
ಸಚಿವ ಶಿವರಾಜ್ ತಂಗಡಗಿ
ನರೇಗಾ ಹೆಸರು ಬದಲಾವಣೆ| ಬಿಜೆಪಿಯಿಂದ ಎರಡನೇ ಬಾರಿ ಗಾಂಧಿ ಹತ್ಯೆ: ಸಚಿವ ಶಿವರಾಜ್ ತಂಗಡಗಿ ಕಿಡಿ
ಪ್ರಧಾನಿ ಮೋದಿಯವರು ಹಿಟ್ಲರ್ ಮತ್ತು ಸದ್ದಾಂ ಹುಸೇನರಂತೆ ವರ್ತಿಸುತ್ತಿದ್ದಾರೆ. ರಾಜ್ಯಗಳೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಯೋಜನೆಗಳಲ್ಲಿ ಬದಲಾವಣೆ ತರುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಶಿವರಾಜ್ ತಂಗಡಗಿ ಆರೋಪಿಸಿದರು.
ಗೋಡ್ಸೆಯಿಂದ ಮಹಾತ್ಮಾ ಗಾಂಧಿಯವರ ಹತ್ಯೆಯಾಯಿತು. ಇದೀಗ ನರೇಗಾ ಯೋಜನೆಯ ಹೆಸರು ಬದಲಾಯಿಸಿ ಎರಡನೇ ಬಾರಿ ಗಾಂಧೀಜಿಯವರನ್ನು ಕೇಂದ್ರ ಸರ್ಕಾರ ಹತ್ಯೆ ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಟ್ಲರ್ ಮತ್ತು ಸದ್ದಾಂ ಹುಸೇನ್‌ನಂತೆ ಆಡಳಿತ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮೋದಿ ಸದ್ದಾಂ ಹುಸೇನ್‌ನಂತೆ ವರ್ತಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶ ಇಲ್ಲ. ಯೋಜನೆ ಜಾರಿಗೆ ತರುವ ಮುನ್ನ ಕೇಂದ್ರ ಯಾವುದೇ ರಾಜ್ಯಗಳ ಜೊತೆ ಚರ್ಚೆ ನಡೆಸಿಲ್ಲ. ಇದರ ವಿರುದ್ಧ ದೇಶಾದ್ಯಂತ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಮಹಾತ್ಮಾ ಗಾಂಧಿ ಅವರ ಬಗ್ಗೆ ಬಿಜೆಪಿಗರು ಬಾಯಿ ಮಾತಿಗಷ್ಟೇ ಮಾತನಾಡುತ್ತಾರೆ. ಇವರದ್ದು ಜನರಿಂದ ಆಯ್ಕೆಯಾಗಿ ಬಂದ ಸರ್ಕಾರ ಅಲ್ಲ, ವೋಟ್ ಚೋರಿಯಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರ. ಬಿಜೆಪಿ ಜನರ, ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಇದನ್ನು ನಾವು ಸಹಿಸಿಕೊಳ್ಳಲ್ಲ. ರಾಮನ ಹೆಸರಿನಲ್ಲಿ ರಾಜಕಾರಣ ಮಾಡುವ ಬಿಜೆಪಿ ರಾಮನಿಗೂ ತೃಪ್ತಿ ತರುವ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ಕಿಡಿಕಾರಿದರು.
ಆರೆಸ್ಸೆಸ್ ಒತ್ತಾಯಕ್ಕೆ ಮಣಿದು ಬಿಜೆಪಿಗರು ಇಂತಹ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮನುಸ್ಮೃತಿ ಮನಸ್ಥಿತಿಯುಳ್ಳವರು ದಲಿತರು, ಮಹಿಳೆಯರು ಹಾಗೂ ಸಾಮಾನ್ಯರು ನೆಮ್ಮದಿಯಾಗಿ ಬದುಕುವುದನ್ನು ಇಷ್ಟಪಡುವುದಿಲ್ಲ. ಇಂತಹ ಕಾಯ್ದೆ ಪಾಸ್ ಮಾಡಿಕೊಳ್ಳುವ ಮೂಲಕ ದೇಶದ 12.16 ಕೋಟಿ ಕಾರ್ಮಿಕರನ್ನು ಅವರಲ್ಲಿ, ಶೇ.53.61ರಷ್ಟು ಸಂಖ್ಯೆಯಲ್ಲಿದ್ದ 6.21 ಕೋಟಿ ಮಹಿಳೆಯರ ಬದುಕನ್ನು ಹಾಗೂ ಶೇ.17ಪರಿಶಿಷ್ಟ ಜಾತಿ ಮತ್ತು ಶೇ.11ಪರಿಶಿಷ್ಟ ಪಂಗಡ ನರೇಗಾ ಕೂಲಿ ಕಾರ್ಮಿಕರ ಬದುಕಿಗೆ ಬೆಂಕಿ ಇಟ್ಟಿದೆ ಎಂದು ಛೇಡಿಸಿದರು.
ಸಾಮಾನ್ಯರ ಬದುಕಿನ ಬಗ್ಗೆ ಕೇಂದ್ರಕ್ಕಿಲ್ಲ ಕಾಳಜಿ
ಉತ್ತರ ಕರ್ನಾಟಕ ಭಾಗಕ್ಕೆ ಇದು ಮಹತ್ತರವಾದ ಯೋಜನೆಯಾಗಿತ್ತು. ಶೇ.71.18 ಲಕ್ಷ ಮಂದಿ ನರೇಗಾ ಯೋಜನೆಯ ಅನುಕೂಲ ಪಡೆಯುತ್ತಿದ್ದರು. ಅವರ ಬದುಕಿಗೆ ಕೊಳ್ಳಿ ಇಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಯುಪಿಎ ಸರ್ಕಾರ ದೇಶದಲ್ಲಿ ಉದ್ಯೋಗ, ಶಿಕ್ಷಣ, ಆಹಾರದ ಹಕ್ಕಿನಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿತ್ತು. ಮೋದಿ ಸರ್ಕಾರ ಸುಳ್ಳು ಪ್ರಚಾರ ಮಾಡುವ ಮೂಲಕ ಈ ಯೋಜನೆಗಳನ್ನು ವಿಫಲಗೊಳಿಸುವ ಕೆಲಸ ಮಾಡುತ್ತಾ ಬಂದಿದೆ. ಕಾರ್ಪೊರೇಟ್ ಸಂಸ್ಥೆಗಳನ್ನು ಉಳಿಸಲು ಬೇಕಾದ ಯೋಜನೆಗಳನ್ನು ಮಾತ್ರ ಮೋದಿ ಸರ್ಕಾರ ರೂಪಿಸುತ್ತಿದೆ. ಸಾಮಾನ್ಯ ಜನರ ಬದುಕಿನ ಬಗ್ಗೆ ಈ ಸರ್ಕಾರಕ್ಕೆ ಕಾಳಜಿ ಇಲ್ಲ. ಜೀತ ಪದ್ಧತಿಯನ್ನು ಮತ್ತೊಮ್ಮೆ ಪುನರ್ ಸ್ಥಾಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಯುಪಿಎ ಸರ್ಕಾರ ಜಾರಿಗೆ ತಂದಿದ್ದ ನಿರ್ಮಲ್ ಭಾರತ ಯೋಜನೆಯನ್ನು ಸ್ವಚ್ಛ ಭಾರತ , ಇಂದಿರಾ ಅವಾಸ್ ಯೋಜನೆಗೆ ಪ್ರಧಾನಮಂತ್ರಿ ಅವಾಸ್ ಯೋಜನೆ ಎಂದು ಬದಲಾವಣೆ ಮಾಡಿದ್ದಾರೆ. ಯಾವುದೇ ಹೊಸ ಯೋಜನೆಯನ್ನು ಜಾರಿಗೆ ತಂದಿಲ್ಲ. ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಾವಣೆ ಮಾಡುವ ಬದಲಿಗೆ ಬೇರೊಂದು ಜನಪರ ಯೋಜನೆ ತರಬಹುದಿತ್ತು ಎಂದು ತಿಳಿಸಿದರು.
ಬಿಜೆಪಿಗರು ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಗಾಂಧೀಜಿ ಅವರ ಹೆಸರಿರುವ ಯೋಜನೆಯ ಹೆಸರು ಬದಲಾವಣೆ ಏಕೆ? ಹೆಸರು ಬದಲಾವಣೆ ಮಾಡುವ ಮೂಲಕ ಗಾಂಧೀಜಿ ಅವರ ಬಗ್ಗೆ ಎಷ್ಟು ಗೌರವ ಕೊಡುತ್ತಿದ್ದಾರೆ ಎಂಬುದು ತಿಳಿಯುತ್ತಿದೆ. ಬೇಕಿದ್ದರೆ, ರಾಮನ ಹೆಸರಿನಲ್ಲಿ ಹೊಸದೊಂದು ಯೋಜನೆ ಜಾರಿಗೆ ತರಲಿ ಎಂದು ಕೇಂದ್ರ ಸರ್ಕಾರವನ್ನು ಕುಟುಕಿದರು.
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ
ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ಇವರು ಅನುದಾನ ನೀಡುವುದು ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಿಗೆ ಮಾತ್ರ. ಇದು ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯವಲ್ಲವೇ ? ಎಂದು ಸಚಿವರು ಪ್ರಶ್ನಿಸಿದರು.
ಸೋಮಣ್ಣ ಮಾತು ಅಸಹ್ಯ ತರಿಸಿತು
ರೈಲ್ವೆ ಯೋಜನೆಯ ಕಾರ್ಯಕ್ರಮದ ಪೂಜಾ ವೇಳೆ ನಡೆದ ಘಟನೆಗೆ ಸಂಬಂಧಪಟ್ಟಂತೆ ಕೊಪ್ಪಳ ಜಿಲ್ಲಾ ಬಿಜೆಪಿ ನಿಯೋಗ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ತಮ್ಮ ವಿರುದ್ಧ ದೂರು ನೀಡಿದೆಯಲ್ಲ ಎಂಬ ಪ್ರಶ್ನೆಗೆ, ಶಿಷ್ಟಾಚಾರ ಪಾಲನೆ ಮಾಡುವಂತೆ ಕೇಳಲು ನಾನು ಹಕ್ಕುದಾರ, ಜನಪ್ರತಿನಿಧಿಯಾಗಿದ್ದೇನೆ. ಎಲ್ಲಿ ಕಾರ್ಯಕ್ರಮ ನಡೆಯಲಿದೆಯೋ ಅಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಬೇಕು. ಸೋಮಣ್ಣ ನನ್ನ ಬಳಿ ಹೇಳಿದ ಮಾತು ಅಸಹ್ಯ ಅನಿಸುತ್ತದೆ. ರೈಲ್ವೆ ಅಧಿಕಾರಿಗಳು ನನ್ನ ಮಾತನ್ನೇ ಕೇಳುವುದಿಲ್ಲ ಎಂದರು. ಮತ್ತೆ ಇನ್ನು ಏಕೆ ಇವರು ಕೇಂದ್ರದಲ್ಲಿ ಮಂತ್ರಿಯಾಗಿರಬೇಕು. ಹಲ್ಲೆ ಯಾರು ಮಾಡಿಲ್ಲ. ಸ್ವತಃ ನಾನು ಅವರ ಬಳಿ ಮಾತನಾಡುತ್ತಾ, ನನ್ನ ಹಕ್ಕನ್ನು ಪ್ರತಿಪಾದಿಸಿದ್ದೇನೆ. ಹಿರಿಯ ನಾಯಕರು ಸೋಮಣ್ಣ. ನಿಮ್ಮ ನೇತೃತ್ವದಲ್ಲಿ ಈ ರೀತಿ ಕಾರ್ಯಕ್ರಮ ನಡೆಯುವುದು ನನಗೆ ನೋವಾಗುತ್ತದೆ ಎಂದು ಹೇಳಿದೆ ಇದು ತಪ್ಪಾ? ಯಾರೇ ಆದರೂ ಶಿಷ್ಟಾಚಾರ ಪಾಲನೆ ಆಗಬೇಕು. ಬಿಜೆಪಿಯವರಿಗೆ ಬುದ್ಧಿ ಕಡಿಮೆ. ಬಿಜೆಪಿ ಜಿಲ್ಲಾಧ್ಯಕ್ಷನಿಗೂ ಬುದ್ಧಿ ಕಡಿಮೆ ಎಂದು ವಾಗ್ದಾಳಿ ನಡೆಸಿದರು.

