
ಬೆಳಗಾವಿ: ಗ್ರಾ.ಪಂ ಕಟ್ಟಡಕ್ಕೆ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು
ಗ್ರಾಮ ಪಂಚಾಯಿತಿ ಕಟ್ಟಡದೊಳಗೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ಬೆಳಗಾವಿ ತಾಲೂಕಿನ ಕಲಕಾಂಬದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಗ್ರಾಮ ಪಂಚಾಯಿತಿ ಕಟ್ಟಡದೊಳಗೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ಬೆಳಗಾವಿ ತಾಲೂಕಿನ ಕಲಕಾಂಬದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಬಿಯರ್ ಬಾಟಲಿಯಲ್ಲಿ ಪೆಟ್ರೋಲ್ ತುಂಬಿ, ಅದಕ್ಕೆ ಬೆಂಕಿ ಹಚ್ಚಿ ಗ್ರಾಮ ಪಂಚಾಯಿತಿ ಕಟ್ಟಡದ ಕಿಟಕಿಗೆ ದುಷ್ಕರ್ಮಿಗಳು ಎಸೆದಿದ್ದು, ಕಿಟಕಿಗೆ ಹೊತ್ತಿಕೊಂಡ ಬೆಂಕಿ ಕೆಲ ನಿಮಿಷಗಳ ಬಳಿಕ ತಾನಾಗಿಯೇ ನಂದಿದೆ. ಅದರ ಪಕ್ಕದಲ್ಲಿ ಟೇಬಲ್, ಕುರ್ಚಿಗಳಿಗೆ ಹಾನಿಯಾಗಿದೆ. ಆದರೆ ಯಾವುದೇ ದಾಖಲೆಗಳು ಸುಟ್ಟಿಲ್ಲ. ದುಷ್ಕರ್ಮಿಗಳು ಸಿಸಿಟಿವಿ ಕ್ಯಾಮೆರಾ ಕೂಡ ಕಿತ್ತುಕೊಂಡು ಹೋಗಿದ್ದಾರೆ.
ಈ ಗ್ರಾಮ ಸಚಿವ ಸತೀಶ ಜಾರಕಿಹೊಳಿ ಅವರು ಪ್ರತಿನಿಧಿಸುವ ಯಮಕನಮರಡಿ ವಿಧಾನಸಭಾ ಕ್ಷೇತ್ರ ಹಾಗೂ ಪ್ರಿಯಾಂಕಾ ಜಾರಕಿಹೊಳಿ ಅವರ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ.
ಸಂಸದೆ ಪ್ರಿಯಾಂಕಾ ಅವರು ಶುಕ್ರವಾರ ಗ್ರಾಮಕ್ಕೆ ಬಂದು ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಗ್ರಾಮದ ಒಂದು ಗುಂಪು ಅವರನ್ನು ಆಹ್ವಾನಿಸಿತ್ತು. ಸಂಸದೆಯನ್ನು ಗ್ರಾಮದ ವಾಲ್ಮೀಕಿ ಗಲ್ಲಿಗೂ ಕರೆದುಕೊಂಡು ಬರಬೇಕು ಎಂದು ಇನ್ನೊಂದು ಗುಂಪು ಒತ್ತಾಯ ಮಾಡಿತ್ತು. ಈ ವಿಚಾರವಾಗಿ ಎರಡೂ ಗುಂಪುಗಳ ನಡುವೆ ಗಲಾಟೆ ಕೂಡ ನಡೆದಿತ್ತು.
ಗ್ರಾಮ ಪಂಚಾಯಿತಿಗೆ ಪೆಟ್ರೋಲ್ ಬಾಂಬ್ ಎಸೆದ ಘಟನೆಗೂ ಇದಕ್ಕೂ ಸಂಬಂಧವಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ. ಮಾರಿಹಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.