ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ | ಶಾಸಕ ಸತೀಶ್ ಸೈಲ್ ದೋಷಿ; ಇಂದು ಶಿಕ್ಷೆ ಪ್ರಕಟಿಸಲಿರುವ ವಿಶೇಷ ಕೋರ್ಟ್
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರ ತೀರ್ಪಿನ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಶಾಸಕ ಸತೀಶ್ ಸೈಲ್ ಸೇರಿದಂತೆ ಏಳು ಮಂದಿ ಅಪರಾಧಿಗಳನ್ನು ಬಂಧಿಸಿ, ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದೆ.
ಉಪ ಚುನಾವಣೆಯ ಹೊತ್ತಿನಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಾಕ್ ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ–ಅಂಕೋಲಾ ಶಾಸಕ ಸತೀಶ್ ಸೈಲ್ ಸೇರಿದಂತೆ ಏಳು ಮಂದಿಯನ್ನು ಅಪರಾಧಿಗಳು ಎಂದು ತೀರ್ಪು ನೀಡಿದ್ದು, ಶುಕ್ರವಾರ (ಅ.25) ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರ ತೀರ್ಪಿನ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಶಾಸಕ ಸತೀಶ್ ಸೈಲ್ ಸೇರಿದಂತೆ ಏಳು ಮಂದಿ ಅಪರಾಧಿಗಳನ್ನು ಬಂಧಿಸಿ, ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದೆ.
ಅಕ್ರಮ ಗಣಿಗಾರಿಕೆ ಮೂಲಕ ವಿದೇಶಕ್ಕೆ ಸಾಗಿಸಲು ಬೇಲೆಕೇರಿ ಬಂದರಿನಲ್ಲಿ 11,312 ಮೆಟ್ರಿಕ್ ಟನ್ ಅದಿರನ್ನು ಸಂಗ್ರಹಿಸಲಾಗಿತ್ತು. ಅದಿರನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಆದರೆ, ಶಾಸಕ ಸತೀಶ್ ಸೈಲ್ ಸೇರಿದಂತೆ ಇತರೆ ದೋಷಿಗಳು ಶಾಮೀಲಾಗಿ ಅದಿರನ್ನು ವಿದೇಶಕ್ಕೆ ಸಾಗಿಸಿ ಮಾರಾಟ ಮಾಡಿದ್ದರು.
ತೀರ್ಪಿನ ಬಳಿಕ ಶಾಸಕ ಸತೀಶ್ ಸೈಲ್ ಸೇರಿದಂತೆ ಬಂದರು ಅಧಿಕಾರಿ ಮಹೇಶ್ ಬಿಳಿಯ, ಲಾಲ್ ಮಹಲ್ ಕಂಪನಿಯ ಮಾಲೀಕ ಪ್ರೇಮ್ ಚಂದ್ ಗರ್ಗ್, ಶ್ರೀಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಮಾಲೀಕ ಖಾರದಪುಡಿ ಮಹೇಶ್, ಸ್ವಸ್ತಿಕ್ ಕಂಪನಿ ಮಾಲೀಕ ಕೆ.ವಿ.ನಾಗರಾಜ್, ಗೋವಿಂದರಾಜು, ಆಶಾಪುರ ಕಂಪನಿ ಮಾಲೀಕ ಚೇತನ್ ಎಂಬುವರನ್ನು ಸಿಬಿಐ ಬಂಧಿಸಿದೆ.
ಶುಕ್ರವಾರ 12.30ಕ್ಕೆ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದ್ದು, ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗುವುದು. ಶಿಕ್ಷೆಯ ಪ್ರಮಾಣ ಆಧರಿಸಿ ಶಾಸಕ ಸತೀಶ್ ಸೈಲ್ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ ಎನ್ನಲಾಗಿದೆ.
ಅಕ್ರಮ ಗಣಿಗಾರಿಕೆ ಮೂಲಕ ವಿದೇಶಕ್ಕೆ ಸಾಗಿಸಲು ಕಾರವಾರದ ಬೇಲೆಕೇರಿ ಬಂದರಿಯಲ್ಲಿ 11,312 ಮೆಟ್ರಿಕ್ ಟನ್ ಅದಿರನ್ನು ಸಂಗ್ರಹಿಸಲಾಗಿತ್ತು. ಇದನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಆದರೆ, ಮಲ್ಲಿಕಾರ್ಜುನ ಶಿಪ್ಪಿಂಗ್ ಕಾರ್ಪೊರೇಷನ್ ಒಡೆತನ ಹೊಂದಿರುವ ಶಾಸಕ ಸತೀಶ್ ಸೈಲ್ ಅವರು ಅದಿರನ್ನು ಯಾರ ಅನುಮತಿಯೂ ಇಲ್ಲದೇ ವಿದೇಶಕ್ಕೆ ಸಾಗಾಟ ಮಾಡುತ್ತಿದ್ದರು. ಈ ಸಂಬಂಧ ಆರು ಪ್ರತ್ಯೇಕ ಪ್ರಕರಣ ದಾಖಲಿಸಿ, ಆರೋಪಿಗಳ ವಿರುದ್ದ ಅಪರಾಧಿಕ ಒಳಸಂಚು, ವಂಚನೆ, ನಕಲಿ ದಾಖಲೆ ಸೃಷ್ಟಿ ಆರೋಪ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಆರೋಪ ಹೊರಿಸಲಾಗಿತ್ತು.
ನ್ಯಾ.ಸಂತೋಷ್ ಗಜಾನನ ಭಟ್ ಅವರು ಪ್ರಕರಣದ ವಾದ-ಪ್ರತಿವಾದ ಆಲಿಸಿ, ಶಾಸಕ ಸತೀಶ್ ಸೈಲ್ ಅಪರಾಧಿ ಎಂದು ಆದೇಶ ನೀಡಿದ್ದಾರೆ.
2010ರಲ್ಲಿ ಬಳ್ಳಾರಿಯಿಂದ ಕಬ್ಬಿಣದ ಅದಿರು ಸಾಗಾಟ ಮಾಡಿ ಬೇಲೆಕೇರಿ ಬಂದರು ಮೂಲಕ ವಿದೇಶಕ್ಕೆ ರಫ್ತು ಮಾಡಲಾಗುತ್ತಿತ್ತು. ಅಂದಿನ ಲೋಕಾಯುಕ್ತ ನ್ಯಾ.ಎನ್.ಸಂತೋಶ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಹಗರಣವನ್ನು ಬೆಳಕಿಗೆ ತಂದಿದ್ದರು. 2006-07 ಮತ್ತು 2010-11ರ ನಡುವೆ 7.74 ಮಿಲಿಯನ್ ಟನ್ ಕಬ್ಬಿಣದ ಅದಿರು ವಿದೇಶಕ್ಕೆ ರಫ್ತಾಗಿತ್ತು. ಇದರಿಂದ ಸರ್ಕಾರದ ಖಜಾನೆಗೆ ಭಾರಿ ನಷ್ಟ ಉಂಟಾಗಿದೆ ಎಂದು ವರದಿ ನೀಡಿದ್ದರು. ಇದೇ ವೇಳೆ ಲೋಕಾಯುಕ್ತ ಎಸ್‌ಐಟಿ ಮತ್ತು ಸಿಬಿಐ ಅಧಿಕಾರಿಗಳು ಪ್ರತ್ಯೇಕ ತನಿಖೆ ನಡೆಸಿದ್ದರು.
2013ರ ಸೆಪ್ಟೆಂಬರ್ ತಿಂಗಳಲ್ಲಿ ಸಿಬಿಐ ಸತೀಶ್ ಸೈಲ್ ಅವರನ್ನು ಬಂಧಿಸಿತ್ತು. ನಂತರ ಅವರು ಜಾಮೀನಿನ ಮೇಲೆ ಹೊರಬಂದಿದ್ದರು.