
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ
ಜನ ಗಣ ಮನ ವಿವಾದ|ಕೇಶವಕೃಪಾ ಸುಳ್ಳು ಹರಡುವ ಕಾರ್ಖಾನೆ; ಪ್ರಿಯಾಂಕ್ ಖರ್ಗೆ ಕಿಡಿ
ಜನ ಗಣ ಮನ ಗೀತೆ ದೇಶಕ್ಕಾಗಿ ಬರೆದಿರುವ ಗೀತೆ. ಇಟ್ಸ್ ನಾಟ್ ಫಾರ್ ಕಿಂಗ್ ಜಾರ್ಜ್ 5, 4 ಆರ್ ಎನಿ ಅದರ್ ಜಾರ್ಜ್' ಎಂದು ರವೀಂದ್ರನಾಥ್ ಠಾಕೂರ್ ಅವರು 1937-39ರಲ್ಲೇ ಹೇಳಿದ್ದರು. ಬಿಜೆಪಿಗರಿಗೆ ಇದರ ಜ್ಞಾನವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
'ಜನ ಗಣ ಮನ' ಗೀತೆಯ ಕುರಿತು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೀಡಿದ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಆರ್‌ಎಸ್‌ಎಸ್‌ನವರಿಗೆ ದೇಶದ ಇತಿಹಾಸ ಗೊತ್ತಿಲ್ಲ, ಎಲ್ಲ ಬಿಜೆಪಿ ನಾಯಕರು ಮತ್ತು ಆರ್‌ಎಸ್‌ಎಸ್ ಸ್ವಯಂಸೇವಕರು ದಯವಿಟ್ಟು ಸಂಘ ಪರಿವಾರದ ಮುಖವಾಣಿ 'ಆರ್ಗನೈಸರ್' ಮ್ಯಾಗಜೀನ್‌ನಲ್ಲಿ ಪ್ರಕಟವಾಗಿರುವ ಲೇಖನಗಳನ್ನು ಓದಿ. ನೀವೆಂತಹ ದೊಡ್ಡ ದೇಶದ್ರೋಹಿಗಳು ಎಂಬುದು ಗೊತ್ತಾಗುತ್ತದೆ. ನಿಮ್ಮ ಇತಿಹಾಸವೂ ತಿಳಿಯುತ್ತದೆ ಎಂದು ಕಿಡಿಕಾರಿದ್ದಾರೆ.
"ನೀವು ಸಂವಿಧಾನಕ್ಕೂ ಗೌರವ ಕೊಟ್ಟಿಲ್ಲ. ನಮ್ಮ ರಾಷ್ಟ್ರ ಧ್ವಜ, ರಾಷ್ಟ್ರಗೀತೆಗೂ ಗೌರವ ಕೊಟ್ಟಿಲ್ಲ. ರಾಷ್ಟ್ರಗೀತೆಯನ್ನು ಕಿಂಗ್ ಜಾರ್ಜ್ ಅವರಿಗಾಗಿ ಬರೆದಿದ್ದಾರೆ ಎಂಬ ನಿಮ್ಮ ಅಜ್ಞಾನವೇ ನಿಮ್ಮ ಇತಿಹಾಸ ಹೇಳುತ್ತದೆ. ರವೀಂದ್ರನಾಥ್ ಠಾಕೂರ್ ಅವರೇ 1937-39ರಲ್ಲಿ ರಾಷ್ಟ್ರಗೀತೆಯ ಕುರಿತು ಹೇಳಿದ್ದರು. 'ಇದು ನಮ್ಮ ದೇಶಕ್ಕಾಗಿ ಬರೆದಿರುವ ಗೀತೆ. ಇಟ್ಸ್ ನಾಟ್ ಫಾರ್ ಕಿಂಗ್ ಜಾರ್ಜ್ 5, 4 ಆರ್ ಎನಿ ಅದರ್ ಜಾರ್ಜ್' ಅಂತ ಹೇಳಿದ್ದರು" ಎಂದು ತಿರುಗೇಟು ನೀಡಿದ್ದಾರೆ.
"ಬಿಜೆಪಿ, ಆರ್‌ಎಸ್‌ಎಸ್‌ನವರು ಓದಲ್ಲ, ಮಾಡಲ್ಲ. ಸುಮ್ಮನೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳಿನ ಕಾರ್ಖಾನೆ ನಡೆಸಿದ್ದಾರೆ. ಕೇಶವಕೃಪಾ ಹಾಗೂ ಶಾಖೆಗಳಲ್ಲಿ ಹಬ್ಬಿಸಿರುವ ಸುಳ್ಳನ್ನೇ ಇವರು ಇತಿಹಾಸ ಅಂದುಕೊಂಡಿದ್ದಾರೆ. ನಾವು ಇಲ್ಲಿಯವರೆಗೆ ಕೇಳಿರುವ ಪ್ರಶ್ನೆಗಳು ಅವರದೇ ಮ್ಯಾಗಜೀನ್‌ನಲ್ಲಿ ಬಂದಿದೆ. ಹಿರಿಯರ ಲೇಖನಗಳನ್ನು ಓದಿ, ನಿಮಗೆ ಗೊತ್ತಾಗುತ್ತೆ. ನೀವು ಯಾವ ರೀತಿ ನಡೆದುಕೊಂಡಿದ್ದೀರಾ ಎಂಬುದು ತಿಳಿಯಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

