ಸೋಮಣ್ಣ ನಿಂದನೆ ಪ್ರಕರಣ | ಶಾಸಕ ಎಸ್.ಆರ್ ಶ್ರೀನಿವಾಸ್ ವಿರುದ್ಧ ಎಫ್ಐಆರ್
x
ವಿ. ಸೋಮಣ್ಣ - ಎಸ್.ಆರ್ ಶ್ರೀನಿವಾಸ್

ಸೋಮಣ್ಣ ನಿಂದನೆ ಪ್ರಕರಣ | ಶಾಸಕ ಎಸ್.ಆರ್ ಶ್ರೀನಿವಾಸ್ ವಿರುದ್ಧ ಎಫ್ಐಆರ್

ತುಮಕೂರಿನ ಹೆಗ್ಗೆರೆಯಲ್ಲಿರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಿತಿ ಚುನಾವಣೆ ಪ್ರಚಾರ ಸಭೆಯಲ್ಲಿ ವಿ. ಸೋಮಣ್ಣ ಅವರ ವಿರುದ್ಧ ತುಚ್ಛ ಪದ ಬಳಸಿರುವ ಆರೋಪ ಕೇಳಿಬಂದಿತ್ತು. ಇದೀಗ ಎಫ್ಐಆರ್ ದಾಖಲಾಗಿದೆ.


ತುಮಕೂರಿನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ವಿರುದ್ಧ ಅವಹೇಳನಕಾರಿ ಟೀಕೆ ಮಾಡಿದ ಆರೋಪದ ಮೇಲೆ ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್ ಶ್ರೀನಿವಾಸ್‌ ವಿರುದ್ಧ ಎಫ್‌ ಐಆರ್‌ ದಾಖಲಾಗಿದೆ.

“ವಿ. ಸೋಮಣ್ಣ ಬೆಂಗಳೂರಿನ ಕೊಚ್ಚೆ ನೀರು” ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ಹೇಳಿರುವುದು ವರದಿಯಾಗಿತ್ತು. ಆ ಅವಹೇಳನಕಾರಿ ಹೇಳಿಕೆ ಆರೋಪದ ಮೇಲೆ ತುಮಕೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತುಮಕೂರಿನ ಹೆಗ್ಗೆರೆಯಲ್ಲಿರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಚುನಾವಣೆ ಪ್ರಚಾರ ಸಭೆಯಲ್ಲಿ ವಿ. ಸೋಮಣ್ಣ ಅವರ ವಿರುದ್ಧ ಶ್ರೀನಿವಾಸ್‌ ತುಚ್ಛ ಪದ ಬಳಸಿರುವ ಆರೋಪ ಕೇಳಿಬಂದಿತ್ತು.

ದೂರು ಸಲ್ಲಿಕೆ

ಈ ಹೇಳಿಕೆಯ ಕುರಿತು ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿರೊಬ್ಬರು ದೂರು ನೀಡುವ ಮೂಲಕ ಈ ಪ್ರಕರಣ ಬೆಳಕಿಗೆ ಬಂದಿದೆ. ಚುನಾವಣಾ ಕರ್ತವ್ಯದಲ್ಲಿದ್ದ ತುಮಕೂರಿನ ಎಂಪ್ರೆಸ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಫ್ಲೈಯಿಂಗ್ ಸ್ಕ್ವಾಡ್ ಶಿವಪ್ಪ ಎಂಬವರು ದೂರು ಸಲ್ಲಿಸಿದ್ದರು. ಅಲ್ಲದೇ ಭಾಷಣದ ತುಣುಕನ್ನು ಸಹ ಉಲ್ಲೇಖ ಮಾಡಿದ್ದರು.

ಎಫ್ಐಆರ್‌ನಲ್ಲಿರುವ ಅಂಶ

ಎಫ್ಐಆರ್‌ನಲ್ಲಿ ವಿ. ಸೋಮಣ್ಣ ಅವರನ್ನು ಶಾಸಕ ಎಸ್.ಆರ್ ಶ್ರೀನಿವಾಸ್ ಅವಹೇಳನಕಾರಿ ಪದ ಬಳಸಿ ಮಾತನಾಡಿರುವುದು ಹಾಗೂ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಉಲ್ಲೇಖಿಸಲಾಗಿದೆ. ತುಮಕೂರಿನ ಹೆಗ್ಗೆರೆಯ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಸಮಿತಿಯ ವತಿಯಿಂದ ಚುನಾವಣಾ ಪ್ರಚಾರ ಸಭೆಯನ್ನು ಆಯೋಜಿಸಲಾಗಿತ್ತು. ಸಭೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಅವರು ವಿ. ಸೋಮಣ್ಣ ಅವರ ವಿರುದ್ಧ ತುಚ್ಛ ಮಾತು ಬಳಸಿದ್ದಾರೆ. “ವಿ. ಸೋಮಣ್ಣ ಬೆಂಗಳೂರಿನ ಕೊಳಚೆ ನೀರು, ತುಮಕೂರಿನ ಜನ ಸ್ವಾಭಿಮಾನಿಗಳು ಹಾಗೂ ಪ್ರಜ್ಞಾವಂತರು. ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಯಲ್ಲಿ ವಿ. ಸೋಮಣ್ಣ ಅವರನ್ನು ಗೆಲ್ಲಿಸಬೇಡಿ" ಎಂದು ಭಾಷಣ ಮಾಡಿದ್ದಾರೆ ಎಂದು ಎಫ್ಐಆರ್‌ನಲ್ಲಿ ವಿವರಿಸಲಾಗಿದೆ.

ಅಲ್ಲದೇ ಶಾಸಕ ಎಸ್.ಆರ್ ಶ್ರೀನಿವಾಸ್ ಅವರು ಭಾಷಣದಲ್ಲಿ ಬಳಸಿರುವ ಪದಗಳು ಮಾದರಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಹೀಗಾಗಿ ಶಾಸಕ ಶ್ರೀನಿವಾಸ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಿವಪ್ಪ ಒತ್ತಾಯಿಸಿದ್ದಾರೆ.

ಎರಡನೇ ಎಫ್ಐಆರ್

ಇನ್ನು ಗುಬ್ಬಿ ಶಾಸಕ ಎಸ್. ಆರ್ ಶ್ರೀನಿವಾಸ್ ಅವರ ವಿರುದ್ಧ ದಾಖಲಾಗಿರುವ ಎರಡನೇ ಎಫ್ಐಆರ್ ಇದಾಗಿದೆ. ಇತ್ತೀಚೆಗೆ ಪ್ರಥಮದರ್ಜೆ ಗುತ್ತಿಗೆದಾರ ಹಾಗೂ ಕಾಂಗ್ರೆಸ್ ಕಾರ್ಯಕರ್ತ ರಾಯಸಂದ್ರ ರವಿಕುಮಾರ್ ಅವರ ಮೇಲೆ ಹಲ್ಲೆ ಮಾಡಿದ ಆರೋಪ ಮೇಲೆ ಶಾಸಕ ಎಸ್ ಆರ್ ಶ್ರೀನಿವಾಸ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದೀಗ ವಿ.ಸೋಮಣ್ಣ ಅವರ ವಿರುದ್ಧ ಅವಹೇಳನಕಾರಿ ಪದ ಬಳಸಿದ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ.

Read More
Next Story