ಕಲಬುರಗಿ| ಪ್ರವಾಹ ಪೀಡಿತ ಚಿತ್ತಾಪುರ, ಕಾಳಗಿಗೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ
x

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಕಲಬುರಗಿ| ಪ್ರವಾಹ ಪೀಡಿತ ಚಿತ್ತಾಪುರ, ಕಾಳಗಿಗೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ

ಚಿತ್ತಾಪುರ ತಾಲೂಕಿನಲ್ಲಿ ಮಳೆಯಿಂದ ಪ್ರವಾಹಕ್ಕೀಡಾಗಿರುವ ಗ್ರಾಮಗಳಿಗೆ ಭೇಟಿ ನೀಡಿದ ವಸ್ತುಸ್ಥಿತಿ ಕುರಿತು ಸಮಗ್ರ ವರದಿಯನ್ನು ತಯಾರಿಸಿ ಒಂದು ವಾರದೊಳಗೆ ಸಲ್ಲಿಸುವಂತೆ ಜಿಪಂ ಸಿಇಒ ಭಂವರ್ ಸಿಂಗ್ ಮೀನಾ ಅವರಿಗೆ ಸಚಿವರು ಸೂಚಿಸಿದರು.


Click the Play button to hear this message in audio format

ನಿರಂತರ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ಕಲಬುರಗಿ ಜಿಲ್ಲೆಯ ಚಿತ್ತಾಪುರ ಹಾಗೂ ಕಾಳಗಿ ತಾಲೂಕಿನ ಗ್ರಾಮಗಳಿಗೆ ಶನಿವಾರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು. ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿದ ಸಚಿವರು, ಶೀಘ್ರವೇ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಳೆ ಹೆಬ್ಬಾಳ ಗ್ರಾಮಸ್ಥರ ಬೇಡಿಕೆಗೆ ಸ್ಪಂದನೆ

ಚಿತ್ತಾಪುರ ತಾಲೂಕಿನ ಹಳೆ ಹೆಬ್ಬಾಳ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಮಳೆಯಿಂದ ಹಾನಿಯಾದ ಮನೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಮ್ಮ ಗ್ರಾಮ ಸ್ಥಳಾಂತರಿಸುವಂತೆ ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದರು. ಗ್ರಾಮಸ್ಥರ ಈ ಬೇಡಿಕೆಗೆ ಸ್ಪಂದಿಸಿದ ಸಚಿವರು, ಮಳೆ ತುಸು ಕಡಿಮೆಯಾದ ನಂತರ ಮತ್ತೆ ಗ್ರಾಮಕ್ಕೆ ಭೇಟಿ ನೀಡಿ ಬೇಡಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಗ್ರಾಮ ಸ್ಥಳಾಂತರಕ್ಕೆ ಸರ್ಕಾರ ಸಿದ್ಧವಿದೆ. ಎಷ್ಟು ಕುಟುಂಬಗಳು ಸ್ಥಳಾಂತರಗೊಳ್ಳಬೇಕು ಎನ್ನುವ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು. ಅಲ್ಲದೆ, ಹಾನಿಗೊಳಗಾದ ಮನೆಗಳ ಸರ್ವೆ ನಡೆಸಿ ತಕ್ಷಣ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮ ಸಭೆ ನಡೆಸುವಂತೆ ಸೂಚನೆ

ಈ ನಡುವೆ ಗ್ರಾಮಸ್ಥರೊಂದಿಗೆ ಗ್ರಾಮಸಭೆ ನಡೆಸುವಂತೆ ಸ್ಥಳದಲ್ಲಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹಾಗೂ ಎಸಿ ಸಾಹಿತ್ಯ ಅವರಿಗೆ ಸೂಚಿಸಿದರು. ಗ್ರಾಮಸ್ಥರಿಗೆ ಬೇಕಾಗುವ ಸೌಲಭ್ಯ ಒದಗಿಸುವಂತೆ ಕಾಳಗಿ ತಹಶೀಲ್ದಾರ್‌ಗೆ ನಿರ್ದೇಶನ ನೀಡಿದರು.

ಕಾಳಜಿ ಕೇಂದ್ರದಲ್ಲಿ ಆಶ್ರಯ

ನಿರಂತರ ಮಳೆಯಿಂದ ಬೆಣ್ಣೆತೊರೆ ಜಲಾಶಯದಿಂದ ನೀರು ಹರಿಬಿಟ್ಟಿದ್ದರಿಂದ ಹಳೆ ಹೆಬ್ಬಾಳ ಗ್ರಾಮಕ್ಕೆ ನೀರು ನುಗ್ಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರನ್ನು ತಾತ್ಕಾಲಿಕವಾಗಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ, ಊಟ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಲಘಾಣ ಗ್ರಾಮಕ್ಕೆ ಭೇಟಿ, ವರದಿ ನೀಡಲು ಸೂಚನೆ

ಮಳೆ ಹಾಗೂ ಬೆಣ್ಣೆತೊರೆ ನದಿ ನೀರಿನ ಪ್ರವಾಹಕ್ಕೆ ತುತ್ತಾಗಿರುವ ಕಾಳಗಿ ತಾಲೂಕಿನ ಮಲಘಾಣ ಗ್ರಾಮಕ್ಕೂ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿದರು.

ಕಾಳಗಿ ಹಾಗೂ ಚಿತ್ತಾಪುರ ತಾಲೂಕಿನ ಮಳೆ ಹಾಗೂ ಪ್ರವಾಹಕ್ಕೀಡಾಗಿರುವ ಗ್ರಾಮಗಳ ವಸ್ತುಸ್ಥಿತಿ ಕುರಿತು ಸಮಗ್ರ ವರದಿ ತಯಾರಿಸಿ ಒಂದು ವಾರದೊಳಗೆ ಸಲ್ಲಿಸುವಂತೆ ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ ಅವರಿಗೆ ಸಚಿವರು ಸೂಚಿಸಿದರು.

ಬೆಳೆ ಹಾನಿ ಪರಿಶೀಲನೆ ಮತ್ತು ಸಮೀಕ್ಷೆಗೆ ಆದೇಶ

ಗ್ರಾಮದ ಬಳಿಯ ಜಮೀನೊಂದರಲ್ಲಿ ಹಾನಿಗೊಳಗಾದ ಕಬ್ಬು ಬೆಳೆಯನ್ನು ವೀಕ್ಷಿಸಿದ ಸಚಿವರು, ತಾಲೂಕಿನಲ್ಲಿ ಹಾನಿಗೊಳಗಾದ ಕೃಷಿ ಬೆಳೆಗಳ ಕೂಡಲೇ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಅವರಿಗೆ ಸೂಚನೆ ನೀಡಿದರು.

Read More
Next Story