ಎಂಎಸ್‌ಪಿ ದರ | ಬೆಂಬಲ ಬೆಲೆ ಕಾನೂನು ಜಾರಿಗೆ ಆಗ್ರಹಿಸಿ ಶಾಸಕ ಬಿ.ಆರ್‌. ಪಾಟೀಲ್‌ ಏಕಾಂಗಿ ಪ್ರತಿಭಟನೆ
x
ಬೆಂಗಳೂರಿನ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಶಾಸಕ ಬಿ.ಆರ್‌. ಪಾಟೀಲ್‌ ಪ್ರತಿಭಟನೆ

ಎಂಎಸ್‌ಪಿ ದರ | ಬೆಂಬಲ ಬೆಲೆ ಕಾನೂನು ಜಾರಿಗೆ ಆಗ್ರಹಿಸಿ ಶಾಸಕ ಬಿ.ಆರ್‌. ಪಾಟೀಲ್‌ ಏಕಾಂಗಿ ಪ್ರತಿಭಟನೆ

ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಏಕಾಂಗಿ ಪ್ರತಿಭಟನೆ ನಡೆಸಿದ ಶಾಸಕ ಬಿ.ಆರ್‌. ಪಾಟೀಲ್‌ ಅವರು, ರೈತ ಹೋರಾಟಗಾರ ಜಗತ್ ಸಿಂಗ್ ದಲೈವಾಲ ಅವರನ್ನು ಉಳಿಸಿ, ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.


ಡಾ.ಎಂ.ಎಸ್.ಸ್ವಾಮಿನಾಥ್ ವರದಿಯಂತೆ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಗೆ ಪ್ರತ್ಯೇಕ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ಬೆಂಗಳೂರಿನಲ್ಲಿ ಶನಿವಾರ ಏಕಾಂಗಿಯಾಗಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಅವರು, ರೈತ ಹೋರಾಟಗಾರ ಜಗತ್ ಸಿಂಗ್ ದಲೈವಾಲ ಅವರನ್ನು ಉಳಿಸಿ, ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಪ್ರೊ. ಎಂ.ಎಸ್. ಸ್ವಾಮಿನಾಥನ್ ವರದಿಯಂತೆ ರೈತರ ಬೆಳೆಗಳ ಉತ್ಪಾದನಾ ವೆಚ್ಚಕ್ಕೆ ಹೆಚ್ಚುವರಿಯಾಗಿ ಶೇ.50ರಷ್ಟು ಮೊತ್ತ ಸೇರಿಸಿ ಬೆಲೆ ನಿಗದಿ ಮಾಡಬೇಕು. ಆಹಾರ ಭದ್ರತೆ ದೃಷ್ಟಿಯಿಂದ ಕೃಷಿ ಭೂಮಿ ಪರಿವರ್ತನೆಗೆ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿದರು.

ದೆಹಲಿಯ ಕನೂರಿ ಗಡಿಯಲ್ಲಿ ರೈತ ನಾಯಕ ಜಗತ್ ಸಿಂಗ್ ದಲೈವಾಲ ಅವರು 2024 ನವೆಂಬರ್ 26 ರಿಂದ ಸಾವಿರಾರು ರೈತರೊಂದಿಗೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ಆರೋಗ್ಯದ ಸ್ಥಿತಿ ಹದಗೆಟ್ಟಿದೆ. ಸುಪ್ರೀಂಕೋರ್ಟ್ ಆದೇಶದ ಬಳಿಕ ಅವರನ್ನು ಖನೌರಿ ಗಡಿ ಆಸ್ಪ್ರತ್ರೆಗೆ ದಾಖಲಿಸಲಾಗಿದೆ. ದಲೈವಾಲ ಅವರನ್ನು ಉಳಿಸಿ, ದೇಶದ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂದು ಶಾಸಕ ಬಿ.ಆರ್. ಪಾಟೀಲ ಒತ್ತಾಯಿಸಿದರು.

ಎಂ ಎಸ್ ಪಿ ಶಾಸನಬದ್ಧಗೊಳಿಸಲು ಒತ್ತಾಯಿಸಿ ಒಂದು ದಿನದ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ, ರೈತ ಹೋರಾಟಗಾರ ವೀರಸಂಗಯ್ಯ ಇನ್ನಿತರರು ಪಾಲ್ಗೊಂಡಿದ್ದರು.

ಒಂದೂವರೆ ದಶಕದಿಂದ ಈಡೇರದ ಬೇಡಿಕೆ

ರೈತರ ಬೆಳೆಗಳಿಗೆ ಎಂಎಸ್ಪಿ ದರ ನಿಗದಿ ಮಾಡುವಂತೆ ಕಳೆದ ಒಂದೂವರೆ ದಶಕದಿಂದ ರೈತರ ಹೋರಾಟ ನಡೆಯುತ್ತಿದೆ. ಮೂರು ಲೋಕಸಭೆ ಚುನಾವಣೆ ಅವಧಿಯಲ್ಲಿ ರಾಜಕೀಯ ಪಕ್ಷಗಳು ಎಂಎಸ್ಪಿ ದರ ಜಾರಿ ಕುರಿತು ಕೇವಲ ಆಶ್ವಾಸನೆ ನೀಡಿವೆ. ಕಳೆದ ಚುನಾವಣೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸುವ ಭರವಸೆ ನೀಡಿದ್ದರು. ಈ ಹಿಂದೆ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಲೂ ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯಿಸಿದ್ದರು. ಆದರೆ, ಈಗ ಅವರೇ ಪ್ರಧಾನಿ ಆಗಿದ್ದಾರೆ. ಈವರೆಗೂ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸಿಲ್ಲ. ಈ ಹಿಂದೆ ಎಂಎಸ್ಪಿ ದರವನ್ನು ಕೊಂಚ ಹೆಚ್ಚಿಸಿ, ಅದನ್ನೇ ಸ್ವಾಮಿನಾಥನ್ ವರದಿ ಶಿಫಾರಸು ಎಂದು ಬಿಂಬಿಸಲು ಕೃಷಿ ಸಚಿವಾಲಯ ಮುಂದಾಗಿತ್ತು. ಆಗ ಖುದ್ದು ಸ್ವಾಮಿನಾಥನ್ ಅವರೇ ತಾವು ಮಾಡಿದ್ದ ಶಿಫಾರಸು ಇದಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದ್ದರು.

ನವದೆಹಲಿಯಲ್ಲಿ ಕರ್ನಾಟಕ ಸಂಯುಕ್ತ ಮೋರ್ಚಾ ನೇತೃತ್ವದಲ್ಲಿ ಜಗತ್‌ ಸಿಂಗ್‌ ದಲೈವಾಲ ಹೋರಾಟ ಬೆಂಬಲಿಸಿ ಕುರುಬೂರು ಶಾಂತಕುಮಾರ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು

ದೇಶದಲ್ಲಿ ರೈತ ಧಂಗೆ; ಕುರುಬೂರು ಎಚ್ಚರಿಕೆ

ದೇಶದ ಜನಸಂಖ್ಯೆಯ ಶೇ 70ರಷ್ಟು ಇರುವ ರೈತರ ಬೇಡಿಕೆಯಾದ ಎಂ ಎಸ್ ಪಿ ಕಾನೂನು ಜಾರಿಗೊಳಿಸದೇ ಹೋದರೆ ರೈತರು ಧಂಗೆ ಏಳಬೇಕಾಗುತ್ತದೆ ಎಂದು ಸಂಯುಕ್ತ ಕಿಸಾನ್ ಮೂರ್ಚಾ ರಾಜ್ಯ ಸಂಚಾಲಕ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ರೈತರೊಂದಿಗೆ ಖನೌರಿ ಗಡಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಳದೇ ಹೋದರೂ ಕೇಂದ್ರ ಸರ್ಕಾರ ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ದೇಶದ ಜನರಿಗೆ ಅಗತ್ಯವಿಲ್ಲದ ʼಒಂದು ದೇಶ ಒಂದು ಚುನಾವಣೆʼ ವ್ಯವಸ್ಥೆಯನ್ನು ತರಾತುರಿಯಲ್ಲಿ ಜಾರಿಗೆ ತರಲು ಮುಂದಾಗಿದೆ. ದೇಶದ ಜನಸಂಖ್ಯೆಯ ಶೇ 70 ರಷ್ಟು ಇರುವ ರೈತರು ವರ್ಷಗಟ್ಟಲೇ ಹೋರಾಟ ಮಾಡಿದರೂ ಸರ್ಕಾರ ಕಾನೂನು ರೂಪಿಸಲು ಸಿದ್ಧವಿಲ್ಲ ಯಾಕೆ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಲಿ ಎಂದು ಆಗ್ರಹಿಸಿದರು.

ರೈತರು ಹೇಡಿಗಳಲ್ಲ. ಸ್ವಾತಂತ್ರ್ಯ ಚಳವಳಿಯ ಮಾದರಿಯಲ್ಲಿ ಪಂಜಾಬ್ ರೈತರು ಹೋರಾಟ ಮಾಡುತ್ತಿದ್ದಾರೆ. ಇಡೀ ದೇಶದ ರೈತರು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ದಲೈವಾಲ ಅವರ ಪ್ರಾಣಕ್ಕೆ ಕುತ್ತು ಬಂದರೆ ರೈತರು ಕೇಂದ್ರ ಸರ್ಕಾರದ ಮರಣ ಶಾಸನ ಬರೆಯಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಸ್ವಾಮಿನಾಥನ್ ಆಯೋಗದ ಶಿಫಾರಸು ಏನು?

  • ಬೆಳೆಗಳ ಉತ್ಪಾದನಾ ವೆಚ್ಚದ ಮೇಲೆ ಶೇ 50ರಷ್ಟು ಹೆಚ್ಚುವರಿ ಮೊತ್ತ ಸೇರಿಸಿ ಒಕ್ಕಲುತನ ಹುಟ್ಟುವಳಿಗಳಿಗೆ ಬೆಲೆ ನಿಗದಿ ಮಾಡಬೇಕು.
  • ದೇಶದ ಆಹಾರ ಭದ್ರತೆ ದೃಷ್ಟಿಯಿಂದ ಕೃಷಿ ಭೂಮಿಗಳ ಪರಿವರ್ತನೆಗೆ ನಿರ್ಬಂಧ ಹೇರಬೇಕು.
  • ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹವರ್ತಿ ಪಟ್ಟಿಗೆ ಕೃಷಿ ವಲಯವನ್ನು ಸೇರಿಸಬೇಕು.
  • ಕೃಷಿ ಬೆಳೆಗಳ ಬೆಲೆ ನಿರ್ಧಾರಕ್ಕೆ ಶಾಶ್ವತವಾದ ಶಾಸನಾತ್ಮಕ ಸ್ವಾಯತ್ತ ಮಂಡಳಿ ರಚನೆ ಮಾಡಬೇಕು.
  • ಕೃಷಿ ಬೆಳೆಗಳಿಗೆ ಅತಿಯಾದ ರಸಗೊಬ್ಬರ, ಕ್ರಿಮಿನಾಶಕ, ನೀರಿನ ದುರ್ಬಳಕೆಗೆ ಕಡಿವಾಣ ಹಾಕಬೇಕು.
  • ರೈತ ಸ್ನೇಹಿ ಕೃಷಿ ಮಾರುಕಟ್ಟೆಗಳನ್ನು ಸ್ಥಾಪಿಸಬೇಕು. ರೈತರಿಗೆ ಸಮರ್ಪಕ ಭೂಮಿ ಹಂಚಿಕೆ ಮಾಡಬೇಕು.
  • ಜೈವಿಕ ವೈವಿಧ್ಯತೆ, ಜಲ ಸಂಪನ್ಮೂಲ, ಅಂತರ್ಜಲ ಸಂರಕ್ಷಣೆಗೆ ಯೋಜನೆ ರೂಪಿಸಬೇಕು.
  • ಕೃಷಿ ವಲಯದ ಉಪ ಕಸಬುಗಳಿಗೆ ಸರ್ಕಾರಗಳು ಹೆಚ್ಚು ಉತ್ತೇಜನ ನೀಡಬೇಕು.
Read More
Next Story