Munirathna Case | ಮುನಿರತ್ನ ಹನಿಟ್ರ್ಯಾಪ್‌ ಪ್ರಕರಣ: ಇನ್ಸ್‌ಪೆಕ್ಟರ್ ನ್ಯಾಯಾಂಗ ಬಂಧನ
x
ಬಿಜೆಪಿ ಶಾಸಕ ಮುನಿರತ್ನ

Munirathna Case | ಮುನಿರತ್ನ ಹನಿಟ್ರ್ಯಾಪ್‌ ಪ್ರಕರಣ: ಇನ್ಸ್‌ಪೆಕ್ಟರ್ ನ್ಯಾಯಾಂಗ ಬಂಧನ

ಗುರುವಾರ ಐಯಣ್ಣ ರೆಡ್ಡಿ ಅವರನ್ನು ವಶಕ್ಕೆ ಪಡೆದ ಎಸ್‌ಐಟಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ


Click the Play button to hear this message in audio format

ರಾಜರಾಜೇಶ್ವರಿನಗರ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಹನಿಟ್ರ್ಯಾಪ್‌ ಪ್ರಕರಣದಲ್ಲಿ ಒಳಸಂಚು ರೂಪಿಸಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ಹೆಬ್ಬಗೋಡಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಐಯಣ್ಣ ರೆಡ್ಡಿ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ವಹಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.

ಗುರುವಾರ ರಾತ್ರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಐಯಣ್ಣ ರೆಡ್ಡಿ ಅವರನ್ನು ವಶಕ್ಕೆ ಪಡೆದ ಎಸ್‌ಐಟಿ ತನಿಖಾಧಿಕಾರಿಗಳು, ವಿಚಾರಣೆ ಬಳಿಕ ಬಂಧನಕ್ಕೊಳಪಡಿಸಿದ್ದರು. ಶುಕ್ರವಾರ ವಿಶೇಷ ನ್ಯಾಯಾಧೀಶರಾದ ಕೆ ಎನ್‌ ಶಿವಕುಮಾರ್‌ ಅವರ ಮುಂದೆ ಹಾಜರುಪಡಿಸಿದರು. ಘಟನೆಯ ಮಾಹಿತಿ ಪಡೆದ ನ್ಯಾಯಾಧೀಶರು ಅವರು ನ್ಯಾಯಾಂಗ ಬಂಧನಕ್ಕೆ ನೀಡಿದರು.

ಮುನಿರತ್ನ ಅವರ ದಂಧೆಗಳ ಬಗ್ಗೆ ಮಾಹಿತಿ ಇದ್ದರೂ ಐಯ್ಯಣ್ಣ ರೆಡ್ಡಿ ಕ್ರಮಕೈಗೊಂಡಿರಲಿಲ್ಲ. ಮುನಿರತ್ನ ವಿರುದ್ಧ ಮಾತನಾಡಿದರೆ ಅವರನ್ನು ಠಾಣೆಗೆ ಕರೆಯಿಸಿ ಬೆದರಿಕೆ ಹಾಕುವುದು, ಹನಿಟ್ರ್ಯಾಪ್‌ ತಂಡ ಗುರಿ ಇಡುತ್ತಿದ್ದ ವ್ಯಕ್ತಿಯ ಮಾಹಿತಿಯನ್ನು ರೆಡ್ಡಿ ತಮ್ಮ ಅಧಿಕಾರ ಬಳಸಿ ಸಂಗ್ರಹಿಸಿ ಅವರಿಗೆ ನೆರವಾಗುತ್ತಿದ್ದರು ಎಂದು ಆರೋಪಿಸಲಾಗಿದೆ.

ಅತ್ಯಾಚಾರ ಸಂತ್ರಸ್ತೆ ಹಾಗೂ ಮಾಜಿ ಕಾರ್ಪೊರೇಟರ್‌ ಅವರ ಹೇಳಿಕೆ ಆಧರಿಸಿ ವಿಶೇಷ ತನಿಖಾ ದಳವು ಐಯ್ಯಣ್ಣ ರೆಡ್ಡಿಯನ್ನು ಬಂಧಿಸಿದೆ. ಅಲ್ಲದೇ ಆರೋಪಿಗಳು ಕೆಲವು ರಾಜಕಾರಣಿಗಳಿಗೆ ಏಡ್ಸ್‌ ಚುಚ್ಚುಮದ್ದು ಪ್ರಯೋಗಿಸಲು ಸಂಚು ರೂಪಿಸಿದ್ದು ಗೊತ್ತಿದ್ದರೂ ಇನ್ಸ್‌ಪೆಕ್ಟರ್ ಮಾಹಿತಿ ಬಚ್ಚಿಟ್ಟಿದ್ದಾರೆ. ರಾಜಕಾರಣಿಗಳಿಗೆ ಏಡ್ಸ್‌ ಚುಚ್ಚುಮದ್ದು ಪ್ರಯೋಗಿಸಲು ಯುವಕನೊಬ್ಬನ ಮನವೊಲಿಸಲು ಆರೋಪಿಗಳು ಯತ್ನ ನಡೆಸಿದ್ದರು ಎಂಬ ಆರೋಪ ಕೂಡ ಇದೆ.

ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ, ಬಿಬಿಎಂಪಿ ಗುತ್ತಿಗೆದಾರರೊಬ್ಬರಿಗೆ ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದ ಪ್ರಕರಣದ ತನಿಖೆಗೆ ಸರ್ಕಾರವು ಎಸ್‌ಐಟಿ ವಹಿಸಿತ್ತು. ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವ ದೂರುದಾರರು, ತಮ್ಮ ವಿರೋಧಿಗಳನ್ನು ಹನಿ ಟ್ರ್ಯಾಪ್ ಮಾಡಲು ಶಾಸಕ ಎಚ್‌ಐವಿ ಸೋಂಕಿತ ಮಹಿಳೆಯನ್ನು ಬಳಸುತ್ತಿದ್ದರು ಎಂದು ಆರೋಪಿಸಿದ್ದರು.

ಶಾಸಕ ಮುನಿರತ್ನ ಅವರ ಆಪ್ತ ವಲಯದಲ್ಲಿ ಇನ್‌ಸ್ಪೆಕ್ಟರ್‌ ಅಯ್ಯಣ್ಣ ಗುರುತಿಸಿಕೊಂಡಿದ್ದರು. ಹೀಗಾಗಿಯೇ ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿ, ರಾಜಗೋಪಾಲ ನಗರ ಹಾಗೂ ಪೀಣ್ಯ ಠಾಣೆಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದರು. ಅಲ್ಲದೆ ಮುನಿರತ್ನ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕೋಲಾರ ಗ್ರಾಮಾಂತರ ವೃತ್ತ ಪಿಐ ಆಗಿ ಅಯ್ಯಣ್ಣ ಕೆಲಸ ಮಾಡಿದ್ದರು. ಹಾಗೆಯೇ ಮುನಿರತ್ನ ಶಿಫಾರಸಿನ ಮೇರೆಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು, ಪ್ರಸುತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಬ್ಬಗೋಡಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

Read More
Next Story