
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ
ಬಿಗ್‌ಬಾಸ್ ಮರು ಆರಂಭ, ಡಿ.ಕೆ. ಶಿವಕುಮಾರ್ ನಡೆಗೆ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶಾಸನಬದ್ಧ ಸಂಸ್ಥೆಯಾಗಿರುವುದರಿಂದ ಅವರ ಕೆಲಸಗಳಿಗೆ ಅಡ್ಡಿಪಡಿಸಬಾರದು ಎಂದು ಹೇಳುವ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಟಾಂಗ್ ನೀಡಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಒಪ್ಪಿತ ಪರವಾನಗಿ ಪಡೆಯದೆ, ನಿಯಮ ಉಲ್ಲಂಘನೆ ಸರಿಪಡಿಸಿಕೊಳ್ಳದೆ ಕಾರ್ಯನಿರ್ವಹಿಸಲು ಜಾಲಿವುಡ್ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಮತ್ತೆ ಕಾಲಾವಕಾಶ ನೀಡಿರುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳುವ ಮೂಲಕ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮಾಲಿನ್ಯ ನಿಯಂತ್ರಣ ಮಂಡಳಿಯು ನಿಯಮ ಉಲ್ಲಂಘನೆಗಾಗಿ ಜಾಲಿವುಡ್‌ಗೆ ಬೀಗ ಹಾಕಿದೆ. ಆದರೆ, ಡಿಸಿಎಂ ಅನುಮತಿ ನೀಡಿದ್ದಾರೆಂದು ವರದಿಯಾಗಿದೆ. ಜಾಲಿವುಡ್ ಸಂಸ್ಥೆಯು ಅಗತ್ಯ ಪರವಾನಗಿ ಪಡೆಯುವವರೆಗೂ ಅವಕಾಶ ನೀಡಬಾರದಿತ್ತು," ಎಂದು ಸ್ಪಷ್ಟಪಡಿಸಿದರು. "ಮಂಡಳಿಯು ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು, ಅವರ ಕೆಲಸಗಳಿಗೆ ಯಾರೂ ಅಡ್ಡಿಪಡಿಸಬಾರದು" ಎಂದು ಅವರು ಹೇಳಿದರು.
ಏನಿದು ಪ್ರಕರಣ?
ಜಾಲಿವುಡ್ ಪಾರ್ಕ್ ವಿರುದ್ಧ ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದವು. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (KSPCB) ಅಗತ್ಯ ಅನುಮತಿ ಪಡೆಯದಿರುವುದು, ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು, ತ್ಯಾಜ್ಯ ನೀರನ್ನು ನೇರವಾಗಿ ಪರಿಸರಕ್ಕೆ ಬಿಡುವುದು ಹಾಗೂ ಬಿಎಂಆರ್ಡಿಎಯಿಂದ ಕಟ್ಟಡ ನಕ್ಷೆ ಅನುಮೋದನೆ ಪಡೆಯದಿರುವುದು ಪ್ರಮುಖ ಆರೋಪಗಳಾಗಿವೆ.
ಈ ಹಿನ್ನೆಲೆಯಲ್ಲಿ, KSPCB ನೋಟಿಸ್ ನೀಡಿತ್ತು. ಇದರ ಬೆನ್ನಲ್ಲೇ ರಾಮನಗರ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡವು ಪಾರ್ಕ್‌ಗೆ ಬೀಗ ಹಾಕಿ, ಬಿಗ್ ಬಾಸ್ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸೂಚಿಸಿತ್ತು.
ಮಂಡಳಿಯ ಸ್ಪಷ್ಟನೆ
ಈ ಬಗ್ಗೆ ಬುಧವಾರ ಸ್ಪಷ್ಟನೆ ನೀಡಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ, "ಜಾಲಿವುಡ್‌ಗೆ ಬೀಗ ಹಾಕಿರುವುದಕ್ಕೂ, ಬಿಗ್ ಬಾಸ್ ಕಾರ್ಯಕ್ರಮಕ್ಕೂ ನೇರ ಸಂಬಂಧವಿಲ್ಲ" ಎಂದು ತಿಳಿಸಿದೆ. "ಸಂಸ್ಥೆಯು ಒಪ್ಪಿತ ಪರವಾನಗಿ ಪಡೆಯದ ಕಾರಣ ಎರಡು ವರ್ಷಗಳ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಹಲವು ಬಾರಿ ಕಾಲಾವಕಾಶ ನೀಡಿದರೂ ನ್ಯೂನತೆ ಸರಿಪಡಿಸಿಕೊಂಡಿಲ್ಲ. ಇದು ಮಂಡಳಿಯ 26 ಸದಸ್ಯರು ಸೇರಿ ಕೈಗೊಂಡ ನಿರ್ಣಯವೇ ಹೊರತು, ಏಕಾಏಕಿ ತೆಗೆದುಕೊಂಡ ಕ್ರಮವಲ್ಲ" ಎಂದು ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ವಿವರಿಸಿದ್ದರು. 30 ಎಕರೆ ವಿಸ್ತೀರ್ಣದ ಜಾಲಿವುಡ್‌ನಲ್ಲಿ ಬಿಗ್‌ಬಾಸ್ ಶೂಟಿಂಗ್ ನಡೆಯುವ ಸ್ಥಳ ಕೇವಲ ಒಂದೂವರೆ ಎಕರೆ ಮಾತ್ರವಿದ್ದು, ಮಂಡಳಿಯ ಕ್ರಮ ಇಡೀ ಪಾರ್ಕ್‌ಗೆ ಸಂಬಂಧಿಸಿದೆ ಎಂದು ಸ್ಪಷ್ಟಪಡಿಸಲಾಗಿತ್ತು.