Bangalore Infrastructure | ಉದ್ಯಮಿ ಮೋಹನ್‌ದಾಸ್‌ ಪೈ ವಿರುದ್ಧ ಸಚಿವರ ವಾಗ್ದಾಳಿ; ಸಲಹೆ ಕೊಡಿ, ಟೀಕೆ ಬಿಡಿ ಎಂದು ಆಕ್ರೋಶ
x

ಮೋಹನ್‌ದಾಸ್‌ ಪೈ, ಎಂ.ಬಿ.ಪಾಟೀಲ್‌, ಪ್ರಿಯಾಂಕ್‌ ಖರ್ಗೆ

Bangalore Infrastructure | ಉದ್ಯಮಿ ಮೋಹನ್‌ದಾಸ್‌ ಪೈ ವಿರುದ್ಧ ಸಚಿವರ ವಾಗ್ದಾಳಿ; ಸಲಹೆ ಕೊಡಿ, ಟೀಕೆ ಬಿಡಿ ಎಂದು ಆಕ್ರೋಶ

ಸಂಚಾರ ದಟ್ಟಣೆ ಬರೀ ಬೆಂಗಳೂರಿನ ಸಮಸ್ಯೆಯಲ್ಲ. ಲಂಡನ್, ಸ್ಯಾನ್ ಫ್ರಾನ್ಸಿಸ್ಕೊ, ಚೆನ್ನೈ ಸೇರಿದಂತೆ ಎಲ್ಲ ಕಡೆಗಳಲ್ಲೂ ಇದೆ. ಈ ಬಗ್ಗೆ ಮೋಹನ್‌ದಾಸ್‌ ಪೈ ಅವರು ಯಾಕೆ ಮಾತನಾಡುವುದಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಪ್ರಶ್ನಿಸಿದ್ದಾರೆ.


ಬೆಂಗಳೂರು ನಗರದ ಮೂಲ ಸೌಕರ್ಯದ ಕುರಿತು ಟೀಕಿಸಿದ್ದ ಉದ್ಯಮಿ ಮೋಹನದಾಸ್ ಪೈ ವಿರುದ್ಧ ಸರ್ಕಾರದ ಸಚಿವರು ಮುಗಿಬಿದ್ದಿದ್ದಾರೆ. ಗ್ರಾಮೀಣಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬೆನ್ನಲ್ಲೇ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರದ ಮೂಲಸೌಕರ್ಯ ಸುಧಾರಣೆಗೆ ಮೋಹನ್‌ದಾಸ್‌ ಪೈ ಅವರು ಸಲಹೆ ನೀಡಲಿ, ವಿನಾ ಕಾರಣ ಟೀಕಿಸುವುದನ್ನು ಬಿಡಲಿ ಎಂದು ತಿರುಗೇಟು ನೀಡಿದ್ದಾರೆ.

'ಪೈ ಅವರು ಪದೇಪದೆ ಹೀಗೆ ಮಾತನಾಡುತ್ತಿರುವುದರಿಂದ ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಾಗುತ್ತಿಲ್ಲ. ಅವರು ಕೂಡ ಬೆಂಗಳೂರಿನಿಂದಲೇ ಲಾಭ ಮಾಡಿಕೊಂಡಿರುವವರು. ಇಲ್ಲಿಂದಲೇ ಎಲ್ಲವನ್ನೂ ಪಡೆದುಕೊಂಡಿರುವವರು. ಈಗ ಹುಬ್ಬಳ್ಳಿಗಾಗಲಿ, ಮೈಸೂರಿಗಾಗಲಿ ಹೋಗಲು ಅವರೇ ತಯಾರಿಲ್ಲ' ಎಂದು ಕಿಡಿಕಾರಿದ್ದಾರೆ.

ಸಂಚಾರ ದಟ್ಟಣೆ ಬರೀ ಬೆಂಗಳೂರಿನ ಸಮಸ್ಯೆಯಲ್ಲ. ಲಂಡನ್, ಸ್ಯಾನ್ ಫ್ರಾನ್ಸಿಸ್ಕೊ, ಚೆನ್ನೈ ಸೇರಿದಂತೆ ಎಲ್ಲ ಕಡೆಗಳಲ್ಲೂ ಇದೆ. ಈ ಬಗ್ಗೆ ಪೈ ಅವರು ಯಾಕೆ ಮಾತನಾಡುವುದಿಲ್ಲ? ಲಂಡನ್ನಿನಲ್ಲಿ ನಾನೇ ಒಂದೂವರೆ ಮೈಲುದ್ದದ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಹದಿನೈದಿಪ್ಪತ್ತು ಮೈಲಿ ಸಂಚಾರ ದಟ್ಟಣೆ ಸೃಷ್ಟಿಯಾಗಿದ್ದಿದೆ ಎಂದು ಹೇಳಿದ್ದಾರೆ.

ಬೆಂಗಳೂರು 'ಗ್ರೋಯಿಂಗ್ ಸಿಟಿ'ಯ ಜತೆಗೆ 'ಗ್ಲೋಬಲ್ ಸಿಟಿ'ಯೂ ಆಗಿದೆ. ಹೀಗಾಗಿಯೇ ಕರ್ನಾಟಕದ ಸಮಗ್ರ ಅಭಿವೃದ್ಧಿ ನಮ್ಮ ಆದ್ಯತೆ. ಮೋದಿ ಸರ್ಕಾರ ಏನು ಮಾಡಿದರೂ ಸರಿ, ಸಿದ್ದರಾಮಯ್ಯ ಸರ್ಕಾರ ಮಾಡಿದ್ದೆಲ್ಲವೂ ತಪ್ಪು ಎನ್ನುವುದಲ್ಲ. ಇಂತಹ ಟೀಕೆಗಳಿಂದ ಪೈ ಅವರು ದೊಡ್ಡ ಮನುಷ್ಯರಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಯಾರೇ ಆಗಲಿ, ಸರ್ಕಾರಕ್ಕೆ ರಚನಾತ್ಮಕ ಸಲಹೆ ಕೊಡಬಹುದು. ಪೈ ಅವರು ಮಳೆಗಾಲದಲ್ಲಿ ಬೆಂಗಳೂರಿನ ಒಂದು ಕಡೆ ಪ್ರವಾಹ ಉಂಟಾದಾಗ ವಾಗ್ದಾಳಿ ಮಾಡಿದ್ದರು. ಆದರೆ, ಇತ್ತೀಚೆಗೆ ಇಡೀ ಚೆನ್ನೈ ನಗರವೇ ಜಲಾವೃತವಾದರೂ ಜಾಣಮೌನ ವಹಿಸಿದ್ದರು. ಬಿಜೆಪಿ ನಮ್ಮ‌ ಕಾರ್ಯಕ್ರಮಗಳನ್ನೇ ನಕಲು ಮಾಡುತ್ತಿದೆ. ಇದನ್ನು ಕಂಡರೂ ಇವರೇಕೆ ಸುಮ್ಮನಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೆಲಂಗಾಣಕ್ಕೆ ಕೃಷ್ಣಾ ನೀರು, ತಪ್ಪೇನಿಲ್ಲ

ಕುಡಿಯುವ ನೀರಿನ ಉದ್ದೇಶಕ್ಕಾಗಿ ಆಲಮಟ್ಟಿ ಆಣೆಕಟ್ಟೆಯಿಂದ ತೆಲಂಗಾಣಕ್ಕೆ 1.24 ಟಿಎಂಸಿ ಅಡಿ ನೀರನ್ನು ಬಿಟ್ಟಿರುವುದರಲ್ಲಿ ತಪ್ಪೇನೂ‌ ಇಲ್ಲ. ಕೆಲವೊಂದು ವಿಚಾರಗಳನ್ನು ನಾವು ಮಾನವೀಯವಾಗಿ ನೋಡಬೇಕಾಗುತ್ತದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಿಯಾಂಕ್ ಖರ್ಗೆಯೂ ವಾಗ್ದಾಳಿ

ಬೆಂಗಳೂರಿನ ರಸ್ತೆಗಳ ಕುರಿತ ಟಿ.ವಿ.ಮೋಹನ್‌ ದಾಸ್ ಪೈ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದರು.

ಮೋಹನದಾಸ್‌ ಪೈ ಅವರ ಹೇಳಿಕೆ ಉಲ್ಲೇಖಿಸಿ, ಇದು ರಾಕೆಟ್ ವಿಜ್ಞಾನವಲ್ಲದಿದ್ದರೆ ನಿಮ್ಮ ಅಂದಿನ ಸರ್ಕಾರಕ್ಕೆ ಏಕೆ ಜ್ಞಾನೋದಯ ಮಾಡಲಿಲ್ಲ? ನಾವು 135 ಸ್ಥಾನಗಳನ್ನು ಪಡೆದ ನಂತರ ನಿಮ್ಮ ಸಂಕಟಗಳು ನೋವಿನಿಂದ ಕೂಡಿದೆ ಎಂದು ಕಾಣುತ್ತಿದೆ ಎಂದು ಕುಟುಕಿದ್ದರು.

ನಿಮ್ಮ ವಿಶ್ವಗುರು ನರೇಂದ್ರ ಮೋದಿ ಅವರು ಕರ್ನಾಟಕವನ್ನು ತಿರಸ್ಕಾರದಿಂದ ನಡೆಸಿಕೊಳ್ಳುತ್ತಿರುವಾಗ ಏಕೆ ಸುಮ್ಮನಿರುವಿರಿ?, ಕರ್ನಾಟಕವು ಭಾರತದಲ್ಲಿ ಎರಡನೇ ಅತಿ ಹೆಚ್ಚು ತೆರಿಗೆ ಕೊಡುಗೆ ನೀಡುವ ರಾಜ್ಯವಾಗಿದೆ. ಬೆಂಗಳೂರಿನಿಂದ 2024 ರಲ್ಲಿ ಭಾರತದ ಜಿಡಿಪಿಗೆ ₹9.1 ಲಕ್ಷ ಕೋಟಿ ಕೊಡುಗೆ ಸಿಕ್ಕಿದೆ. ಈ ಸಂಗತಿ ಕೇಂದ್ರ ನಿಧಿಯ ಹೆಚ್ಚಿನ ಪಾಲು ಪಡೆಯಲು ಅರ್ಹವಲ್ಲವೇ?, ನ್ಯಾಯಯುತ ಪಾಲು ದೊರಕಿದರೆ ಮೂಲಸೌಕರ್ಯ ವ್ಯವಸ್ಥೆ ಉನ್ನತಿಗಾಗಿ ಅನುಕೂಲವಾಗಲಿದೆಯಲ್ಲವೇ ಎಂದು ಪ್ರಶ್ನಿಸಿದ್ದರು.

ಬೆಂಗಳೂರು ನಗರದ ನಿರ್ಣಾಯಕ ಮೂಲಸೌಕರ್ಯ ಸುಧಾರಿಸಲು 15 ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಒಟ್ಟು ₹11,495 ಕೋಟಿಗಳನ್ನು ನೀಡಿತು. ಕೇಂದ್ರ ಸರ್ಕಾರ ಅದನ್ನು ತಕ್ಷಣವೇ ವಿತರಿಸಬೇಕಲ್ಲವೇ?, ಕೇಂದ್ರ ಬಜೆಟ್‌ಗೂ ಮುನ್ನ ನಗರದಲ್ಲಿ ಸುರಂಗ ರಸ್ತೆಗಳು, 17 ಹೊಸ ಮೇಲ್ಸೇತುವೆಗಳು, ಪೆರಿಫೆರಲ್ ರಿಂಗ್ ರಸ್ತೆ, ಉಪನಗರ ರೈಲು, ಬಫರ್ ವಲಯ ರಸ್ತೆಗಳು, ಡಬಲ್ ಡೆಕ್ಕರ್ ಫ್ಲೈಓವರ್‌ಗಳು ಮತ್ತು ನೀರು ಸರಬರಾಜು ಉಪಕ್ರಮಗಳಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯವು ಹಣಕಾಸಿನ ನೆರವು ಕೋರಿದಾಗ ಒಂದು ಪೈಸೆಯನ್ನೂ ನೀಡಲಿಲ್ಲ. ಬೆಂಗಳೂರು 16 ಬಿಜೆಪಿ ಶಾಸಕರನ್ನು ಹೊಂದಿದೆ. ನಗರದ ಎಲ್ಲಾ 4 ಸಂಸದರು ಸೇರಿದಂತೆ ಕರ್ನಾಟಕದ 28 ಲೋಕಸಭಾ ಸ್ಥಾನಗಳಲ್ಲಿ 19 ಸ್ಥಾನಗಳನ್ನು ಎನ್‌ಡಿಎ ಹೊಂದಿದೆ. ತಮ್ಮ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸುವುದು ಅವರ ಜವಾಬ್ದಾರಿಯಲ್ಲವೇ ಎಂದು ಸಾಲು- ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದ್ದರು.

ದೆಹಲಿಯಲ್ಲಿ ಅವಕಾಶಕ್ಕಾಗಿ ಟೀಕೆ

ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ನಿಮ್ಮ ನಿರಂತರ ನಕಾರಾತ್ಮಕತೆಯನ್ನು ನಿಮ್ಮ ನಾಯಕರು ಮೆಚ್ಚಬಹುದು ಎಂದು ನನಗೆ ಖಾತ್ರಿಯಿದೆ. ಆದರೆ ನಿಮಗೆ ತಿಳಿದಿರಲಿ, ನಿಮ್ಮ ಈ ಟೀಕೆಗಳು ನಿಮಗೆ ದೆಹಲಿಯಲ್ಲಿ ಅವಕಾಶ ದೊರಕಿಸುವುದಿಲ್ಲ ಎಂದು ಮೋಹನ್‌ದಾಸ್‌ ಪೈ ಅವರಿಗೆ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.

ದೆಹಲಿಯ ಅಧಿಕಾರದ ಮೊಗಸಾಲೆಯಲ್ಲಿ ನೀವು ಎಲ್ಲರಿಗೂ ಹತ್ತಿರವಾಗಿದ್ದೀರಿ, ರಾಜ್ಯದ ಹಿತಾಸಕ್ತಿಗಾಗಿ ಕೆಲಸ ಮಾಡಿ ತೋರಿಸಿ ಎಂದು ಸವಾಲು ಹಾಕಿದ್ದಾರೆ.

ಮೋಹನ್‌ದಾಸ್‌ ಪೈ ಹೇಳಿದ್ದೇನು?

ಉದ್ಯಮಿ ಮೋಹನ್ ದಾಸ್ ಪೈ ಅವರು ಬೆಂಗಳೂರಿನ ಮೂಲಸೌಕರ್ಯದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಹೆಗ್ಗಳಿಕೆಗೆ ಸಂಬಂಧಿಸಿ ಪ್ರಿಯಾಂಕ್‌ ಖರ್ಗೆ ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಪೈ ಅವರು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಖಾರವಾಗಿ ಟೀಕಿಸಿದ್ದರು.

"ಸಚಿವರಾಗಿ ಬೆಂಗಳೂರಿಗೆ ನೀವೇನು ಮಾಡಿದ್ದೀರಿ?, ಮೊದಲು ಸ್ವಚ್ಛ ಮತ್ತು ಸರಿಯಾಗಿ ನಡೆದಾಡಬಲ್ಲಂಥ ನಗರವನ್ನು ನಮಗೆ ಕೊಡಿ’’ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮೋಹನ್ ದಾಸ್ ಪೈ ವಾಗ್ದಾಳಿ ನಡೆಸಿದ್ದರು.

ಅತಿ ಹೆಚ್ಚಿನ ಮೌಲ್ಯ ಹೊಂದಿರುವ ಹೆಚ್ಚು ಕಂಪನಿಗಳನ್ನು ಒಳಗೊಂಡ ಭಾರತದ ನಗರಗಳ ಪೈಕಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂಬ ಹರುನ್ ವರದಿಯನ್ನು ಪ್ರಿಯಾಂಕ್ ಖರ್ಗೆ ʼಎಕ್ಸ್​ʼನಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಬೆಂಗಳೂರಿನ ಹೆಗ್ಗಳಿಕೆಗಳನ್ನು ಪಟ್ಟಿ ಮಾಡಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ್ದ ಪೈ, "ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಸ್ವಚ್ಛ ನಗರ, ಗುಂಡಿಗಳಿಲ್ಲದ ರಸ್ತೆ ಮತ್ತು ಸರಿಯಾದ ಫುಟ್​ಪಾತ್ ಒದಗಿಸುವುದು ನಿಮ್ಮಿಂದ ಸಾಧ್ಯವಾಗಿಲ್ಲ. ಇದೇನು ದೊಡ್ಡ ರಾಕೆಟ್ ಸೈನ್ಸ್ ಅಲ್ಲ, ಸಾಧಾರಣ ನಿರ್ವಹಣೆ ಪ್ರಕ್ರಿಯೆ ಅಷ್ಟೇ. ದಯಮಾಡಿ ಡಿ.ಕೆ ಶಿವಕುಮಾರ್ ಅವರ ಜೊತೆ ಮಾತನಾಡಿ ನಮಗೆ ಸ್ವಚ್ಛ ಮತ್ತು ನಡೆದಾಡಬಲ್ಲಂತಹ ನಗರವನ್ನು ಒದಗಿಸಿಕೊಡಿ" ಎಂದು ಟ್ವೀಟ್‌ ಮಾಡಿದ್ದರು.

Read More
Next Story