ಸತ್ಯಾಂಶ ತಿರುಚಿ ತಪ್ಪು ಮಾಹಿತಿ ನೀಡುತ್ತಿದೆ ಸರ್ಕಾರ: ಕೇಂದ್ರ ಸಚಿವರ ವಾಗ್ದಾಳಿ
x

ಸತ್ಯಾಂಶ ತಿರುಚಿ ತಪ್ಪು ಮಾಹಿತಿ ನೀಡುತ್ತಿದೆ ಸರ್ಕಾರ: ಕೇಂದ್ರ ಸಚಿವರ ವಾಗ್ದಾಳಿ


ರಾಜ್ಯದ ಬಾಕಿ ಇರುವ ಯೋಜನೆಗಳಿಗೆ ಕೇಂದ್ರ ಸರ್ಕಾರದ ನೆರವು ಕೋರುವಾಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ಸತ್ಯಾಂಶಗಳನ್ನು ತಿರುಚಿ ತಪ್ಪುದಾರಿಗೆಳೆಯುವ ಮಾಹಿತಿ ನೀಡುತ್ತಿದೆ ಎಂದು ಕೇಂದ್ರ ಸಚಿವರು ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಮತ್ತು ಸಂಸದರೊಂದಿಗೆ ಸಭೆ ನಡೆಸಿದ್ದರು. ಆ ವೇಳೆ ಕೇಂದ್ರದಲ್ಲಿ ಬಾಕಿ ಇರುವ ರಾಜ್ಯದ ಯೋಜನೆಗಳಿಗೆ ಶೀಘ್ರ ಅನುಮತಿ ಪಡೆಯಲು ಸಂಸದರು, ಸಚಿವರ ನೆರವು ಕೋರಿದರು.

ಕರ್ನಾಟಕಕ್ಕೆ ಹಣಕಾಸು ಆಯೋಗ ಶಿಫಾರಸು ಮಾಡಿರುವ 11,495 ಕೋಟಿ ರೂ. ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಇದರ ಜೊತೆಗೆ ಅಹವಾಲುಗಳನ್ನೂ ಮುಂದಿಡಲಾಗಿತ್ತು. ಸಿಎಂ ಸಿದ್ದರಾಮಯ್ಯ ಸರ್ಕಾರವು ಮುಂಬರುವ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಸಿಗಬೇಕಿರುವ ಯೋಜನೆಗಳ ಕುರಿತು ವಿವಿಧ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ವಿಚಾರವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದು, ʻʻರಾಜ್ಯಕ್ಕೆ ಅನುದಾನ ನೀಡುವ ವಿಷಯದಲ್ಲಿ ಕೇಂದ್ರ ಮಲತಾಯಿ ಧೋರಣೆ ತಳೆದಿಲ್ಲ. ಬದಲಿಗೆ ಅದು ಬಯಸಿದ್ದಕ್ಕಿಂತ ಹೆಚ್ಚಿನದನ್ನು ನೀಡಿದೆ. ರಾಜ್ಯ ನಾಯಕರು ಸತ್ಯಾಂಶಗಳನ್ನು ತಿರುಚಿ ತಪ್ಪುದಾರಿಗೆಳೆಯುವ ಹೇಳಿಕೆ ನೀಡುತ್ತಿದ್ದಾರೆ. ಕರ್ನಾಟಕಕ್ಕೆ ಜಿಎಸ್‌ಟಿ ಬಾಕಿ ಉಳಿಸಿಕೊಂಡಿಲ್ಲ" ಎಂದರು.

ʻʻಮೇಕೆದಾಟು ಸೇರಿದಂತೆ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಯೋಜನೆಗಳಿಗೆ ರಾಜ್ಯ ಸರ್ಕಾರ ಕೇಂದ್ರವನ್ನು ದೂಷಿಸಬಾರದುʼʼ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹರಿಹಾಯ್ದರು.

ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಮಾತನಾಡಿ, ʻʻದೇವದಾರಿ ಗಣಿ ಯೋಜನೆ ಬಗ್ಗೆ ಜನರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕೆಟ್ಟ ಅಭಿಪ್ರಾಯ ಉಂಟು ಮಾಡಲು ಸಂಚು ಮಾಡಲಾಗುತ್ತಿದೆ. ರಾಜ್ಯಕ್ಕೆ 12,800 ಕೋಟಿಗೂ ಹೆಚ್ಚು ಆದಾಯ ತಂದುಕೊಡುವ ಹಾಗೂ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಈ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿದೆʼʼ ಎಂದು ಬೇಸರ ವ್ಯಕ್ತಪಡಿಸಿದರು.

ʻʻಕೇಂದ್ರದಿಂದ ಬಾಕಿ ಇರುವ 26 ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರ ನಮಗೆ ಕೊಟ್ಟಿದೆ. ನೀರಾವರಿ, ತೆರಿಗೆ ಪಾಲು, ಅನುದಾನಗಳ ಬಗ್ಗೆ ಮುಖ್ಯಮಂತ್ರಿಗಳು ಪ್ರಸ್ತಾಪ ಮಾಡಿದ್ದಾರೆ. ಏಮ್ಸ್, ಐಐಟಿಗಳ ಪ್ರಸ್ತಾವನೆಯನ್ನು ಕೊಟ್ಟಿದ್ದಾರೆ. ರಾಜ್ಯ ಸರ್ಕಾರದಲ್ಲಿರುವ ಮಾಹಿತಿ ಕೊರತೆ ಬಗ್ಗೆ ಮಾತನಾಡಿದ್ದೇವೆ. ಸರಿಯಾದ ಮಾಹಿತಿಯೊಂದಿಗೆ ಬಂದರೆ ನೆರವು ಕೊಡುತ್ತೇವೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲʼʼ ಎಂದು ಅವರು ಹೇಳಿದ್ದಾರೆ.

ʻʻ15ನೇ ಹಣಕಾಸಿನ ಆಯೋಗದಲ್ಲಿ ರಾಜ್ಯದ ಪಾಲಿನ ಹಣ ಕಡಿತ ಆಗಿರುವ ಬಗ್ಗೆ ಚರ್ಚೆಯಾಗಿದೆ. 16ನೇ ಹಣಕಾಸು ಆಯೋಗದಲ್ಲಿ ಸಮಸ್ಯೆ ಆಗಬಾರದು. ರಾಜ್ಯ ಸರ್ಕಾರವು ಆಯೋಗದ ಮುಂದೆ ಅಭಿಪ್ರಾಯ ಮಂಡಿಸಿ ಸರಿಪಡಿಸಬೇಕು. ಪದೇ ಪದೇ ಕೇಂದ್ರದ ವಿರುದ್ಧ ಹೇಳಿಕೆ ಕೊಡಬಾರದುʼʼ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯ ಸರ್ಕಾರ ಕೇಂದ್ರದ ಮುಂದಿಟ್ಟಿರುವ ಪ್ರಸ್ತಾವನೆಗಳಿಗೆ ರಾಜ್ಯವನ್ನು ಕೇಂದ್ರ ಸಂಪುಟದಲ್ಲಿ ಪ್ರತಿನಿಧಿಸುತ್ತಿರುವ ಸಚಿವರಾದ ನಿರ್ಮಲಾ ಸೀತಾ ಸೀತಾರಮನ್‌, ಶೋಭಾ ಕೃಂದ್ಲಾಜೆ ಹಾಗೂ ಹೆಚ್‌ಡಿ ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read More
Next Story