Minister Satish Jarkiholi - MLA Hitnal meets, behind-the-scenes exercises begin for KMF seat
x

ಸಚಿವ ಸತೀಶ್‌ ಜಾರಕಿಹೊಳಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್‌

ಕೆಎಂಎಫ್‌ ಅಧ್ಯಕ್ಷ ಗಾದಿಗೆ ಸಿಎಂ-ಡಿಸಿಎಂ ಫೈಟ್‌ | ಜಾರಕಿಹೊಳಿ-ಹಿಟ್ನಾಳ್‌ ಭೇಟಿ ಕೆರಳಿಸಿದ ಕುತೂಹಲ

ʼರಾಬಕೊವಿʼ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತ ರಾಘವೇಂದ್ರ ಹಿಟ್ನಾಳ್‌ ಆಯ್ಕೆಯಾಗುವ ಮೂಲಕ ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಎಂದು ಡಿಸಿಎಂ ಬಣಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.


ರಾಜ್ಯ ರಾಜಕೀಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವಿನ ವೈಮನಸ್ಸು ತಾರಕಕ್ಕೇರಿದೆ. ತೀವ್ರ ಕಗ್ಗಂಟಾಗಿದ್ದ ರಾಬಕೊವಿ(ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ) ಒಕ್ಕೂಟದ ಅಧ್ಯಕ್ಷರಾಗಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್‌ ಅವಿರೋಧವಾಗಿ ಆಯ್ಕೆಯಾಗಿದ್ದು, ಇದೀಗ ಕೆಎಂಎಫ್‌ ಅಧ್ಯಕ್ಷ ಗಾದಿಯ ಮೇಲೂ ಕಣ್ಣಿಟ್ಟಿರುವುದು ಸಿಎಂ ವರ್ಸಸ್‌ ಡಿಕೆಶಿ ಸಮರ ಎಂದೇ ಬಣ್ಣಿಸಲಾಗಿದೆ.

ಬಮೂಲ್‌ ಅಧ್ಯಕ್ಷರಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಸೋದರ ಡಿ.ಕೆ.ಸುರೇಶ್‌ ಅವಿರೋಧವಾಗಿ ಆಯ್ಕೆಯಾಗಿ ಕೆಎಂಎಫ್‌ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯಲು ಪ್ರಯತ್ನಗಳನ್ನು ಆರಂಭಿಸಿರುವ ಬೆನ್ನಲ್ಲೇ ಸಿಎಂ ಆಪ್ತನ ರಂಗಪ್ರವೇಶ ತೀವ್ರ ಕುತೂಹಲ ಮೂಡಿಸಿದೆ. ‌

ಕೆಎಂಎಫ್‌ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಡಿ.ಕೆ. ಶಿವಕುಮಾರ್‌ ಅವರು ಸೋದರನನ್ನು ಅಖಾಡಕ್ಕೆ ಇಳಿಸಿ, ಬಮೂಲ್‌ ಅಧ್ಯಕ್ಷರನ್ನಾಗಿ ಮಾಡಿದ್ದರು. ‌ಜಿಲ್ಲಾ ಒಕ್ಕೂಟದಿಂದ ಮಹಾಒಕ್ಕೂಟಕ್ಕೆ ಕಳುಹಿಸುವ ಶಿವಕುಮಾರ್‌ ರಣತಂತ್ರ ಅರಿತ ಸಿಎಂ ಸಿದ್ದರಾಮಯ್ಯ ಅವರು ಠಕ್ಕರ್‌ ನೀಡಲೆಂದೇ ರಾಬಕೊವಿ ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಹಿಟ್ನಾಳ್‌ ಅವರನ್ನು ಅವಿರೋಧವಾಗಿ ಆಯ್ಕೆಯಾಗುವಂತೆ ನೋಡಿಕೊಂಡರು.

ತಮ್ಮ ಪರಮಾಸ್ತ ಭೀಮಾನಾಯ್ಕ್‌ ಪ್ರಬಲ ಆಕಾಂಕ್ಷಿಯಾಗಿದ್ದರೂ ಈ ಹಿಂದೆ ಕೆಎಂಎಫ್‌ ಅಧ್ಯಕ್ಷ ಸ್ಥಾನ ಅಲಂಕರಿಸಿದ ಹಿನ್ನೆಲೆಯಲ್ಲಿ ಅವರನ್ನು ರಾಬಕೊವಿ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಿದ್ದರು.

ಸಹಕಾರ ರಂಗದ ಮೇಲೆ ಪ್ರಾಬಲ್ಯ ಸಾಧಿಸುವ ಡಿಕೆಶಿ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಈ ತೆರೆಮರೆಯ ಕಸರತ್ತು ಮತ್ತೊಮ್ಮೆ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಚಿಗುರೊಡೆಯುವಂತೆ ಮಾಡಿದೆ.

ಕುತೂಹಲ ಕೆರಳಿಸಿದ ಹಿಟ್ನಾಳ್‌- ಜಾರಕಿಹೊಳಿ ಭೇಟಿ

ʼರಾಬಕೊವಿʼ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್‌ ಅವಿರೋಧವಾಗಿ ಆಯ್ಕೆಯಾದ ಬಳಿಕ ಕೆಎಂಎಫ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಗುರುತಿಸಿಕೊಳ್ಳುತ್ತಿರುವುದು ಡಿಸಿಎಂ ಬಣಕ್ಕೆ ತಿರುಗೇಟು ನೀಡುವಂತಿದೆ.

ಕೆಎಂಎಫ್‌ ಅಧ್ಯಕ್ಷ ಗಾದಿಗಾಗಿ ತೆರೆಮರೆಯಲ್ಲಿ ತಂತ್ರ ಮಾಡುತ್ತಿರುವ ರಾಘವೇಂದ್ರ ಹಿಟ್ನಾಳ್‌ ಅವರು ಬುಧವಾರ ಲೋಕೋಪಯೋಗಿ ಸಚಿವ ಸತೀಶ್‌ ಜಾರಕೊಹೊಳಿ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ರಾಜಕೀಯ ಮಹತ್ವ ಪಡೆದುಕೊಂಡಿದೆ.

ಶಾಸಕ ರಾಘವೇಂದ್ರ ಹಿಟ್ನಾಳ್‌ ಅವರಿಗೆ ಮಾಜಿ ಸಚಿವ ಬಿ.ನಾಗೇಂದ್ರ ಸೇರಿದಂತೆ ಬಳ್ಳಾರಿ ಕೆಲ ಶಾಸಕರು ಹಾಗೂ ಸಿಎಂ ಅವರು ಬೆಂಬಲ ವ್ಯಕ್ತಪಡಿಸಿರುವುದು ಡಿ.ಕೆ.ಶಿವಕುಮಾರ್‌ ಆತಂಕಕ್ಕೆ ಕಾರಣವಾಗಿದೆ. ಕೆಎಂಎಫ್‌ ಅಧ್ಯಕ್ಷ ಸ್ಥಾನ ಚುಕ್ಕಾಣಿ ಹಿಡಿಯುವ ಸಂಬಂಧವೂ ಸತೀಶ್‌ ಜಾರಕಿಹೊಳಿ ಜತೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್‌ ಈಗಾಗಲೇ ಒಂದು ಬಾರಿ ಕೆಎಂಎಫ್‌ ಅಧ್ಯಕ್ಷ ಸ್ಥಾನ ಅಲಂಕರಿಸಿರುವುದರಿಂದ ಅವರ ಕೋರಿಕೆಯನ್ನು ಸಿಎಂ ಪರಿಗಣಿಸಿಲ್ಲ. ಬದಲಿಗೆ ಹೈದರಾಬಾದ್‌ ಕರ್ನಾಟಕ ಭಾಗದ ರಾಘವೇಂದ್ರ ಹಿಟ್ನಾಳ್‌ ಅವರನ್ನು ಕೆಎಂಎಫ್‌ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಅವರು ತಾನೂ ಕೂಡ ಕೆಎಂಎಫ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿರುವುದು ಪೈಫೋಟಿ ಹೆಚ್ಚಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆಯೇ ಕೆಎಂಎಫ್‌ ಅಧ್ಯಕ್ಷರನ್ನಾಗಿ ಮಾಡುವ ಭರವಸೆ ನೀಡಿದ್ದರು. ಆದರೆ ಇದೀಗ ಡಿ.ಕೆ. ಸುರೇಶ್‌ ಅವರನ್ನು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ಸಿಎಂ ಕೊಟ್ಟ ಮಾತಿನಿಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದರು.

Read More
Next Story