
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ಹಸುವಿನ ಕೆಚ್ಚಲು ಕತ್ತರಿಸಿದ ವಿಕೃತಿ ಮೆರೆದ ಕಿಡಿಗೇಡಿಗಳು
ಸುಮಾರು 20 ದನಗಳನ್ನು ಕಳ್ಳರು ತಂತಿ ಬೇಲಿಯೊಳಗೆ ಹಿಡಿದು ಕೂಡಿ ಹಾಕಿ ಬೇರೆಡೆಗೆ ಸಾಗಿಸಲು ಪ್ರಯತ್ನಿಸುತ್ತಿದ್ದರು. ಆ ಪ್ರಯತ್ನ ವಿಫಲಗೊಂಡಿದ್ದರಿಂದ ಒಂದು ಹಸುವಿನ ಕೆಚ್ಚಲು ಕತ್ತರಿಸಿ ಪರಾರಿಯಾಗಿದ್ದಾರೆ.
ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚೌಳಹಿರಿಯೂರು ಸಮೀಪದ ತಮ್ಮಿಹಳ್ಳಿಯಲ್ಲಿ ಶನಿವಾರ ಬೆಳಕಿಗೆ ಬಂದಿದೆ.
ಚೌಳಹಿರಿಯೂರಿನ ತಮ್ಮಿಹಳ್ಳಿ ಗ್ರಾಮದ ಶೇಖರಪ್ಪ ಎಂಬುವರಿಗೆ ಸೇರಿದ ಸುಮಾರು 20 ದನಗಳನ್ನು ಕಳ್ಳರು ತಂತಿ ಬೇಲಿಯೊಳಗೆ ಹಿಡಿದು ಕೂಡಿ ಹಾಕಿ ಬೇರೆಡೆಗೆ ಸಾಗಿಸಲು ಪ್ರಯತ್ನಿಸುತ್ತಿದ್ದರು. ಆ ಪ್ರಯತ್ನ ವಿಫಲಗೊಂಡಿದ್ದರಿಂದ ಒಂದು ಹಸುವಿನ ಕೆಚ್ಚಲು ಕತ್ತರಿಸಿ ಪರಾರಿಯಾಗಿದ್ದಾರೆ. ಹಸು ಸತ್ತಿದ್ದು, ಈ ಬಗ್ಗೆ ರೈತರು ಯಗಟಿ ಠಾಣೆಗೆ ದೂರು ನೀಡಿದ್ದಾರೆ.
ಬೀರೂರು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್, ಯಗಟಿ ಪಿಎಸ್‍ಐ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗೆ ಚೌಳಹಿರಿಯೂರು ಭಾಗದಲ್ಲಿ ದನಗಳ್ಳರ ಹಾವಳಿ ಹೆಚ್ಚಾಗಿದೆ. ಕೊಟ್ಟಿಗೆಯೊಳಗೆ ಹಾಗೂ ಮನೆ ಮುಂಭಾಗದಲ್ಲಿ ಕಟ್ಟಿದ ದನಗಳನ್ನು ರಾತ್ರೋ ರಾತ್ರಿ ಅಪಹರಿಸುತ್ತಿರುವ ಪ್ರಕರಣಗಳು ನಡೆದಿವೆ. ಈವರೆಗೆ ಸುಮಾರು 50 ರಿಂದ 60 ರಾಸುಗಳ ಕಳ್ಳತನ ನಡೆದಿದೆ ಎಂದು ಗ್ರಾಮಸ್ಥರು ದೂರಿದರು.
ಇತ್ತೀಚೆಗೆ ರಾಜ್ಯದಲ್ಲಿ ದನಗಳ ಮೇಲೆ ಕಿಡಿಗೇಡಿಗಳು ವಿಕೃತಿ ಮೆರೆಯುತ್ತಿದ್ದು, ಸಾರ್ವಜನಿಕರಲ್ಲಿ ಆಕ್ರೋಶವನ್ನುಂಟುಮಾಡಿವೆ. ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದಲ್ಲಿ ಗರ್ಭಿಣಿ ದನದ ತಲೆ ಕತ್ತರಿಸಿ, ಕಾಲುಗಳನ್ನು ಕಡಿದು, ಹೊಟ್ಟೆ ಸೀಳಿ ಗರ್ಭದಲ್ಲಿದ್ದ ಕರುವನ್ನು ತೆಗೆದಿರುವ ಘಟನೆ ನಡೆದಿತ್ತು.
ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕನಗರದಲ್ಲಿ ಮೂರು ಹಸುಗಳ ಕೆಚ್ಚಲುಗಳನ್ನು ದುಷ್ಕರ್ಮಿಗಳು ಕತ್ತರಿಸಿರುವ ಅಮಾನುಷ ಘಟನೆ ಜನವರಿಯಲ್ಲಿ ನಡೆದಿತ್ತು.