
ಮಸೀದಿಯಲ್ಲಿದ್ದ ಕುರಾನ್ ಸುಟ್ಟುಹಾಕಿದ ಕಿಡಿಗೇಡಿಗಳು, ಬೆಳಗಾವಿ - ಗೋವಾ ರಸ್ತೆ ತಡೆದು ಪ್ರತಿಭಟನೆ
ಸೋಮವಾರ ಪ್ರಾರ್ಥನೆ ಮಾಡಲು ಆಗಮಿಸಿದ್ದ ವೇಳೆ ಕೆಳಮಹಡಿಯಲ್ಲಿದ್ದ ಕುರಾನ್, ಹದೀಸ್ ನಾಪತ್ತೆಯಾಗಿರುವುದನ್ನು ಗಮನಿಸಿದ್ದಾರೆ. ಹುಡುಕಾಟ ನಡೆಸಿದಾಗ ಕುರಾನ್ ಮತ್ತು ಹದೀಸ್ ಸುಟ್ಟು ಹಾಕಿರುವುದು ಬೆಳಕಿಗೆ ಬಂದಿದೆ.
ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್ ಮತ್ತು ಹದೀಸ್ ಪುಸ್ತಕಗಳನ್ನು ಕಳವು ಮಾಡಿ ಸುಟ್ಟು ಹಾಕಿರುವ ಘಟನೆ ಸೋಮವಾರ (ಮೇ 12) ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಜಿಲ್ಲೆಯಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸಾವಿರಾರು ಮುಸ್ಲಿಂ ಸಮುದಾಯದ ಜನರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಗ್ರಾಮದ ನಿರ್ಮಾಣ ಹಂತದ ಮಸೀದಿಯ ಕೆಳಮಹಡಿಯಲ್ಲಿ ಇರಿಸಲಾಗಿದ್ದ ಕುರಾನ್ ಹಾಗೂ ಹದೀಸ್ ಪುಸ್ತಕಗಳು ಸೋಮವಾರ ಬೆಳಿಗ್ಗೆ ಪ್ರಾರ್ಥನೆಗೆ ಬಂದವರಿಗೆ ಕಾಣಿಸಲಿಲ್ಲ. ನಂತರ ಹುಡುಕಾಡಿದಾಗ ಮಸೀದಿ ಸಮೀಪದ ಹೊಲದಲ್ಲಿ ಸುಟ್ಟ ಪುಸ್ತಕಗಳ ತುಣುಕುಗಳು ಪತ್ತೆಯಾಗಿವೆ. ಈ ಕೃತ್ಯದಿಂದ ಸ್ಥಳೀಯ ಮುಸ್ಲಿಂ ಸಮುದಾಯ ತೀವ್ರ ಆಕ್ರೋಶಗೊಂಡಿದೆ.
ಬೃಹತ್ ಪ್ರತಿಭಟನೆ
ಘಟನೆ ತಿಳಿದ ಕೂಡಲೇ ಸಂತಿಬಸ್ತವಾಡದಿಂದ ರಾಣಿ ಚೆನ್ನಮ್ಮ ವೃತ್ತದವರೆಗೆ ಸುಮಾರು 8 ಕಿ.ಮೀ ದೂರದವರೆಗೆ ಸಾವಿರಾರು ಮುಸ್ಲಿಂ ಯುವಕರು ಮತ್ತು ಮುಖಂಡರು ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರು "ಭಾರತ್ ಮಾತಾ ಕಿ ಜೈ" ಘೋಷಣೆಗಳನ್ನು ಕೂಗುತ್ತಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಚೆನ್ನಮ್ಮ ವೃತ್ತದಲ್ಲಿ ಧರಣಿ ನಡೆಸಲು ಯತ್ನಿಸಿದಾಗ ಪೊಲೀಸರು ಅನುಮತಿ ನಿರಾಕರಿಸಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಆವರಣದ ಬಳಿ ಪ್ರತಿಭಟನೆಗೆ ಅವಕಾಶ ನೀಡಿದರು. ಆದರೆ, ಪ್ರತಿಭಟನಾಕಾರರು ಬೆಳಗಾವಿ-ಗೋವಾ ರಸ್ತೆಯನ್ನು ತಡೆದು ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರಕ್ಕೆ ಅಡ್ಡಿಪಡಿಸಿದರು.
ಬೆಳಗಾವಿ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮತ್ತು ಡಿಸಿಪಿ ರೋಹನ್ ಜಗದೀಶ್ ಸ್ಥಳಕ್ಕೆ ಧಾವಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಚೆನ್ನಮ್ಮ ವೃತ್ತಕ್ಕೆ ಹೋಗುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಪ್ರತಿಭಟನಾಕಾರರು ಎರಡು ದಿನಗಳ ಒಳಗೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದು, ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.