಆರಂಭವಾಯಿತು. ಮೆರವಣಿಗೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಪಾಲ್ಗೊಂಡಿದ್ದರು. ಸ್ಥಳಕ್ಕೆ ಶಾಸಕ ಯಾಸೀ‌ರ್ ಖಾನ್ ಪಠಾಣ ಆಗಮಿಸಿ ಸಚಿವರನ್ನು ಭೇಟಿಯಾದರು. ನಂತರ ನಿಗದಿಯಂತೆ ವೇದಿಕೆ ಕಾರ್ಯಕ್ರಮ ಆರಂಭವಾಯಿತು.

ಆದರೆ ಘಟಿಕೋತ್ಸವ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿಲ್ಲ, ನಾನೂ ಬಂದರೂ ಯಾರೂ ಬಂದು ನನ್ನನ್ನು ಸ್ವಾಗತಿಸಲಿಲ್ಲ ಎಂದು ಕುಲಪತಿ ಕಚೇರಿಗೆ ಪಠಾಣ್‌ ಹಾಗೂ ಬೆಂಬಲಿಗರು ನುಗ್ಗಿ, ಕಚೇರಿಯಲ್ಲಿದ್ದ ಸಹಾಯಕ ಪ್ರಾಧ್ಯಾಪಕ ಚಂದ್ರಪ್ಪ ಅವರ ಜೊತೆ ಜಗಳ ತೆಗೆದಿದ್ದಾರೆ. ವಿವಿ ವಿರುದ್ಧ ಘೋಷಣೆ ಕೂಗಿದರು.

'ನಾನು ಸದ್ಯದಲ್ಲೇ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಆ ಮೇಲೆ ನಾನು ವಾಪಸು ಬಂದು ನಿಮ್ಮನ್ನು ನೋಡಿಕೊಳ್ಳುತ್ತೇನೆ. ವಿವಿಯ ನೇಮಕಾತಿಯಲ್ಲಿ ಅಕ್ರಮ ಆಗಿದೆ. ಎಲ್ಲವೂ ನನಗೆ ಗೊತ್ತಿದೆ. ಇಲ್ಲಿ ನೀವು ಹೇಗೆ ಬದುಕುತ್ತೀರಾ ನೋಡುತ್ತೇನೆ' ಎಂದು ಪಠಾಣ, ಪ್ರಾಧ್ಯಾಪಕರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಗಲಾಟೆಯಿಂದಾಗಿ ವಿವಿ ಕುಲಪತಿ ಕಚೇರಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿತ್ತು. ಪೊಲೀಸರು ಮದ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ, ಪಠಾಣ ಅವರು ತಮ್ಮ ಬೆಂಬಲಿಗರ ಸಮೇತ ಸ್ಥಳದಿಂದ ಹೊರಟು ಹೋದರು.

ಘಟನೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪಠಾಣ, 'ಸಚಿವರು ಕರೆದಿದ್ದಕ್ಕೆ ವಿವಿಗೆ ಬಂದೆ. ಇಲ್ಲಿ ನನ್ನನ್ನು ಯಾರೂ ಸ್ವಾಗತಿಸಲಿಲ್ಲ. ಇದರಿಂದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲವೆಂದು ಬೇಸರಗೊಂಡು ಘೋಷಣೆ ಕೂಗಿದರು' ಎಂದು ತಿಳಿಸಿದ್ದಾರೆ.

Read More
Next Story